ADVERTISEMENT

ಸಮಾವೇಶ ಬಹಿಷ್ಕಾರಕ್ಕೆ ನಿರ್ಧಾರ

​ಪ್ರಜಾವಾಣಿ ವಾರ್ತೆ
Published 15 ಮೇ 2017, 7:19 IST
Last Updated 15 ಮೇ 2017, 7:19 IST
ಮಡಿಕೇರಿ: ಕಾಂಗ್ರೆಸ್  ಜಿಲ್ಲೆಯಲ್ಲಿ ಕ್ರೈಸ್ತ ಸಮುದಾಯವನ್ನು ಕಡೆಗಣಿಸುತ್ತಿರುವುದರಿಂದ ಮೇ 15 ರಂದು ಕುಶಾಲನಗರದಲ್ಲಿ ನಡೆಯಲಿರುವ ಪಕ್ಷದ ಅಲ್ಪಸಂಖ್ಯಾತರ ಘಟಕದ ಸಮಾವೇಶವನ್ನು ಪಕ್ಷದ ಕ್ರೈಸ್ತ ಮುಖಂಡರು ಬಹಿಷ್ಕರಿಸಲಿದ್ದಾರೆ ಎಂದು ರೋಮನ್ ಕ್ಯಾಥೋಲಿಕ್ ಸಂಘದ ಸ್ಥಾಪಕ ಅಧ್ಯಕ್ಷ ಲಾರೆನ್ಸ್ ತಿಳಿಸಿದರು.
 
ನಗರದಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್  ಕೊಡಗು ಜಿಲ್ಲೆಯಲ್ಲಿ ಕ್ರೈಸ್ತ ಸಮುದಾಯವನ್ನು ಸಂಪೂರ್ಣವಾಗಿ ಕಡೆಗಣಿಸುತ್ತಿದೆ. ಪಕ್ಷದಲ್ಲಿ ಯಾವುದೇ ಉನ್ನತ ಮಟ್ಟದ ಸ್ಥಾನಮಾನವನ್ನು ಕ್ರೈಸ್ತ ಸಮುದಾಯದಯದವರಿಗೆ ನೀಡುತ್ತಿಲ್ಲ.
 
ಕ್ರೈಸ್ತ ಸಮುದಾಯದ ಬಹುತೇಕ ಮಂದಿ ಕಾಂಗ್ರೆಸ್‌ಗೆ ಮತ ನೀಡುತ್ತಿದ್ದರೂ ಅಲ್ಪಸಂಖ್ಯಾ ತರ ಬೇರೆ ಸಮುದಾಯಗಳಿಗೆ ಮಾತ್ರ ಸ್ಥಾನಮಾನ ನೀಡಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತ ಪಡಿಸಿದರು.
 
ರೋಮನ್ ಕ್ಯಾಥೋಲಿಕ್ ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ಜಾನ್ಸನ್ ಮಾತನಾಡಿ, ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಲ್ಪಸಂಖ್ಯಾತರ ಏಳಿಗೆಗಾಗಿ ಸಾಕಷ್ಟು ಜನಪರ ಯೋಜನೆಗಳನ್ನು ಹಮ್ಮಿಕೊಳ್ಳುತ್ತಿದೆ. ಆದರೆ, ಕಾಂಗ್ರೆಸ್ ಜಿಲ್ಲಾ ಘಟಕ ಕ್ರೈಸ್ತ ಸಮುದಾಯವನ್ನು ಕೀಳು ಮಟ್ಟದಲ್ಲಿ ಕಾಣುತ್ತಿದೆ ಎಂದು ದೂರಿದರು.
 
ಪತ್ರಿಕಾಗೋಷ್ಠಿಯಲ್ಲಿ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಆಗಸ್ಟಿನ್ ಜಯರಾಜ್,  ಜಾನ್ಸನ್ ಪಿಂಟೋ, ಗಿಲ್ಬರ್ಟ್ ಲೋಬೋ, ಜೋಸೆಫ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.