ADVERTISEMENT

ಸಮಸ್ಯೆ ಬಗೆಹರಿಸಲು ಸಂಸದ ವಿಫಲ

ಕೇಂದ್ರ ಸರ್ಕಾರಕ್ಕೆ ಮನದಟ್ಟು ಮಾಡಿಸದ ಪ್ರತಾಪಸಿಂಹ; ಕಾಫಿ ಬೆಳೆಗಾರರ ಸಂಘ ಆರೋಪ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2017, 7:51 IST
Last Updated 8 ಫೆಬ್ರುವರಿ 2017, 7:51 IST

ಸೋಮವಾರಪೇಟೆ: ಕಾಫಿ ಬೆಳೆಗಾರರ ಸಮಸ್ಯೆಗಳನ್ನು ಕೇಂದ್ರ ಸರ್ಕಾರಕ್ಕೆ ಮನದಟ್ಟು ಮಾಡಿಸುವಲ್ಲಿ ಸಂಸದ ಪ್ರತಾಪಸಿಂಹ ಸಂಪೂರ್ಣ ವಿಫಲರಾ ಗಿದ್ದು, ಜಿಲ್ಲೆಯ ಬಗ್ಗೆ ನಿರ್ಲಕ್ಷ್ಯ ಧೋರಣೆ  ಮುಂದುವರಿಸಿದಲ್ಲಿ ಕಾಫಿ ಬೆಳೆಗಾರರ ಸಹಕಾರ ಪಡೆದು ಮುಂದಿನ ಚುನಾವಣೆಯನ್ನು ಬಹಿಷ್ಕರಿಸಲಾಗು ವುದು ಎಂದು ತಾಲ್ಲೂಕು ಕಾಫಿ ಬೆಳೆಗಾರರ ಸಂಘ ಎಚ್ಚರಿಸಿದೆ.

ಮಂಗಳವಾರ  ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಾಫಿ ಬೆಳೆಗಾರರ ಸಂಘದ ತಾಲ್ಲೂಕು ಘಟಕದ  ಅಧ್ಯಕ್ಷ ಬಾಚಿನಾಡಂಡ ಮೋಹನ್ ಬೋಪಣ್ಣ, ಕಾಫಿ ಬೆಳೆಗಾರರ ಸಮಸ್ಯೆಗಳಿಗೆ ಕೇಂದ್ರ ಸರ್ಕಾರ ಸಕಾರಾತ್ಮಕವಾಗಿ ಸ್ಪಂದಿಸುತ್ತಿಲ್ಲ. ಕಾಫಿ ಬೆಳೆಗಾರರ ಸಮಸ್ಯೆಗಳ ಬಗ್ಗೆ ಚರ್ಚಿಸುವ ಸಲುವಾಗ ಸಂಸದರ ನೇತೃತ್ವದಲ್ಲಿ ಸಭೆ ನಡೆಸಲು ಹಲವು ಬಾರಿ ಮನವಿ ಮಾಡಿದರೂ ಪ್ರಯೋಜನವಾಗುತ್ತಿಲ್ಲ ಎಂದು ಆರೋಪಿಸಿದರು.

ಕೇಂದ್ರದ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಬೆಳೆಗಾರರ  ಸಾಲ ಮನ್ನಾ ಮಾಡುವ ನಿರೀಕ್ಷೆ ಹುಸಿಯಾಗಿದೆ. ಬೆಳೆಗಾರರಿಗೆ ರಾಷ್ಟ್ರೀಕೃತ ಬ್ಯಾಂಕಿನಿಂದ ಶೂನ್ಯ ಬಡ್ಡಿದರದಲ್ಲಿ ₹10 ಲಕ್ಷದವರೆಗೆ ಸಾಲ ನೀಡುವ ಮೂಲಕ ಪ್ರೋತ್ಸಾಹ ನೀಡಬೇಕೆಂದು ಮನವಿ ಮಾಡಿದ್ದರೂ ಯಾವುದೇ ಸ್ಪಂದನೆ ದೊರೆತಿಲ್ಲ ಎಂದು ಅವರು ಬೇಸರ ವ್ಯಕ್ತಪಡಿಸಿದರು.

ಸಂಸದರು ಕೊಡಗಿನ ಬಗ್ಗೆ  ನಿರ್ಲಕ್ಷ್ಯ ಧೋರಣೆ  ತಾಳಿದಲ್ಲಿ ಪ್ರತ್ಯೇಕ ಲೋಕಸಭಾ ಕ್ಷೇತ್ರಕ್ಕೆ ಆಗ್ರಹಿಸಿ ಹೋರಾಟ ನಡೆಸುವುದಾಗಿ ಅವರು ಎಚ್ಚರಿಸಿದರು.
ಪ್ರಸಕ್ತ ಸಾಲಿನಲ್ಲಿ ಕಾಫಿ ಕೊಯ್ಲು  ಮುಗಿಯುವ ಮುನ್ನವೇ  ಮಳೆ ಬಂದಿರುವುದರಿಂದ ಅರೇಬಿಕಾ ಕಾಫಿಗೆ  ನಷ್ಟವಾಗಿದೆ. ಕಾವೇರಿ ನೀರು ಇಲ್ಲಿನ ಜನರಿಗೆ ಬಳಕೆಯಾಗುತ್ತಿಲ್ಲ. ಜಿಲ್ಲೆಯಲ್ಲಿ ಕೊಳವೆ ಬಾವಿ ಕೊರೆಯುವುದನ್ನು ನಿಷೇಧಿಸಿರುವುದರಿಂದ ಕಾಫಿಗೆ ನೀರು ಹಾರಿಸಲು ತೊಂದರೆಯಾಗಿದೆ.

