ADVERTISEMENT

‘ಬಂಡಾಯ ಶಾಸಕರಿಗೆ ಹಣದ ಆಮಿಷ, ಬೆದರಿಕೆ’

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2017, 8:58 IST
Last Updated 14 ಸೆಪ್ಟೆಂಬರ್ 2017, 8:58 IST
ವಿ.ಸೆಂಥಿಲ್‌ ಬಾಲಾಜಿ
ವಿ.ಸೆಂಥಿಲ್‌ ಬಾಲಾಜಿ   

ಮಡಿಕೇರಿ: ಎಐಎಡಿಎಂಕೆ ಪ್ರಧಾನ ಕಾರ್ಯದರ್ಶಿ ಆಗಿದ್ದ ವಿ.ಕೆ.ಶಶಿಕಲಾ ಅವರನ್ನು ವಜಾ ಮಾಡಿರುವ ಮಾಹಿತಿ ತಿಳಿದ ಟಿ.ಟಿ.ವಿ. ದಿನಕರನ್‌ ಬೆಂಬಲಿತ ತಮಿಳುನಾಡು ಶಾಸಕರು ಬುಧವಾರ ಬೆಳಿಗ್ಗೆ ಮೊದಲ ಬಾರಿಗೆ ರೆಸಾರ್ಟ್‌ನಿಂದ ಹೊರಬಂದರು.

ಮುಖ್ಯಮಂತ್ರಿ ಕೆ.ಪಳನಿಸ್ವಾಮಿ, ಉಪಮುಖ್ಯಮಂತ್ರಿ ಒ.ಪನ್ನೀರಸೆಲ್ವಂ ವಿರುದ್ಧ ಬಂಡಾಯ ಎದ್ದಿರುವ 18 ಶಾಸಕರು, ಕೊಡಗಿನ ಪ್ಯಾಡಿಂಗ್‌ಟನ್‌ ರೆಸಾರ್ಟ್‌ನಲ್ಲಿ ವಾಸ್ತವ್ಯ ಹೂಡಿದ್ದು, ಅದರಲ್ಲಿ ಮೂವರು ಮಾತ್ರ ಹೊರಬಂದಿದ್ದರು.

ಮಾಧ್ಯಮ ಪ್ರತಿನಿಧಿಗಳೊಂದಿಗೆ ಶಾಸಕ ವಿ.ಸೆಂಥಿಲ್‌ ಬಾಲಾಜಿ ಮಾತನಾಡಿ, ‘ಸರ್ಕಾರಕ್ಕೆ ಬೆಂಬಲ ನೀಡುವಂತೆ ಪೊಲೀಸರ ಮೂಲಕ ₹ 20 ಕೋಟಿ ಹಣದ ಆಮಿಷವೊಡ್ಡಲಾಗುತ್ತಿದೆ. ಪೊಲೀಸರನ್ನು ಬಿಟ್ಟು ನಮ್ಮನ್ನು ಖರೀದಿಸಲು ಪ್ರಯತ್ನಿಸಲಾಗುತ್ತಿದೆ’ ಎಂದು ಆರೋಪಿಸಿದರು.

ADVERTISEMENT

‘ಪಳನಿಸ್ವಾಮಿ ಅವರನ್ನು ಮುಖ್ಯಮಂತ್ರಿ ಹುದ್ದೆಗೇರಿಸಿದ್ದು ನಾವು. ಅವರು ಪನ್ನೀರಸೆಲ್ವಂ ಜತೆಗೂಡಿ ರಾಜ್ಯದ ಜನರಿಗೆ ದ್ರೋಹ ಎಸಗುತ್ತಿದ್ದಾರೆ. ಶಶಿಕಲಾ, ದಿನಕರನ್‌ ಅವರನ್ನು ಪಕ್ಷದ ವಿವಿಧ ಹುದ್ದೆಗಳಿಂದ ವಜಾ ಮಾಡುವ ಮೂಲಕ ಜನರ ಅಭಿಪ್ರಾಯ ಕಡೆಗಣಿಸಲಾಗಿದೆ. ಮಂಗಳವಾರ ರೆಸಾರ್ಟ್‌ಗೆ ದಾಳಿ ನಡೆಸಿದ 25 ಮಂದಿ ಪೊಲೀಸರು ನಮ್ಮನ್ನು ಬೆದರಿಸಿ ಹೋಗಿದ್ದಾರೆ’ ಎಂದು ಆರೋಪಿಸಿದರು.

ಮಾತುಕತೆಗೆ ತಾಕೀತು: ‘ಮುಖ್ಯಮಂತ್ರಿ, ಉಪಮುಖ್ಯಮಂತ್ರಿ ಜತೆಗೆ ಫೋನ್‌ನಲ್ಲಿ ಮಾತುಕತೆ ನಡೆಸುವಂತೆಯೂ ಪೊಲೀಸರು ತಾಕೀತು ಮಾಡಿದರು. ಇಲ್ಲದಿದ್ದರೆ ಪ್ರಕರಣ ದಾಖಲಿಸುವ ಎಚ್ಚರಿಕೆ ನೀಡಿದ್ದಾರೆ’ ಎಂದು ದೂರಿದರು.

‘ನಮಗೆ ಪೊಲೀಸರಿಂದ ಪ್ರಾಣ ಬೆದರಿಕೆಯಿದ್ದು, ಸೂಕ್ತ ರಕ್ಷಣೆಯ ಅಗತ್ಯವಿದೆ’ ಎಂದು ಅಲವತ್ತುಕೊಂಡರು. ‘ಸರ್ಕಾರದ ನಡೆ ಜನವಿರೋಧಿಯಾಗಿದ್ದು ಕಿತ್ತೊಗೆಯಲು ಇಲ್ಲಿಗೆ ಬಂದಿದ್ದೇವೆ. ರಾಜ್ಯದ ಜನರೂ ಸರ್ಕಾರವನ್ನು ವಜಾ ಮಾಡುವಂತೆ ಕೋರಿಕೊಳ್ಳುತ್ತಿದ್ದಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.