ADVERTISEMENT

ಬದುಕು ಬದಲಿಸಿದ ‘ಕೋಳಿ ಸಾಕಾಣಿಕೆ’

ಕೃಷಿ ಖುಷಿ

ಗುರುದರ್ಶನ್
Published 6 ಮಾರ್ಚ್ 2014, 6:31 IST
Last Updated 6 ಮಾರ್ಚ್ 2014, 6:31 IST

ಸಿದ್ದಾಪುರ: ‘ಕೃಷಿ ಎಂಬುದು ಮಳೆಯ ಜತೆ ಆಡುವ ಜೂಜು’ ಎಂಬ ಮಾತಿದೆ. ಹೌದು, ಅತಿವೃಷ್ಟಿಯಾದರೂ ಕಷ್ಟ. ಅನಾವೃಷ್ಟಿಯಾದರೂ ಕಷ್ಟ. ಸಮಪ್ರಮಾಣದಲ್ಲಿ ಅದೂ ಸಕಾಲದಲ್ಲಿ ಮಳೆ ಬಂದರೆ ಮಾತ್ರ ರೈತನ ಮೊಗದಲ್ಲಿ ಖುಷಿ ಕಾಣಲು ಸಾಧ್ಯ.

ಆದ್ದರಿಂದಲೇ, ಕೃಷಿ ಜತೆಗೆ ಉಪಕಸುಬುಗಳನ್ನು ರೂಢಿಸಿಕೊಂಡರೆ ವರ್ಷಪೂರ್ತಿ ಆದಾಯ ಕಾಣಲು ಸಾಧ್ಯ ಎಂಬುದನ್ನು ಗುಹ್ಯ ಗ್ರಾಮದ ಕೃಷಿಕ ಶಿಭು (ಚಾಕೋ) ಅವರು ಸಾಧಿಸಿ ತೋರಿಸಿದ್ದಾರೆ.

ಕಾಫಿ ತೋಟ, ಭತ್ತದ ಗದ್ದೆಗಳು ಹಾಗೂ ಕರಿಮೆಣಸಿನ ಬಳ್ಳಿಗಳಿಂದ ಸಾಕಷ್ಟು ವರಮಾನ ದೊರಕುತಿದ್ದರೂ, ಮಳೆ ಕೈಕೊಟ್ಟರೆ ಲೆಕ್ಕಾಚಾರವೆಲ್ಲವೂ ತಲೆಕೆಳಗಾಗುವ ಸಂಭವ ಜಾಸ್ತಿ ಎಂದು ಅರಿತುಕೊಂಡ ಶಿಭು ಅವರು ಕೋಳಿ ಸಾಕಾಣಿಕೆಗೆ ಮುಂದಾಗಿ ಅದರಲ್ಲಿ ಯಶಸ್ಸನ್ನು ಕಂಡಿದ್ದಾರೆ.

ಶಾಲಾ ಬಾಲಕನಾಗಿರುವಾಗಲೇ ತಂದೆಯನ್ನು ಕಳೆದುಕೊಂಡ ಶಿಭು ಅವರು, ಅಮ್ಮನ ಆಶ್ರಯದಲ್ಲಿಯೇ ಬೆಳೆದರು. ಆರಂಭದ ದಿನಗಳಲ್ಲಿ ಶಿಭು ಅವರು ಮಿನಿಲಾರಿಯನ್ನು ಬಾಡಿಗೆಗೆ ಓಡಿಸುತ್ತಿದ್ದರು. ನೆರೆಮನೆಯವರು, ಮಿತ್ರರು ಕೋಳಿ ಮಾಂಸ ಸೇರಿದಂತೆ ಇತರ ವಸ್ತುಗಳನ್ನು ಪೇಟೆಯಿಂದ ತಂದುಕೊಡುವಂತೆ ಕೇಳಿಕೊಳ್ಳುತ್ತಿದ್ದರು. ಆಗ, ಅದೇ ವ್ಯಾಪಾರವನ್ನು ನಮ್ಮ ಗ್ರಾಮದಲ್ಲಿ ಏಕೆ ಆರಂಭಿಸಬಾರದು ಎಂಬ ಯೋಚನೆ ಶಿಭು ಅವರಿಗೆ ಬಂದಿತು.

ಫೆಬ್ರುವರಿ 2001ರಲ್ಲಿ ಕೂಡಿಗೆಯ ಪಶುಸಂಗೋಪನಾ ಇಲಾಖೆಯಿಂದ 25 ಕೋಳಿಮರಿಗಳನ್ನು ತಂದು ಕನಸಿನ ಉದ್ಯಮಕ್ಕೆ ಚಾಲನೆ ನೀಡಿದರು. ಆಗ ಸಿದ್ದಾಪುರ ಸುತ್ತಮುತ್ತಲ ಪ್ರದೇಶದಲ್ಲಿ 30 ಕೋಳಿ ಫಾರ್ಮ್‌ಗಳು ಇದ್ದವು. ಆರಂಭದಲ್ಲಿ ಬೆಲೆ ಏರಿಕೆ ಹಾಗೂ ವ್ಯಾಪಾರ ಕುಸಿತವಾದರೂ ಎದೆಗುಂದದೆ ವ್ಯಾಪಾರವನ್ನು ಮುನ್ನಡೆಸಿದರು.

