ADVERTISEMENT

ಫೆ. 7ರಿಂದ ಲಸಿಕಾ ಅಭಿಯಾನ

9 ತಿಂಗಳಿಂದ 15 ವರ್ಷದೊಳಗಿನ ಮಕ್ಕಳಿಗೆ ದಡಾರ-ರುಬೆಲ್ಲಾ ಲಸಿಕೆ

​ಪ್ರಜಾವಾಣಿ ವಾರ್ತೆ
Published 5 ಜನವರಿ 2017, 9:52 IST
Last Updated 5 ಜನವರಿ 2017, 9:52 IST

ಮಡಿಕೇರಿ: ದಡಾರ- ರುಬೆಲ್ಲಾ ಲಸಿಕೆ ಹಾಕುವ ಅಭಿಯಾನಕ್ಕೆ ಜಾಗೃತಿ ಮೂಡಿಸಲು ಕಾರ್ಯಕ್ರಮ ಆಯೋಜಿಸು ವಂತೆ ಜಿಲ್ಲಾಧಿಕಾರಿ ರಿಚರ್ಡ್ ವಿನ್ಸೆಂಟ್ ಡಿಸೋಜ ಅವರು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗೆ ನಿರ್ದೇಶನ ನೀಡಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ದಡಾರ– ರುಬೆಲ್ಲಾ ಅಭಿಯಾನಕ್ಕೆ ಸಂಬಂಧಿಸಿದಂತೆ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಒಂಬತ್ತು ತಿಂಗಳ ವಯಸ್ಸಿನಿಂದ 15 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ದಡಾರ–ರುಬೆಲ್ಲಾ ಲಸಿಕೆ ಹಾಕುವ ಅಭಿಯಾನವು ಫೆ. 7ರಿಂದ ಮೂರು ವಾರಗಳ ಕಾಲ ಜರುಗುವುದರಿಂದ, ಈ ಬಗ್ಗೆ ಹೆಚ್ಚಿನ  ಜಾಗೃತಿ ಅಗತ್ಯ ಎಂದು ಹೇಳಿದರು.

ದಢಾರ–ರುಬೆಲ್ಲಾ ಅಭಿಯಾನ ಬಗ್ಗೆ ರೇಡಿಯೊ ಕಾರ್ಯಕ್ರಮ ನೀಡುವುದು, ವಿಶೇಷ ಸಂದರ್ಭಗಳಲ್ಲಿ ಹೆಚ್ಚಿನ ಜಾಗೃತಿ ಮೂಡಿಸಲು ಅಗತ್ಯ ಕ್ರಮ ಕೈಗೊಳ್ಳು ವಂತೆ ಜಿಲ್ಲಾಧಿಕಾರಿ ಸೂಚನೆ ನೀಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಒ.ಆರ್. ಶ್ರೀರಂಗಪ್ಪ ಮಾತನಾಡಿ, ದಡಾರ– ರುಬೆಲ್ಲಾ ಅಭಿಯಾನ ಬಗ್ಗೆ ಹಲವು ಮಾಹಿತಿ ನೀಡಿ ಸಾರ್ವಜನಿಕ ಶಿಕ್ಷಣ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ, ಸಮಾಜ ಕಲ್ಯಾಣ, ಕಾರ್ಮಿಕ ಇಲಾಖೆ ಗಳು ಹಾಗೂ ಸ್ಥಳೀಯ ಸಂಸ್ಥೆಗಳ ಸಹ ಕಾರ ನೀಡಬೇಕು ಎಂದು ಕೋರಿದರು.

ಆರ್‌ಸಿಎಚ್ ಅಧಿಕಾರಿ ಡಾ.ನಿಲೇಶ್ ಮಾತನಾಡಿ, ಫೆ.7ರಿಂದ ಚಾಲನೆ ಗೊಳ್ಳುವ ಈ ಅಭಿಯಾನದ ಮೊದಲನೇ ವಾರದಲ್ಲಿ ಎಲ್ಲಾ ಶಾಲೆಗಳಲ್ಲಿ ಲಸಿಕಾ ಕೇಂದ್ರಗಳನ್ನು ಆಯೋಜಿಸಬೇಕು. ನಂತರದ ಎರಡು ವಾರಗಳಲ್ಲಿ ಎಲ್ಲಾ ಆರೋಗ್ಯ ಸಂಸ್ಥೆಗಳು, ಅಂಗನವಾಡಿ ಕೇಂದ್ರಗಳು ಹಾಗೂ ಇನ್ನಿತರ ಪ್ರದೇಶ ಗಳಲ್ಲಿ ಲಸಿಕಾ ಕೇಂದ್ರ ಆರಂಭಿಸಬೇಕು ಎಂದು ತಿಳಿಸಿದರು.  

ಸಾರ್ವಜನಿಕರಿಗೆ ದಡಾರ- ರುಬೆಲ್ಲಾ ಅಭಿಯಾನ ಮಹತ್ವ ಕುರಿತು ಮಾಹಿತಿ ನೀಡಿ, 9 ತಿಂಗಳಿನಿಂದ 15 ವರ್ಷ ದೊಳಗಿನ ಮಕ್ಕಳು ಲಸಿಕೆಯಿಂದ ವಂಚಿತರಾಗದಂತೆ ಪೋಷಕರ ಮನವೊಲಿಸಿ ಈ ಕಾರ್ಯಕ್ರಮ ಯಶಸ್ವಿ ಗೊಳಿಸಲು ಸಹಕರಿಸಬೇಕು ಎಂದು ಕೋರಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಜಿ.ಆರ್.ಬಸವರಾಜು, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕಿ ಮಾಯಾದೇವಿ ಗಲಗಲಿ, ಜಿಲ್ಲಾ ಅಂಗವಿಕಲರ ಅಧಿಕಾರಿ ಜಗದೀಶ್, ಕಾರ್ಮಿಕ ಇಲಾಖೆ, ಇತರೆ ಇಲಾಖೆ ಅಧಿಕಾರಿಗಳು ತಮ್ಮ ಇಲಾಖೆ ಗಳಿಂದ ದಡಾರ– ರುಬೆಲ್ಲಾ ಅಭಿಯಾನಕ್ಕೆ ಎಲ್ಲಾ ರೀತಿಯ ಸಹಕಾರ ನೀಡಲಾಗುವುದು ಎಂದು ಮಾಹಿತಿ ನೀಡಿದರು.

ಜಿಲ್ಲಾ ಶಸ್ತ್ರ ಚಿಕಿತ್ಸಕರಾದ ಡಾ.ಅಜೀಜ್, ಡಾ.ಶಿವಕುಮಾರ್, ಡಾ.ಸದಾಶಿವಪ್ಪ, ಡಾ.ಕೃಷ್ಣಾನಂದ, ತಾಲ್ಲೂಕು ವೈದ್ಯಾಧಿಕಾರಿ, ಪ್ರಾಥಮಿಕ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು, ಶ್ರುಶ್ರೂಷಕರು, ಎ.ಎನ್.ಎಂ.ಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.