ADVERTISEMENT

ಸವಿ ನೀಡಿದ ಸಾವಯವ ಕೃಷಿ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2014, 10:44 IST
Last Updated 24 ಏಪ್ರಿಲ್ 2014, 10:44 IST
ಸಾವಯವ ಗೊಬ್ಬರದಿಂದ ನಳನಳಿಸುತ್ತಿರುವ ತಮ್ಮ ತೋಟದಲ್ಲಿ ಪೂವಯ್ಯ.
ಸಾವಯವ ಗೊಬ್ಬರದಿಂದ ನಳನಳಿಸುತ್ತಿರುವ ತಮ್ಮ ತೋಟದಲ್ಲಿ ಪೂವಯ್ಯ.   

ವಿರಾಜಪೇಟೆ: ಶೂನ್ಯ ಬಂಡವಾಳದಿಂದ ಕೃಷಿ ಮಾಡಬೇಕೆ? ಹಾಗಾದರೆ ಸಾವಯವ ಕೃಷಿ ಮಾಡಿ.... ಇದು ಸಾವಯವ ಕೃಷಿಯ ಕುರಿತು ಕಟ್ಟೆರ ಎಂ. ಪೂವಯ್ಯ ಅವರು ಹೇಳುವ ಅನುಭವದ ಮಾತು.

ವಿರಾಜಪೇಟೆಗೆ ಸಮೀಪದ ಅರಮೆರಿ ಗ್ರಾಮದ ಕೆ.ಎಂ. ಪೂವಯ್ಯ ಅವರು ಏಳೆಂಟು ವರ್ಷಗಳಿಂದ ತಮ್ಮ ತೋಟದಲ್ಲಿ ರಾಸಾಯನಿಕ ಗೊಬ್ಬರದ ಜತೆಯಲ್ಲಿ ಸಾವಯವ ಗೊಬ್ಬರ ಬಳಸುತ್ತಿದ್ದಾರೆ. ಇವರು ತೋಟದ ಒಂದು ಭಾಗಕ್ಕೆ ರಾಸಾಯನಿಕ ಗೊಬ್ಬರ ಬಳಸಿದರೆ, ಇನ್ನುಳಿದ ಭಾಗಕ್ಕೆ ಸಾವಯವ ಗೊಬ್ಬರ ಬಳಸುತ್ತಿದ್ದಾರೆ. ಅದಕ್ಕೆ ಅವರು ಕೊಡುವ ಕಾರಣವೆಂದರೆ, ಒಂದು ಭಾಗದ ಇಳುವರಿ ಕೈಕೊಟ್ಟರೆ ಇನ್ನೊಂದು ಭಾಗವಾದರೂ ಸಹಾಯಕ್ಕೆ ಬರಬಹುದು ಎನ್ನುವ ಆಲೋಚನೆ.

ತೋಟದ ಒಂದು ಭಾಗಕ್ಕೆ ಜೀವಾಮೃತವನ್ನು ತಯಾರಿಸಿ ವರ್ಷದಲ್ಲಿ ಮೂರು ಬಾರಿ ಹಾಕುತ್ತಾರೆ. ಇದರಿಂದ ಇಳುವರಿ ಹೆಚ್ಚಾಗಿದೆಯಲ್ಲದೆ ಗಿಡಗಳ ಆರೋಗ್ಯವೂ ಉತ್ತಮವಾಗಿದೆ. ಸಪೋಟ ಗಿಡವೊಂದಕ್ಕೆ ಜೀವಾಮೃತವನ್ನು ಹಾಕುತ್ತಿರುವುದರಿಂದ ವರ್ಷದ 12 ತಿಂಗಳೂ ಅದು ಫಲ ಕೊಡುತ್ತದೆ. ನಾನು ಸಾವಯವ ಕೃಷಿ ಮಾಡುವುದಕ್ಕಿಂತ ಮೊದಲು ತೋಟದಲ್ಲಿ ಎರೆಹುಳುಗಳು ಸಂಪೂರ್ಣವಾಗಿ ನಿರ್ನಾಮವಾಗಿದ್ದವು. ಆದರೆ, ಈಗ ತೋಟದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಎರೆಹುಳುಗಳನ್ನು ಕಾಣಬಹುದು. ಇದರಿಂದಾಗಿ ತೋಟವೂ ಫಲವತ್ತಾಗಿದೆ ಎಂದು ಸಂತಸದಿಂದ ಅವರು ಹೇಳುತ್ತಾರೆ.

