ADVERTISEMENT

ಬಿರುಸುಗೊಂಡ ಮಳೆ: ನೀರಲ್ಲಿ ಬೆಳೆ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2017, 6:33 IST
Last Updated 20 ಸೆಪ್ಟೆಂಬರ್ 2017, 6:33 IST

ಮಡಿಕೇರಿ: ಜಿಲ್ಲೆಯಲ್ಲಿ ಮಂಗಳವಾರ ಬೆಳಿಗ್ಗೆಯಿಂದ ಬಿಡುವು ನೀಡಿದ್ದ ಮಳೆ ಸಂಜೆಯ ಬಳಿಕ ಬಿರುಸು ಪಡೆಯಿತು. ಮಂಗಳವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಯ ಅವಧಿಯಲ್ಲಿ ಸರಾಸರಿ 55.4 ಮಿ.ಮೀ ಮಳೆಯಾಗಿದೆ. ಮಡಿಕೇರಿ ತಾಲ್ಲೂಕಿನಲ್ಲಿ 79.3, ವಿರಾಜಪೇಟೆ ತಾಲ್ಲೂಕಿನಲ್ಲಿ 43.8, ಸೋಮವಾರಪೇಟೆ ತಾಲ್ಲೂಕಿನಲ್ಲಿ 43.3 ಮಿ.ಮೀ ಮಳೆಯಾಗಿದೆ.

‌ಹೋಬಳಿವಾರು: ಮಡಿಕೇರಿ ಕಸಬಾ 70.2, ನಾಪೋಕ್ಲು 66.6, ಸಂಪಾಜೆ 58.2, ಭಾಗಮಂಡಲ 122.2, ವಿರಾಜಪೇಟೆ ಕಸಬಾ 38.4, ಹುದಿಕೇರಿ 54, ಶ್ರೀಮಂಗಲ 92.2, ಪೊನ್ನಂಪೇಟೆ 40.2, ಅಮ್ಮತ್ತಿ 18, ಬಾಳೆಲೆ 20, ಸೋಮವಾರಪೇಟೆ ಕಸಬಾ 59.5, ಶನಿವಾರಸಂತೆ 53.2, ಶಾಂತಳ್ಳಿ 70, ಕೊಡ್ಲಿಪೇಟೆ 45, ಕುಶಾಲನಗರ 5.2, ಸುಂಟಿಕೊಪ್ಪ 27 ಮಿ.ಮೀ ಮಳೆಯಾಗಿದೆ.

ತಡೆಗೋಡೆಗೆ ಹಾನಿ
ನಾಪೋಕ್ಲು: ಹೋಬಳಿ ವ್ಯಾಪ್ತಿಯಲ್ಲಿ ಮಂಗಳವಾರವೂ ಬಿರುಸಿನ ಮಳೆ ಮುಂದುವರಿದಿದ್ದು, ಗದ್ದೆಗಳು ಜಲಾವೃತವಾಗಿವೆ, ಬರೆ ಕುಸಿದು ತಡೆಗೋಡೆಗೆ ಹಾನಿಯಾಗಿದೆ.
ಸೋಮವಾರ ರಾತ್ರಿ ಮಳೆ ನಿರಂತರವಾಗಿ ಸುರಿದಿದ್ದು ಮಂಗಳವಾರ ಮಧ್ಯಾಹ್ನ ಬಿಡುವು ನೀಡಿತು. ಹೋಬಳಿಯಾದ್ಯಂತ ಬೆಟ್ಟಶ್ರೇಣಿಗಳಲ್ಲಿ ಸುರಿದ ಮಳೆಯಿಂದ ಕಾವೇರಿ ನದಿ ಉಕ್ಕಿ ಹರಿಯಿತು. ನದಿ ತಟದ ಗದ್ದೆಗಳು ಜಲಾವೃತವಾಗಿವೆ.

ADVERTISEMENT

ಬಿರುಸಿನ ಮಳೆಯಿಂದಾಗಿ ಸಮೀಪದ ಕೈಕಾಡು ಗ್ರಾಮದ ರೈತ ಕುಳ್ಳಚೆಟ್ಟೀರ ಮಹೇಶ್ ಮಾದಪ್ಪನವರ ಭತ್ತದ ಗದ್ದೆಗಳು ಜಲಾವೃತವಾಗಿವೆ. ಪಾಲೂರು ಗ್ರಾಮದ ಬಾರಿಕೆಗೋಪಾಲ ಅವರ ಮನೆ ಸಮೀಪ ಬರೆ ಕುಸಿದು ತಡೆಗೋಡೆಗೆ ಹಾನಿಯಾಗಿದೆ.

ಬಿಡುವು ಕೊಟ್ಟ ಮಳೆ
ವಿರಾಜಪೇಟೆ: ಪಟ್ಟಣ ಸೇರಿದಂತೆ ಸುತ್ತಮುತ್ತ ಭಾನಾವಾರದಿಂದ ಸೋಮವಾರ ರಾತ್ರಿಯವರೆಗೆ ಸುರಿದ ಧಾರಾಕಾರ ಭಾರಿ ಮಳೆ ಮಂಗಳವಾರ ಬಿಡುವು ನೀಡಿದೆ.
ಕೇರಳ ರಾಜ್ಯಕ್ಕೆ ಹೊಂದಿಕೊಂಡ ವಿರಾಜಪೇಟೆ ಭಾಗದಲ್ಲಿ ಮೂರ್ನಾಲ್ಕು ದಿನದಿಂದ ಸತತ ಮಳೆ ಆಗುತ್ತಿರುವುದರಿಂದ ಕೆರೆಕಟ್ಟೆ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದೆ. ಸಮೀಪದ ಕದನೂರು ಹೊಳೆಯಲ್ಲಿ ನೀರಿನ ಮಟ್ಟ ಹೆಚ್ಚಾಗಿದ್ದು ಕೆಲವೆಡೆ ಗದ್ದೆಗಳಿಗೆ ನೀರು ನುಗ್ಗಿದೆ. ಭೇತ್ರಿಯಲ್ಲಿ ಕಾವೇರಿ ನದಿಯ ನೀರಿನ ಮಟ್ಟದಲ್ಲೂ ಗಣನೀಯ ಏರಿಕೆ ಕಂಡುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.