ADVERTISEMENT

ನೀರಿನ ಸಮಸ್ಯೆ; ಕೊಳವೆಬಾವಿ ಕೊರೆಯಿಸಿ

ಪ್ರಗತಿ ಪರಿಶೀಲನಾ ಸಭೆ; ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಪುಷ್ಪಾ ರಾಜೇಶ್ ಸೂಚನೆ

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2016, 5:26 IST
Last Updated 28 ಡಿಸೆಂಬರ್ 2016, 5:26 IST
ಸೋಮವಾರಪೇಟೆಯಲ್ಲಿ ಮಂಗಳವಾರ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಂದ ಮಾಹಿತಿ ಅಧ್ಯಕ್ಷೆ ಪುಷ್ಪಾ ಮಾಹಿತಿ ಪಡೆಯುತ್ತಿರುವುದು
ಸೋಮವಾರಪೇಟೆಯಲ್ಲಿ ಮಂಗಳವಾರ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಂದ ಮಾಹಿತಿ ಅಧ್ಯಕ್ಷೆ ಪುಷ್ಪಾ ಮಾಹಿತಿ ಪಡೆಯುತ್ತಿರುವುದು   

ಸೋಮವಾರಪೇಟೆ: ಜಿಲ್ಲೆಯಲ್ಲಿ ಗ್ರಾಮೀಣ ಭಾಗದಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ತೀವ್ರ  ಸಮಸ್ಯೆ ಇದ್ದಲ್ಲಿ ಜಿಲ್ಲಾಧಿಕಾರಿ ಅನುಮತಿ ಪಡೆದು ಕೊಳವೆ ಬಾವಿ ಕೊರೆಯಿಸಬೇಕು ಎಂದು ಅಧಿಕಾರಿಗಳಿಗೆ ತಾ. ಪಂ. ಅಧ್ಯಕ್ಷೆ ಪುಷ್ಪಾ ರಾಜೇಶ್ ಸೂಚನೆ ನೀಡಿದರು.

ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿದ್ದ ಅವರು, ಈಗ ಜಿಲ್ಲೆಯಲ್ಲಿ ಕೊಳವೆ ಬಾವಿ ಕೊರೆಯಿಸಲು ನಿರ್ಬಂಧವಿದೆ. ಅಗತ್ಯ ಇರುವ ಕಡೆ ಕೊಳವೆ ಬಾವಿ ತೆಗೆಯುವ ಸಂದರ್ಭ ಜಿಲ್ಲಾಧಿಕಾರಿ ಅನುಮತಿ ಪಡೆಯಬೇಕಿದೆ ಎಂದು ಮಾಹಿತಿ ನೀಡಿದರು.

ತೋಳೂರು ಶೆಟ್ಟಳ್ಳಿಯ ಸುಭಾಷ್ ನಗರದಲ್ಲಿ ಕೊಳವೆಬಾವಿಯಲ್ಲಿ ನೀರು ಬರುತ್ತಿಲ್ಲ. ಈ ತಿಂಗಳ ಅಂತ್ಯದ ಒಳಗೆ  ಬದಲಿ ವ್ಯವಸ್ಥೆಯನ್ನು ಮಾಡಬೇಕು ಎಂದು ನೀರಾವರಿ ಇಲಾಖೆ ಎಂಜಿನಿಯರ್ ಅವರಿಗೆ ಸೂಚಿಸಿದರು.

ಇದಕ್ಕೆ ಎಂಜಿನಿಯರ್ ರಮೇಶ್, ಕಾರ್ಯಪಡೆಯಲ್ಲಿ ಕುಡಿಯುವ ನೀರಿನ ಯೋಜನೆಗೆ ₹ 45 ಲಕ್ಷ ಅನುದಾನ ಬಂದಿದೆ. ಹಲವು ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದು ಸಭೆಗೆ ತಿಳಿಸಿದರು.

ಜಾನುವಾರುಗಳ ಸಾಗಾಣಿಕೆ ಕುರಿತು ದೂರು ಬಂದಿದ್ದು, ಇದನ್ನು ತಡೆಯಲು ಗಡಿ ಭಾಗಗಳಲ್ಲಿ ತಪಾಸಣೆಗೇಟ್ ಅಳವಡಿಸಲು ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಇದನ್ನು ಕಾರ್ಯರೂಪಕ್ಕೆ ತರಲು ಕ್ರಮಕೈಗೊಳ್ಳಲಾಗಿದೆ ಎಂದು ಪಶುವೈದ್ಯ ಇಲಾಖೆ ಸಹಾಯಕ ನಿರ್ದೇಶಕ ಡಾ. ಚಿಟ್ಟಿಯಪ್ಪ ಹೇಳಿದರು.

ಸಣ್ಣ ನೀರಾವರಿ ಇಲಾಖೆ 2016-17ನೇ ಸಾಲಿನಲ್ಲಿ ತಾಲ್ಲೂಕಿನ 19 ಕೆರೆಗಳ ಪುನಶ್ಚೇತನಕ್ಕೆ ₹ 2.82ಕೋಟಿ ಅನುದಾನ ಬಿಡುಗಡೆಯಾಗಿದ್ದು, ಈಗಾಗಲೇ 8 ಕೆರೆಗಳ ಕಾಮಗಾರಿ ಮುಗಿದಿದೆ ಎಂದು ಅಧಿಕಾರಿ ಸಭೆಗೆ ತಿಳಿಸಿದರು.

ಹಣ ಬಿಡುಗಡೆ ಆಗುತ್ತಿದ್ದರೂ ರಸ್ತೆ ಬದಿಯ ಕಾಡು ತೆರವುಗೊಳಿಸಲು ಏಕೆ ಮುಂದಾಗುತ್ತಿಲ್ಲ ಎಂದು ತಾ.ಪಂ ಉಪಾಧ್ಯಕ್ಷ ಅಭಿಮನ್ಯುಕುಮಾರ್ ಲೋಕೋಪಯೋಗಿ ಇಲಾಖೆ ಎಂಜಿನಿಯರ್ ಅವರಿಗೆ ಪ್ರಶ್ನಿಸಿದರು.

ಇದಕ್ಕೆ ಎಂಜಿನಿಯರ್ ಅವರು, ಈಗ ಅರಣ್ಯ ಮತ್ತು ಪೊಲೀಸ್ ಇಲಾಖೆ ಸಹಕಾರ ಕೋರಿದ್ದು, ಸ್ಪಂದಿಸಿದರೆ ಕೆಲಸ ಆರಂಭವಾಗಲಿದೆ ಎಂದರು.
ಕೆಲವೆಡೆ  ಲೋಕೋಪಯೋಗಿ ಇಲಾಖೆಗೆ ಸೇರಿದ ರಸ್ತೆಗೆ ಬೇಲಿ ಹಾಕುವ ಮೂಲಕ ಒತ್ತುವರಿ ಮಾಡುತ್ತಿದ್ದಾರೆ ಎಂದು ತಾಲ್ಲೂಕು ಪಂಚಾಯಿತಿ  ಇಒ ಪಿ. ಚಂದ್ರಶೇಖರ್ ಹೇಳಿದರು.

ಪ್ರಗತಿ ಪರಿಶೀಲನ ಸಭೆಯಲ್ಲಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಧರ್ಮಪ್ಪ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.