ADVERTISEMENT

ವಿಜಯ ಬ್ಯಾಂಕ್‌ಗೆ ಒಲಿದ ಒಕ್ಕಲಿಗರ ಕಪ್‌

ರಾಜ್ಯಮಟ್ಟದ ಹೊನಲು ಬೆಳಕಿನ ಕಬಡ್ಡಿ ಟೂರ್ನಿ; ದ್ವಿತೀಯ ಸ್ಥಾನಕ್ಕೆ ಬೆಂಗಳೂರು ಎಸ್‌ಬಿಎಂ ತಂಡ ಸಮಾಧಾನ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2017, 9:39 IST
Last Updated 16 ಫೆಬ್ರುವರಿ 2017, 9:39 IST
ಸೋಮವಾರಪೇಟೆಯ ಒಕ್ಕಲಿಗರ ಯುವ ವೇದಿಕೆ ವತಿಯಿಂದ ನಡೆದ ರಾಜ್ಯಮಟ್ಟದ ಹೊನಲು ಬೆಳಕಿನ ಕಬಡ್ಡಿ ಟೂರ್ನಿಯಲ್ಲಿ ದ್ವಿತೀಯ ಸ್ಥಾನ ಗೆದ್ದುಕೊಂಡ ಬೆಂಗಳೂರು ಎಸ್‌ಬಿಎಂ ತಂಡ ಪ್ರಶಸ್ತಿ ಸ್ವೀಕರಿಸಿದರು
ಸೋಮವಾರಪೇಟೆಯ ಒಕ್ಕಲಿಗರ ಯುವ ವೇದಿಕೆ ವತಿಯಿಂದ ನಡೆದ ರಾಜ್ಯಮಟ್ಟದ ಹೊನಲು ಬೆಳಕಿನ ಕಬಡ್ಡಿ ಟೂರ್ನಿಯಲ್ಲಿ ದ್ವಿತೀಯ ಸ್ಥಾನ ಗೆದ್ದುಕೊಂಡ ಬೆಂಗಳೂರು ಎಸ್‌ಬಿಎಂ ತಂಡ ಪ್ರಶಸ್ತಿ ಸ್ವೀಕರಿಸಿದರು   
ಸೋಮವಾರಪೇಟೆ: ಬೆಂಗಳೂರಿನ ವಿಜಯ ಬ್ಯಾಂಕ್ ತಂಡದವರು ತಾಲ್ಲೂಕು ಒಕ್ಕಲಿಗರ ಯುವ ವೇದಿಕೆ, ಕರ್ನಾಟಕ ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಷನ್ ಆಶ್ರಯದಲ್ಲಿ ನಡೆದ ರಾಜ್ಯಮಟ್ಟದ ಹೊನಲು ಬೆಳಕಿನ ಕಬಡ್ಡಿ ಟೂರ್ನಿಯಲ್ಲಿ ಚಾಂಪಿಯನ್‌ ಆದರು.
 
ಇಲ್ಲಿನ ಸರ್ಕಾರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಸೋಮವಾರ ಮತ್ತು ಮಂಗಳವಾರ ನಡೆದ ಫೈನಲ್‌ನಲ್ಲಿ 17 ಪಾಯಿಂಟ್‌ಗಳಿಂದ ಬೆಂಗಳೂರಿನ ಎಸ್‌ಬಿಎಂ ತಂಡವನ್ನು ಮಣಿಸಿತು. ಇದರೊಂದಿಗೆ ಒಕ್ಕಲಿಗರ ಕಪ್‌ ಹಾಗೂ ₹ 1ಲಕ್ಷ ನಗದು ತನ್ನದಾಗಿಸಿಕೊಂಡಿತು. 
 
ರನ್ನರ್‌ ಆಪ್‌ ಆದ ಎಸ್‌ಬಿಎಂ ತಂಡಕ್ಕೆ ₹ 60 ಸಾವಿರ ನಗದು ಹಾಗೂ ಟ್ರೋಫಿ ಲಭಿಸಿತು. ಮೂರನೇ ಮತ್ತು ನಾಲ್ಕನೇ ಸ್ಥಾನವನ್ನು ಕಸ್ಟಮ್ಸ್ ಮತ್ತು ಕೇಂದ್ರೀಯ ಅಬಕಾರಿ ಇಲಾಖೆ, ಬೆಂಗಳೂರಿನ ಅಚ್ಚು ಮತ್ತು ಗಾಲಿ ಕಾರ್ಖಾನೆ ತಂಡಗಳು ಪಡೆದವು.
 
ವಿಜೇತ ತಂಡದಲ್ಲಿದ್ದ  ಪ್ರೊ ಕಬಡ್ಡಿ ಆಟಗಾರರಾದ ರೋಹಿತ್ ಮಾರ್ಲ, ಸುಕೇಶ್ ಹೆಗ್ಡೆ, ಪ್ರಶಾಂತ್ ರೈ, ಸಚಿನ್ ಆಟದಿಂದ ವಿಜಯ ಬ್ಯಾಂಕ್ ಗೆಲುವಿನ ಹಾದಿಯಲ್ಲಿ ಸಾಗಿತು. ಮೊದಲಾರ್ಧದಲ್ಲಿ ವಿಜಯ ಬ್ಯಾಂಕ್‌ ತಂಡ 16 ಪಾಯಿಂಟ್‌ ಪಡೆದರೆ ಎಸ್‌ಬಿಎಂ 14 ಪಾಯಿಂಟ್‌ ಸಂಗ್ರಹಿಸಿತು. ದ್ವಿತೀಯಾರ್ಧದಲ್ಲಿ ವಿಜಯ ಬ್ಯಾಂಕ್ 21 ಪಾಯಿಂಟ್‌ ಗಳಿಸಿದರೆ ಎಸ್‌ಬಿಎಂ ಕೇವಲ 2 ಪಾಯಿಂಟ್‌ ಪಡೆದು ಮುಗ್ಗರಿಸಿತು.
 