ಅದರ ಪರಿಣಾಮ, ಶಿಭುವಿನ ಕೋಳಿ ಫಾರ್ಮ್‌ನಲ್ಲಿ ಇಂದು ಸಾವಿರಾರು ಕೋಳಿ ಮರಿಗಳ ವಹಿವಾಟು ನಡೆಯುತ್ತಿದೆ. ಕೋಳಿ ಸಾಕಾಣಿಕೆಯಿಂದ ಸುಮಾರು ಒಂದು ಲಕ್ಷ ರೂಪಾಯಿ ವಾರ್ಷಿಕ ಆದಾಯ ಪಡೆಯುತ್ತಿದ್ದಾರೆ.

ಕಾಫಿ, ಕರಿಮೆಣಸು ಹಾಗೂ ಇತರ ಕೃಷಿ ಚಟುವಟಿಕೆಯೊಂದಿಗೆ ಮಿನಿಲಾರಿಯಲ್ಲಿ ಕಟ್ಟಡ ಸಾಮಗ್ರಿಗಳನ್ನು ಸರಬರಾಜು ಮಾಡುವ ಕಾಯಕದಲ್ಲಿ ತೊಡಗಿರುವ ಶಿಭುವಿನದ್ದು ಶ್ರಮದಾಯಕ ಜೀವನ. ಕೋಳಿ ಮಾಂಸದ ಬೆಲೆಯ ಏರಿಳಿತ ಹಾಗೂ ಪೈಪೋಟಿ ಕುಕ್ಕುಟೋದ್ಯಮಿಗಳನ್ನು ಹೈರಾಣಾಗಿಸಿದೆ. ಪಟ್ಟಣದ ಸುತ್ತಮುತ್ತಲಲ್ಲಿ ಇದ್ದ 30 ಫಾರ್ಮ್‌ಗಳ ಪೈಕಿ ಇಂದು ಕೇವಲ 6 ಕೋಳಿ ಫಾರ್ಮ್‌ಗಳು ಚಾಲನೆಯಲ್ಲಿವೆ. ಸರ್ಕಾರದಿಂದ ಕುಕ್ಕುಟೋದ್ಯಮಕ್ಕೆ ಸಹಾಯಧನ ಹಾಗೂ ಕಡಿಮೆ ದರದಲ್ಲಿ ವಿದ್ಯುತ್‌ ನೀಡುತ್ತಿಲ್ಲ  ಎಂದು ವೃತ್ತಿ ಸಂಕಷ್ಟವನ್ನು ಹೇಳಿಕೊಂಡರು.

ಕೋಳಿ ಮರಿಗಳು ಹಾಗೂ ಮಾರಾಟಕ್ಕೆ ಸಿದ್ಧವಾದ ಕೋಳಿಗಳಿಂದ ದೊರಕುವ ಗೊಬ್ಬರದಲ್ಲಿ ಕ್ಯಾಲ್ಸಿಯಂ ಅಂಶ ಇರುತ್ತದೆ. ಅದು, ಗಿಡಗಳಿಗೆ ಉತ್ತಮ ಸಾವಯುವ ಗೊಬ್ಬರವಾಗಲಿದ್ದು, ಗೋಬರ್ ಗ್ಯಾಸ್ ಘಟಕದಲ್ಲಿ ಸಗಣಿಯೊಂದಿಗೆ ಮಿಶ್ರಣ ಮಾಡಿ ಬಳಸಬಹುದು ಎಂಬುದನ್ನು ಪ್ರಾತ್ಯಕ್ಷಿಕೆ ಮೂಲಕ ತೋರಿಸಿದರು.

ಕೋಳಿಗಳು ದಷ್ಟಪುಷ್ಟವಾಗಿ ಬೆಳೆಯಲು ಹಲವು ವೈಜ್ಞಾನಿಕ ರಾಸಾಯನಿಕ ಔಷಧಿಗಳಿದ್ದರೂ, ಅವುಗಳ ಮೊರೆ ಹೋಗದೆ ಆರೋಗ್ಯಕ್ಕೆ ಹಿತಕರವಾದ ನಾಡ ಔಷಧಿಗಳನ್ನೇ ಬಳಸುತ್ತಿದ್ದಾರೆ.

40 ದಿನಗಳ ಆರೈಕೆಯಲ್ಲಿ ಮರಿಗಳು 2 ಕೆ.ಜಿ.ವರೆಗೂ ತೂಕ ಬರುತ್ತವೆ. ಮರಿಗಳನ್ನು ಬೆಳ್ಳುಳ್ಳಿ, ಜಾಯಿಕಾಯಿ, ಓಮಕ್ಕಿ, ಪುದೀನ ಸೊಪ್ಪುಗಳನ್ನು ಬಳಸಿ ಪಾರಂಪರಿಕ ರೀತಿಯಲ್ಲಿ ಪೋಷಿಸಲಾಗುತ್ತಿದೆ.

ಶಿಭು ಅವರ ಫಾರ್ಮ್‌ನಲ್ಲಿ ಉತ್ಪತ್ತಿಯಾಗುವ ಕೋಳಿಗಳು ಗುಣಮಟ್ಟದಿಂದ ಕೂಡಿರುವುದರಿಂದ ಉತ್ತಮ ಬೇಡಿಕೆಯನ್ನು ಹೊಂದಿವೆ. ‘ಮನಸ್ಸಿದ್ದರೆ ಮಾರ್ಗ’ ಎನ್ನುವ ಮಾತಿನಂತೆ, ಕೈಕಟ್ಟಿ ಕೂರದೆ ಆಸಕ್ತಿವಹಿಸಿ ದುಡಿದರೆ ಯಾವುದೇ ವೃತ್ತಿಯಲ್ಲಿ ಯಶಸ್ಸು ಸಾಧಿಸಬಹುದು ಎಂಬುದು ಶಿಭು ಅವರ ಮನದಾಳದ ಮಾತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.