ADVERTISEMENT

ಬುಡಕಟ್ಟು ಕೃಷಿಕರ ಸಂಘದ ಧರಣಿ ವಾಪಸ್‌

ಬೇಡಿಕೆ ಈಡೇರಿಕೆಗೆ ಕ್ರಮ: ಜಿ.ಪಂ. ಸಿಇಒ ಕೂರ್ಮಾರಾವ್‌ ಭರವಸೆ

​ಪ್ರಜಾವಾಣಿ ವಾರ್ತೆ
Published 27 ಮಾರ್ಚ್ 2015, 11:12 IST
Last Updated 27 ಮಾರ್ಚ್ 2015, 11:12 IST
ಮಡಿಕೇರಿಯ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸುತ್ತಿದ್ದ ಬುಡಕಟ್ಟು ಕೃಷಿಕರ ಸಂಘ ಹಾಗೂ ಕರ್ನಾಟಕ ಅರಣ್ಯಮೂಲ ಬುಡಕಟ್ಟು ಸಮುದಾಯಗಳ ಒಕ್ಕೂಟದ ಸದಸ್ಯರ ಜೊತೆ ಗುರುವಾರ ಸಂಜೆ ಜಿಲ್ಲಾ ಪಂಚಾಯಿತಿ ಸಿಇಒ ಕೂರ್ಮಾರಾವ್‌ ಮಾತುಕತೆ ನಡೆಸಿದರು
ಮಡಿಕೇರಿಯ ಜಿಲ್ಲಾಧಿಕಾರಿ ಕಚೇರಿ ಎದುರು ಧರಣಿ ನಡೆಸುತ್ತಿದ್ದ ಬುಡಕಟ್ಟು ಕೃಷಿಕರ ಸಂಘ ಹಾಗೂ ಕರ್ನಾಟಕ ಅರಣ್ಯಮೂಲ ಬುಡಕಟ್ಟು ಸಮುದಾಯಗಳ ಒಕ್ಕೂಟದ ಸದಸ್ಯರ ಜೊತೆ ಗುರುವಾರ ಸಂಜೆ ಜಿಲ್ಲಾ ಪಂಚಾಯಿತಿ ಸಿಇಒ ಕೂರ್ಮಾರಾವ್‌ ಮಾತುಕತೆ ನಡೆಸಿದರು   

ಮಡಿಕೇರಿ: ಕಳೆದ ನಾಲ್ಕು ದಿನಗಳಿಂದ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದ ಬುಡಕಟ್ಟು ಕೃಷಿಕರ ಸಂಘ ಹಾಗೂ ಕರ್ನಾಟಕ ಅರಣ್ಯಮೂಲ ಬುಡಕಟ್ಟು ಸಮುದಾಯಗಳ ಒಕ್ಕೂಟದ ಸದಸ್ಯರು ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೂರ್ಮಾರಾವ್‌ ಅವರು ನೀಡಿದ ಭರವಸೆ ಮೇರೆಗೆ ತಮ್ಮ ಪ್ರತಿಭಟನೆಯನ್ನು ಗುರುವಾರ ಸಂಜೆ ಕೊನೆಗೊಳಿಸಿದರು.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸುತ್ತಿದ್ದ ಬುಡಕಟ್ಟು ಜನರನ್ನು ಭೇಟಿ ಮಾಡಿದ ಕೂರ್ಮಾ ರಾವ್‌ ಅವರು, ಏಪ್ರಿಲ್‌ 7ರಂದು ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಅರಣ್ಯಾಧಿಕಾರಿಗಳ ಸಭೆ ನಡೆಯಲಿದೆ. ಈ ಸಭೆಯಲ್ಲಿ ಬುಡಕಟ್ಟು ಜನರ ಬೇಡಿಕೆಗಳನ್ನು ಈಡೇರಿಸುವ ಬಗ್ಗೆ ಕ್ರಮಕೈಗೊಳ್ಳಲಾಗುವುದು ಎಂದು ಹೇಳಿದರು.

ಕೂರ್ಮಾರಾವ್‌ ಅವರ ಮಾತಿಗೆ ಮನ್ನಣೆ ನೀಡಿದ ಬುಡಕಟ್ಟು ಕೃಷಿಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಇಂದಿರಾ ಅವರು ಧರಣಿಯನ್ನು ಕೊನೆಗೊಳಿಸುವುದಾಗಿ ಪ್ರಕಟಿಸಿದರು. ನಮ್ಮ ಬೇಡಿಕೆಗಳನ್ನು ಈಡೇರಿಸು­ವುದಾಗಿ ಅಧಿಕಾರಿಗಳು ಭರವಸೆ ನೀಡಿದ್ದಾರೆ. ಅವರಿಗೆ ಕಾಲಾವಕಾಶ ನೀಡುತ್ತೇವೆ. ಕ್ರಮಕೈಗೊಳ್ಳದಿದ್ದರೆ ಪುನಃ ಪ್ರತಿಭಟನೆ ನಡೆಸುತ್ತೇವೆ ಎಂದರು.

ಅರಣ್ಯ ಪ್ರದೇಶದಲ್ಲಿ ತಲತಲಾಂತರ­ದಿಂದ ವಾಸಿಸುತ್ತಿರುವ ಬುಡಕಟ್ಟು ಜನರಿಗೆ ಅರಣ್ಯ ಹಕ್ಕು ನೀಡಬೇಕು, ಗಿರಿಜನರ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಅಡ್ಡಿಪಡಿಸಬಾರದು, ಆಶ್ರಮ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಬೇಕು, ಗಿರಿಜನರಿಗೆ ಭೂಮಿ ನೀಡಬೇಕು ಎಂದು ಅವರು ಸರ್ಕಾರವನ್ನು ಒತ್ತಾಯಿಸಿದರು. ಬುಡಕಟ್ಟು ಜನರ ಮುಖಂಡರಾದ ಜೆ.ಕೆ. ರಾಮು ಸೇರಿದಂತೆ ಹಲವರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.