ADVERTISEMENT

ಭೂಮಿ ಪಾಳು ಬಿಡದಿರಲು ಸಲಹೆ

ಉದ್ಯಮಶೀಲತಾ ಜಾಗೃತಿ ಶಿಬಿರ; ಜಿ.ಪಂ ಅಧ್ಯಕ್ಷ ಬಿ.ಎ.ಹರೀಶ್‌

​ಪ್ರಜಾವಾಣಿ ವಾರ್ತೆ
Published 4 ಮೇ 2017, 7:38 IST
Last Updated 4 ಮೇ 2017, 7:38 IST

ವಿರಾಜಪೇಟೆ:  ಭೂಮಿ ಪಾಳು ಬಿಡದೆ ಕೃಷಿಯಲ್ಲಿ ತೊಡಗಿಸಿಕೊಳ್ಳುವ ಮೂಲಕ  ಜಿಲ್ಲೆಯ ಪ್ರತಿಯೊಬ್ಬರು ಸ್ವಾವಲಂಬಿ ಜೀವನ ನಡೆಸಬೇಕು ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಬಿ.ಎ.ಹರೀಶ್‌ ಸಲಹೆ ನೀಡಿದರು.

ಕೊಡಗು ಜಿಲ್ಲಾ ಪಂಚಾಯಿತಿ ಹಾಗೂ ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ವತಿಯಿಂದ ಪಟ್ಟಣದ ಪುರಭವನದಲ್ಲಿ ಬುಧವಾರ ನಡೆದ ಕೈಗಾರಿಕಾ ವಸ್ತು ಪ್ರದರ್ಶನ ಮತ್ತು ಉದ್ಯಮಶೀಲತಾ ಜಾಗೃತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.

ಕೃಷಿಯಂತೆ ಇಂದು ಕೈಗಾರಿಕೆ ಕೂಡ ದೇಶದ ಆರ್ಥಿಕತೆಯ ಬೆನ್ನೆಲುಬು ಆಗಿದೆ. ಕೈಗಾರಿಕೆಗಳಿಂದ ದೇಶದ ಆರ್ಥಿಕ ಪರಿಸ್ಥಿತಿ ಸುಧಾರಣೆಯಾಗಲು ಸಾಧ್ಯ. ದೊಡ್ಡ ನಗರಗಳಲ್ಲಿರುವಂತೆ ಜಿಲ್ಲೆಯಲ್ಲಿ ದೊಡ್ಡ ದೊಡ್ಡ ಕೈಗಾರಿಕೆಗಳು ಇಲ್ಲವಾದರೂ, ಸಣ್ಣ ಕೈಗಾರಿಕೆಗಳಿಗೆ ಪ್ರೋತ್ಸಾಹ ನೀಡುವ ಕೆಲಸವಾಗಬೇಕು ಎಂದರು.

ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್‌ನ ಅಧ್ಯಕ್ಷ ಬಿ.ಎನ್.ಪ್ರಕಾಶ್ ಮಾತನಾಡಿ, ‘ಸಣ್ಣ ಪ್ರಮಾಣದ ಉದ್ದಿಮೆಗಳ ಮೂಲಕ ಜಿಲ್ಲೆಯಲ್ಲಿ ಉತ್ತಮ ಉತ್ಪನ್ನಗಳು ತಯಾರಾಗುತ್ತಿವೆ. ಸಕರಾತ್ಮಕ ಚಿಂತನೆಯಿಂದ ಮುನ್ನಡೆದರೆ ಕಂಡ ಕನಸು ನನಸಾಗಲು ಸಾಧ್ಯ’ ಎಂದರು.

ಮೈಸೂರು ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ರಾಮಕೃಷ್ಣ ಗೌಡ ಮಾತನಾಡಿ, ‘ಪಾಳುಬಿದ್ದಿರುವ ಮಾಯಮುಡಿಯ ಮಡಿಕೆಬೀಡಿನ ಹಂಚು ಕೈಗಾರಿಕೆ ಕೇಂದ್ರವನ್ನು ಬೇಡಿಕೆಗೆ ಅನುಗುಣವಾಗಿ 40ರಿಂದ 50 ಸಣ್ಣ ಕೈಗಾರಿಕಾ ನಿವೇಶನವಾಗಿಸಿ, ಸಣ್ಣ ಕೈಗಾರಿಕೆ ಅಭಿವೃದ್ದಿ ನಿಗಮದಿಂದ ಅಭಿವೃದ್ದಿಗೊಳಿಸುವ ಕುರಿತು ಆಯುಕ್ತರೊಂದಿಗೆ ಚರ್ಚಿಸಲಾಗಿದೆ.

ಶೀಘ್ರ ಯೋಜನೆ ಜಾರಿಗೊಳಿಸಲಾಗುವುದು. ಕಕ್ಕಬೆಯಲ್ಲಿ ಸ್ಥಾಪಿಸಲಾಗುತ್ತಿರುವ ಫುಡ್‌ಕ್ಲಸ್ಟರ್ ಕೇಂದ್ರದಲ್ಲಿ ಮಹಿಳೆಯರನ್ನು ಹೆಚ್ಚಿನ ಪ್ರಮಾಣದಲ್ಲಿ ತೊಡಗಿಸಿಕೊಳ್ಳಲಾಗುತ್ತದೆ. ಕೂಡಿಗೆಯಲ್ಲಿನ ಕೈಗಾರಿಕಾ ಬಡಾವಣೆ ಭರ್ತಿಯಾದ ಕಾರಣ ಸೋಮವಾರಪೇಟೆಯಲ್ಲಿ ಕೈಗಾರಿಕಾ ಬಡಾವಣೆಗೆ ಜಾಗ ಗುರುತಿಸಲಾಗಿದೆ ಎಂದರು.

ಪಟ್ಟಣ ಪಂಚಾಯಿತಿಯ ಪ್ರಭಾರ ಅಧ್ಯಕ್ಷೆ ತಸ್ನಿಂ ಅಕ್ತರ್‌, ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಗುರುರಾಜು, ಸಾವಯವ ಕೃಷಿ ಸಹಕಾರಿ ಸೌಹಾರ್ದ ನಿಗಮದ ಅಧ್ಯಕ್ಷ ಎಂ.ಕಾಳಿದಾಸ್ ರಾಜ್ ಮಾತನಾಡಿದರು. ಅಧ್ಯಕ್ಷತೆಯನ್ನು ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಬೊಳ್ಳಚಂಡ ಸ್ಮಿತಾ ಪ್ರಕಾಶ್ ವಹಿಸಿದ್ದರು. ಪಟ್ಟಣ ಪಂಚಾಯಿತಿ ಸದಸ್ಯರಾದ ಮೈನುದ್ದೀನ್‌ ಹಾಗೂ ಮತ್ತಿನ್ ಸೇರಿದಂತೆ ತಾಲ್ಲೂಕು ಪಂಚಾಯಿತಿ ಸದಸ್ಯರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.