ಸೆಮಿಫೈನಲ್‌ ಹೋರಾಟದಲ್ಲಿ ಎಸ್‌ಬಿಎಂ ತಂಡ ಬೆಂಗಳೂರಿನ ಆರ್‌ಎಫ್‌ಡಬ್ಲ್ಯೂ ಎದುರೂ, ವಿಜಯ ಬ್ಯಾಂಕ್‌ ಬೆಂಗಳೂರಿನ ಅಚ್ಚು ಮತ್ತು ಗಾಲಿ ಕಾರ್ಖಾನೆ  ವಿರುದ್ಧವೂ ಗೆದ್ದು ಫೈನಲ್‌ ಪ್ರವೇಶಿಸಿದ್ದವು.
 
ಟೂರ್ನಿಯ ಉತ್ತಮ ಹಿಡಿತಗಾರ ಪ್ರಶಸ್ತಿಯನ್ನು ಎಸ್‌ಬಿಎಂನ ಜವ್ಹರ್ ವಿವೇಕ್, ಉತ್ತಮ ದಾಳಿಗಾರ ಪ್ರಶಸ್ತಿಯನ್ನು ಕೇಂದ್ರೀಯ ಅಬಕಾರಿ ಇಲಾಖೆಯ ಪ್ರಪಂಚನ್, ಸರಣಿ ಶ್ರೇಷ್ಠರಾಗಿ ವಿಜಯ ಬ್ಯಾಂಕ್‌ನ ಪ್ರಶಾಂತ್ ರೈ ಪಡೆದರು. 
 
ಪ್ರೊ ಕಬಡ್ಡಿಯಲ್ಲಿ ಭಾಗವಹಿಸಿದ ಆಟಗಾರರಾದ ಸುಕೇಶ್ ಹೆಗ್ಡೆ (ತೆಲುಗು ಟೈಟನ್), ಪ್ರಶಾಂತ್ ರೈ (ದಬಾಂಗ್ ಡೆಲ್ಲಿ), ಸಚಿನ್ (ಪುಣೆ ವಾರಿಯರ್ಸರ್್), ಎಸ್.ಬಿ.ಎಂ.ನ ಸುರೇಶ್ ಕುಮಾರ್ (ಯು ಮುಂಬಾ), ಎಸ್.ಬಿ.ಎಂ.ನ ರಾಜ್‌ಗುರು (ತೆಲುಗು ಟೈಟನ್), ಎಸ್.ಬಿ.ಎಂ.ನ ಜೀವಕುಮಾರ್ (ಯು ಮುಂಬಾ), ಎಸ್.ಬಿ.ಎಂ.ನ ವಿನೋದ್ ( ಬೆಂಗಳೂರು ಬುಲ್ಸ್), ಪ್ರಪಂಚನ್ (ತೆಲುಗು ಟೈಟನ್), ಅನೂಪ್ ( ಯು ಮುಂಬಾ) ಆರ್.ಡಬ್ಲ್ಯು.ಎಫ್‌ನ ರವಿ ನಂದನ್(ತೆಲುಗು ಟೈಟನ್) ಪ್ರೇಕ್ಷಕರ ಮೆಚ್ಚುಗೆ ಗಳಿಸಿದರು.
 
ಆದಿ ಚುಂಚನಗಿರಿ ಹಾಸನ ಶಾಖಾ ಮಠದ ಶಂಭುನಾಥ ಸ್ವಾಮೀಜಿ, ಒಕ್ಕಲಿಗರ ಯುವ ವೇದಿಕೆ ಅಧ್ಯಕ್ಷ ಬಿ.ಜೆ.ದೀಪಕ್, ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ. ಮೇದಪ್ಪ, ಕರ್ನಾಟಕ ರಾಜ್ಯ ಅಮೆಚೂರ್ ಕಬಡ್ಡಿ ಅಸೋಸಿಯೇಷನ್‌ನ ಉಪಾಧ್ಯಕ್ಷ ವಿ.ಜಯರಾಮ್, ಸಂಘಟನಾ ಕಾರ್ಯ ದರ್ಶಿ ಬಿ.ಸಿ.ರಮೇಶ್, ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇ ಷನ್‌ನ ಅಧ್ಯಕ್ಷ ಎಚ್.ಎಸ್.
ಉತ್ತಪ್ಪ ವಿಜೇತರಿಗೆ ಬಹುಮಾನ ವಿತರಿಸಿದರು.  
 
ತೀರ್ಪುಗಾರರಾಗಿ ಬಿ.ಪಿ.ಗೋಪಿ ನಾಥ್, ಮುತ್ತುರಾಜ್, ಕೃಷ್ಣಪ್ಪ, ರವಿ ಕುಮಾರ್, ಅರುಣ್ ಕುಮಾರ್, ರವಿ ಚಂದ್ರ, ಜಮುನಾ ವೆಂಕಟೇಶ್, ಮಂಜು ನಾಥ್ ಅರಸ್, ಕುಮಾರ್, ಪ್ರೇಮನಾಥ್, ರಾಜು ಕಾರ್ಯನಿರ್ವಹಿಸಿದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.