ADVERTISEMENT

ಪೂರ್ಣಗೊಳ್ಳದ ಸೇತುವೆ ಕಾಮಗಾರಿ

ಬೇತು– ಬಲಮುರಿ ಗ್ರಾಮಗಳ ನೇರ ಸಂಪರ್ಕಕ್ಕೆ ಅಡ್ಡಿ

​ಪ್ರಜಾವಾಣಿ ವಾರ್ತೆ
Published 5 ಡಿಸೆಂಬರ್ 2016, 9:45 IST
Last Updated 5 ಡಿಸೆಂಬರ್ 2016, 9:45 IST

ನಾಪೋಕ್ಲು:  ಇಲ್ಲಿನ ಬೇತು, ಬಲಮುರಿ, ಪಾರಾಣೆ ಗ್ರಾಮಗಳ ನಡುವಿನ ಸಂಪರ್ಕ ಕೊಂಡಿಯಾದ ಮಕ್ಕಿಕಡು ಸೇತುವೆ ಕಾಮಗಾರಿ ಸ್ಥಗಿತಗೊಂಡಿದ್ದು, ಈ ಭಾಗದ ಜನರ ಬಹುಜ್ದಿಞನದ ಕನಸು ನನೆಗುದಿಗೆ ಬಿದ್ದಿದೆ.

ಇಲ್ಲಿನ ಬೇತು ಗ್ರಾಮ ಹಾಗೂ ಬಲಮುರಿ ಗ್ರಾಮಗಳ ನಡುವೆ ಕಕ್ಕಬ್ಬೆ ಹೊಳೆ ಹರಿಯುತ್ತಿದ್ದು, ಸೇತುವೆ ಇಲ್ಲದಿ ರುವುದರಿಂದ ಎರಡೂ ಗ್ರಾಮಗಳ ನಡುವಿನ ಸಂಪರ್ಕಕ್ಕೆ ಅಡ್ಡಿಯಾಗಿದೆ. ಇದರಿಂದಾಗಿ ಸ್ಥಳೀಯರು 10. ಕಿ.ಮೀ ಬಳಸಿ ನಾಪೋಕ್ಲು ತಲುಪಬೇಕಾಗಿದೆ.

ಮಾಜಿ ಸಂಸದೆ ಹೇಮಮಾಲಿನಿ ಅವರ ಅನುದಾನ ₹20 ಲಕ್ಷ ವೆಚ್ಚದಲ್ಲಿ ಮೂರು ವರ್ಷದ ಹಿಂದೆ ಮಕ್ಕಿಕಡು ಬಳಿ ಸೇತುವೆ ನಿರ್ಮಾಣ ಕಾಮಗಾರಿ ಆರಂಭಿಸಲಾಯಿತು. ಆದರೆ, ಅನುದಾನದ ಕೊರತೆಯಿಂದ, ಒಂದೂ ವರೆ ವರ್ಷದ ಹಿಂದೆ ಗುತ್ತಿಗೆದಾರರು ಕಾಮಗಾರಿಯನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

‘ಈ ಭಾಗದಲ್ಲಿ ಸೇತುವೆ ನಿರ್ಮಾಣ ಸೇರಿದಂತೆ ವಿವಿಧ ಅಭಿವೃದ್ಧಿ ಕಾಮಗಾರಿಗಳೂ ನಡೆಯಬೇಕಿದೆ. ಬೇತು ಗ್ರಾಮದಲ್ಲಿ ಪ್ರಸಿದ್ಧ ಮಕ್ಕಿ ಶಾಸ್ತಾವು ದೇವಾಲಯವಿದ್ದು ಪಟ್ಟಣದಿಂದ ದೇವಾಲಯದವರೆಗೆ ರಸ್ತೆ ಸದ್ಯದಲ್ಲಿ ವಿಸ್ತರಣೆಗೊಳ್ಳಲಿದೆ. ದೇವಾಲಯದಿಂದ ಮುಂದಕ್ಕೆ ಸೇತುವೆವರೆಗೂ ರಸ್ತೆ ನಿರ್ಮಾಣ ಆಗಬೇಕಿದೆ. ಸಮುದಾಯ ಭವನದ ಅಭಿವೃದ್ಧಿಗೂ ಪ್ರಸ್ತಾವ ಸಲ್ಲಿಸಲಾಗಿದೆ ಎಂದು ಗ್ರಾಮಸ್ಥ ಕೊಂಡಿರ ಕೃತಿ ಕಾಳಯ್ಯ ತಿಳಿಸಿದರು.

‘ಸೇತುವೆಯ ಕೊನೆಯ ಭಾಗದ ಸ್ಲಾಬ್‌ ನಿರ್ಮಾಣ ಹಾಗೂ ತಡೆಗೋಡೆ ನಿರ್ಮಾಣ ಕಾರ್ಯ ಬಾಕಿ ಉಳಿದಿದ್ದು ಸಂಪರ್ಕ ಗ್ರಾಮಗಳ ನಡುವೆ ಕಲ್ಪಿಸಲು ಪ್ರಯತ್ನ ಮುಂದುವರಿದಿದೆ’ ಎಂದು ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಕಾಳೇಯಂಡ ಸಾಬಾ ತಿಮ್ಮಯ್ಯ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.