ಜಿಲ್ಲೆಯ ರೈತರು, ಬೆಳೆಗಾರರು ವರ್ಷದ ಮೂರು ಅಥವಾ ನಾಲ್ಕು ತಿಂಗಳು ಮಾತ್ರ ಕೃಷಿ ಚಟುವಟಿಕೆಗಳಿಗೆ ನೀರನ್ನು ಬಳಸುವುದ ರಿಂದ ಜಿಲ್ಲೆಯಲ್ಲಿ ಕೊಳವೆಬಾವಿ ತೆಗೆಸಲು ಅನುಮತಿ ನೀಡಬೇಕು ಎಂದು  ಮನವಿ ಮಾಡಿದರು.

ಹವಾಮಾನ ವೈಪರೀತ್ಯದಿಂದ ಒಂದೆಡೆ ಕಾಫಿ ಬೆಳೆಗಾರರು ನಷ್ಟಕ್ಕೊಳ ಗಾದರೆ, ಮತ್ತೊಂದೆಡೆ ಕಾಫಿ ಬೆಳೆಗಾರರನ್ನು ಖರೀದಿದಾರರು ಶೋಷಣೆ ಮಾಡುತ್ತಿದ್ದಾರೆ. ಖರೀದಿ ದಾರರು ಒಳ ಒಪ್ಪಂದ ಮಾಡಿಕೊಂಡು ದರ ಸಮರ ನಡೆಸುತ್ತಿದ್ದು , ಚಿಕ್ಕಮಗಳೂರು, ಹಾಸನ ಮತ್ತು ಸಕಲೇಶಪುರ ವ್ಯಾಪ್ತಿಯಲ್ಲಿ  ಇರುವ  ಮಾರುಕಟ್ಟೆ ದರ ಕೊಡಗು ಜಿಲ್ಲೆಯಲ್ಲಿ ಇರುವುದಿಲ್ಲ ಎಂದು ಆರೋಪಿಸಿದರು.

ಕಾಫಿ ಖರೀದಿ ಕೇಂದ್ರಗಳಲ್ಲಿ ಖರೀದಿದಾರರು ಆಯಾ ದಿನದ ದರದ ವಿವರಣೆಯನ್ನು ಫಲಕದಲ್ಲಿ ಅಳವಡಿಸ ಬೇಕು ಎಂದ ಒತ್ತಾಯಿಸಿದರು.
ಪ್ರತಿ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಫಿ ಒಣಗಿಸುವ ಘಟಕವನ್ನು ಸ್ಥಾಪಿಸ ಬೇಕೆಂದು ಕಾಫಿ ಮಂಡಳಿ ಮತ್ತು ಸರ್ಕಾ ರಕ್ಕೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ. ಮುಂದಿನ ಸಾಲಿನ ಕಾಫಿ ಫಸಲು ಸೆಪ್ಟಂಬರ್‌ ತಿಂಗಳಿನಲ್ಲೇ ಬರುವುದರಿಂದ ಕಾಫಿ ಒಣಗಿಸಲು ಕಷ್ಟ ವಾಗಲಿದ್ದು, ಕೂಡಲೇ ಕಾಫಿ ಒಣಗಿಸುವ ಘಟಕಗಳನ್ನು ಎಲ್ಲ ಪಂಚಾಯಿತಿ ಮಟ್ಟದಲ್ಲಿ ಸ್ಥಾಪಿಸಬೇಕು ಎಂದರು. 

ವಿಧಾನ ಪರಿಷತ್ ಮಾಜಿ ಸದಸ್ಯ ಎಸ್.ಜಿ.ಮೇದಪ್ಪ ಮಾತನಾಡಿ, ‘ಜಿಲ್ಲೆಯ ಉಸ್ತುವಾರಿ ಸಚಿವರಿಗೆ ಕೊಡಗು ಜಿಲ್ಲೆಯ  ವಸ್ತು ಸ್ಥಿತಿಯ ಬಗ್ಗೆ ಅರಿವು ಇಲ್ಲ. ಉಸ್ತುವಾರಿ ಸಚಿವರು ಹೊರ ಜಿಲ್ಲೆಯವರಾಗಿರುವುದರಿಂದ ಇಲ್ಲಿನ ಬೆಳೆಗಾರರು ಮತ್ತು ರೈತರ ಸಮಸ್ಯೆಗಳನ್ನು ಸಂಪೂರ್ಣವಾಗಿ ತಿಳಿದುಕೊಳ್ಳಲು ಸಾಧ್ಯವಾಗುತ್ತಿಲ್ಲ.

ಸ್ಥಳೀಯ ಜನಪ್ರತಿನಿಧಿಗಳು ಉಸ್ತುವಾರಿ ಸಚಿವರಿಗೆ ಸಮರ್ಪಕವಾಗಿ ಮಾಹಿತಿ ನೀಡಲು ವಿಫಲರಾಗಿದ್ದಾರೆ ಎಂದು ದೂರಿದರು. 
ಗೋಷ್ಠಿಯಲ್ಲಿ ಸಂಘದ ಪದಾಧಿಕಾ ರಿಗಳಾದ ತಾಕೇರಿ ಪ್ರಕಾಶ್, ಎಡದಂಟೆ ಲವ, ಬಿ.ಎಂ.ಸುರೇಶ್, ಬಿ.ಜಿ. ಪೂವಮ್ಮ, ಎ.ವಿ. ನೀಲಕಂಠಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.