ADVERTISEMENT

ವೈವಿಧ್ಯ ನೃತ್ಯಗಳಿಂದ ಅದ್ಧೂರಿ ಆಚರಣೆ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2017, 6:14 IST
Last Updated 16 ಏಪ್ರಿಲ್ 2017, 6:14 IST
ನಾಪೋಕ್ಲು ಸಮೀಪದ ಕೈಕಾಡು ಗ್ರಾಮದ ಮಕ್ಕೋಟು ಮಹಾಲಕ್ಷ್ಮಿ ದೇವಾಲಯದಲ್ಲಿ ಶನಿವಾರ ನಡೆದ ಉತ್ಸವದಲ್ಲಿ ಕೊಂಬಾಟ್‌ ನೃತ್ಯ ಪ್ರದರ್ಶಿಸಲಾಯಿತು (ಎಡಚಿತ್ರ). ಭಕ್ತರು ಬೊಂಬೆಯಾಟ್‌ ನೃತ್ಯ ಪ್ರದರ್ಶಿಸಿ ದೇವಿ ಆರಾಧಿಸಿದರು
ನಾಪೋಕ್ಲು ಸಮೀಪದ ಕೈಕಾಡು ಗ್ರಾಮದ ಮಕ್ಕೋಟು ಮಹಾಲಕ್ಷ್ಮಿ ದೇವಾಲಯದಲ್ಲಿ ಶನಿವಾರ ನಡೆದ ಉತ್ಸವದಲ್ಲಿ ಕೊಂಬಾಟ್‌ ನೃತ್ಯ ಪ್ರದರ್ಶಿಸಲಾಯಿತು (ಎಡಚಿತ್ರ). ಭಕ್ತರು ಬೊಂಬೆಯಾಟ್‌ ನೃತ್ಯ ಪ್ರದರ್ಶಿಸಿ ದೇವಿ ಆರಾಧಿಸಿದರು   

ನಾಪೋಕ್ಲು: ಸಮೀಪದ ಕೈಕಾಡು ಗ್ರಾಮದ ಮಕ್ಕೋಟು ಮಹಾಲಕ್ಷ್ಮಿ ದೇವಾಲಯದಲ್ಲಿ ವಾರ್ಷಿಕ ಉತ್ಸವವನ್ನು ಶನಿವಾರ ಸಂಭ್ರಮದಿಂದ ಆಚರಿಸಲಾಯಿತು.
ಈ ದ್ವೈವಾರ್ಷಿಕ ಉತ್ಸವದಲ್ಲಿ ದೇವಾಲಯದಲ್ಲಿ ಸಾಂಪ್ರದಾಯಿಕವಾಗಿ ವಿವಿಧ ನೃತ್ಯಗಳನ್ನು ಪ್ರದರ್ಶಿಸಲಾಯಿತು.ಕೈಕಾಡು ಗ್ರಾಮದ ಮಕ್ಕೋಟುಕೇರಿಯ ವಿವಿಧ ಕುಟುಂಬದವರು ವಾರ್ಷಿಕ ಉತ್ಸವದಲ್ಲಿ ಹದಿನೆಂಟು ವಿಧದ ನೃತ್ಯವನ್ನು ಪ್ರದರ್ಶಿಸಿದರು.

ಲಕ್ಷ್ಮಿ ಆರಾಧಿಸುವ, ಕೊಂಡಾಡುವ ಈ ಹಬ್ಬದಲ್ಲಿ ವೈವಿಧ್ಯ ನೃತ್ಯಗಳು ಭಕ್ತರ ಗಮನಸೆಳೆದವು.ದುಡಿಕೊಟ್‌ಪಾಟ್‌ನೊಂದಿಗೆ ವಿಶಿಷ್ಟವಾದ ಮೃಗದ ಕೊಂಬು ಹಿಡಿದು ನರ್ತಿಸುವ ಕೊಂಬಾಟ್‌, ನವಿಲುಗರಿಗಳ ಗುಚ್ಚವನ್ನು ಬಳಸಿ ನರ್ತಿಸುವ ಪೀಲಿಯಾಟ್‌, ದೇವರ ವಿಗ್ರಹವನ್ನು ಹಿಡಿದು ನರ್ತಿಸುವ ಗೊಂಬೆಯಾಟ್‌ ಸೇರಿ ವಿವಿಧ ನೃತ್ಯ ಪ್ರದರ್ಶಿಸಿದರು.

ಪೀಲಿ ಆಟ್, ತೇಲಾಟ್, ಬಿಲ್ಲಾಟ್, ಕತ್ತಿಯಾಟ್, ಕೊಂಬಾಟ್, ಜೋಡಿಯಾಟ್, ಅಜ್ಜಿಯಾಟ್, ಹೀಗೆ ಹದಿನೆಂಟು ರೀತಿಯ ದೇವರ ಕುಣಿತವನ್ನು ದೇವರ ಹೆಸರನ್ನು ಹೇಳುತ್ತಾ ಕೈಕಾಡು ಗ್ರಾಮದ ಮಕ್ಕೋಟು ಕೇರಿಯ ದೇವತಕ್ಕರಾದ ಚೊಟ್ಟೆಯಂಡ, ಭಂಡಾರ ತಕ್ಕರಾದ ನೆರೆಯಂಡಮ್ಮಂಡ, ನಾಯಕಂಡ ಕದ್ದಣಿಯಂಡ, ಪಾಡಿಯಂಡ, ಬಟ್ಟಿಯಂಡ ಕುಟುಂಬದ 18 ವರ್ಷ ಮೇಲ್ಪಟ್ಟವರು     ನರ್ತಿಸಿದರು.

ADVERTISEMENT

ಹದಿನೆಂಟು ದಿನಗಳಿಂದ ವಿವಿಧ ಆಚರಣೆಗಳಲ್ಲಿ ಪಾಲ್ಗೊಂಡ ಮಕ್ಕೋಟುಕೇರಿಯ ಗ್ರಾಮಸ್ಥರು ಪ್ರತಿದಿನ ಸಾಂಪ್ರದಾಯಿಕವಾಗಿ ನೃತ್ಯದ ತಾಲೀಮು ನಡೆಸಿದರು. ಏಳು ದಿನ ನವಿಲುಗರಿ ನೃತ್ಯ ನಡೆದರೆ ಎಂಟುದಿನ ಕೊಂಬು ಕುಣಿತ ಜರುಗಿತು. ಶುಕ್ರವಾರ ಪಟ್ಟಣಿ ಹಾಗೂ ಅಜ್ಜಪ್ಪಕೋಲ ಜರುಗಿತು. ಶನಿವಾರ ಬೆಳಿಗ್ಗೆ ಮಕ್ಕೋಟುಕೇರಿಯ ಆರು ಕುಟುಂಬದವರು ಒಟ್ಟಾಗಿ ದೇವತಕ್ಕರ ಮನೆಗೆ ತೆರಳಿ ಭಂಡಾರ ತಂದಬಳಿಕ ಎತ್ತುಹೇರಾಟದೊಂದಿಗೆ ದೇವಾಲಯದ ಸನ್ನಿಧಿಗೆ ತೆರಳಿದರು. ವಿವಿಧ ಬಗೆಯ ನೃತ್ಯ ಪ್ರದರ್ಶನದ ಬಳಿಕ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.ನಂತರ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು.ಉತ್ಸವದಲ್ಲಿ ಮಕ್ಕೋಟು ಕೇರಿಗೆ ಸಂಬಂಧಿಸಿದ ನಾಯಕಂಡ, ಪಾಡೆಯಂಡ, ಕದ್ದಣಿಯಂಡ, ಚೊಟ್ಟೆಯಂಡ ಅಮ್ಮಂಡ, ಸೇರಿ ಹಲವು ಕುಟುಂಬಗಳ ಮಂದಿ ಪಾಲ್ಗೊಂಡಿದ್ದರು. ಸಂಜೆ ಮತ್ತೆ ನೃತ್ಯಗಳನ್ನು ಪುನಾರಾವರ್ತಿಸಿ ಉತ್ಸವಕ್ಕೆ ತೆರೆ ಎಳೆಯಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.