ಪೂವಯ್ಯ ಅವರು ಭತ್ತ, ಕಾಫಿ, ಅಡಿಕೆ, ಕಾಳುಮೆಣಸು ಹಾಗೂ ತರಕಾರಿ ಮುಂತಾದ ಕೃಷಿ ಮಾಡುತ್ತಿದ್ದಾರೆ. ಸಾವಯವ ಹಾಗೂ ಜೈವಿಕ ಕೃಷಿ ಮಾಡುತ್ತಿರುವುದರಿಂದ ಇಳುವರಿ ಹಾಗೂ ಪರಿಸರದ ಆರೋಗ್ಯವೂ ಉತ್ತಮವಾಗಿದೆ. ಇವರು ಕಳೆದ ಬಾರಿ ಪ್ರಯೋಗಾತ್ಮಾಕವಾಗಿ ಮೊದಲ ಬಾರಿಗೆ ಬಿಆರ್‌ ಭತ್ತದ ತಳಿಯನ್ನು ಗದ್ದೆಯಲ್ಲಿ ಬಿತ್ತಿದ್ದರು. ಕಳೆ ಬಾರಿಯ ಅತಿಯಾದ ಮಳೆಯ ನಡುವೆಯೂ ಉತ್ತಮ ಫಸಲು ಬಂದಿತ್ತು. ಹಿಂದಿನ ವರ್ಷಗಳಲ್ಲಿ ಅದೇ ಪ್ರಮಾಣದ ಭೂಮಿಯಲ್ಲಿ 13 ಕ್ವಿಂಟಲ್‌ ಭತ್ತದ ಇಳುವರಿಯಿದ್ದರೆ, ಬಿಆರ್‌ ಭತ್ತದ ತಳಿಯೂ 20 ಕ್ವಿಂಟಲ್‌ಗಳಷ್ಟು ಇಳುವರಿಯನ್ನು ನೀಡಿತ್ತು. ಬಿಆರ್‌ ಭತ್ತದ ಇಳುವರಿಯನ್ನು ಕಂಡ ಸಮೀಪದ ರೈತರೆಲ್ಲಾ ಇವರ ಬಳಿ ಬಿಆರ್‌ ಭತ್ತದ ಬಿಜವನ್ನು ಬಿತ್ತನೆಗೆ ಕೇಳುತ್ತಿದ್ದಾರೆ.

ಹತ್ತಾರು ದನಕರುಗಳನ್ನು ಸಾಕುತ್ತಿರುವ ಪೂವಯ್ಯನವರು ತಮ್ಮ ಕೆರೆಯಲ್ಲಿ ಮೀನು ಸಾಕಾಣಿಕೆಯನ್ನೂ ಮಾಡುತ್ತಿದ್ದಾರೆ. ಮಗ ಹಾಗೂ ಸೊಸೆ ತಮ್ಮ ಕೃಷಿ ಕೆಲಸದಲ್ಲಿ ಕೈಜೋಡಿಸುತ್ತಿರುವುದರಿಂದ ಕಾರ್ಮಿಕರ ಸಮಸ್ಯೆಯ ನಡುವೆಯೂ ಬೇಸಾಯದಲ್ಲಿ ಮುಂದುವರಿಯಲು ಸಾಧ್ಯವಾಗಿದೆ.  ಸರ್ಕಾರದಿಂದ ರೈತರಿಗೆ ಸಿಗಬೇಕಾದ ಸೌಲಭ್ಯಗಳು ರೈತರಿಗೆ ಸರಿಯಾದ ಸಮಯಕ್ಕೆ ತಲುಪುತ್ತಿಲ್ ಎಂದು ಅವರು ಬೇಸರ ವ್ಯಕ್ತಪಡಿಸುತ್ತಾರೆ.

ಸಾವಯವ ಕೃಷಿಯ ಬಗ್ಗೆ ಸುಮಾರು 20 ವರ್ಷಗಳ ಹಿಂದೆಯೇ ಸರ್ಕಾರ ತಿಳಿವಳಿಕೆಯನ್ನು ಕೊಟ್ಟಿದ್ದತೆ ಉತ್ತಮ ಪ್ರಗತಿ ಸಾಧಿಸಬಹುದಾಗಿತ್ತು. ಈಗಲೂ ಸಾವಯವ ಕೃಷಿಯ ಮೂಲಕ ಹೊಸ ಪ್ರಯೋಗವನ್ನು ಮಾಡಬೇಕೆಂಬ ಹಂಬಲವಿದೆ ಆದರೆ ವಯಸ್ಸಿನ ಅಡ್ಡಿಯಿದೆ, ಎಂದು ಅವರು ಹೇಳುತ್ತಾರೆ.

ನನ್ನ ಕೃಷಿ ಭೂಮಿಯಲ್ಲಿ ಜೀವಾಮೃತ ಬಳಕೆಯಿಂದ ಕಾಫಿ ಮತ್ತು ಕಾಳು ಮೆಣಸಿನ ಫಸಲು ವರ್ಷದಿಂದ ವರ್ಷಕ್ಕೆ ಉತ್ತಮವಾಗುತ್ತಿದೆ. ರಾಸಾಯನಿಕ ಗೊಬ್ಬರವನ್ನು ಬಳಸುತ್ತಿದ್ದ ಸಂಪೂರ್ಣ ತೋಟವನ್ನು ಸಾವಯವಕ್ಕೆ ಒಂದೇ ಬಾರಿಗೆ ಪರಿವರ್ತನೆ ಮಾಡದೆ ಹಂತಹಂತವಾಗಿ ಪರಿವರ್ತಿಸುವುದು ಉತ್ತಮ. ಸಾವಯವನ್ನು ಬಳಸಿದ ವರ್ಷವೇ ಉತ್ತಮ ಇಳುವರಿಯನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ವರ್ಷಗಳು ಕಳೆದಂತೆ ಇಳುವರಿ ಉತ್ತಮವಾಗುತ್ತ ಸಾಗುತ್ತದೆ ಎನ್ನುವ ಕಿವಿ ಮಾತನ್ನು ಅವರು ಈ ಸಂದರ್ಭದಲ್ಲಿ ಹೇಳಲು ಮರೆಯುವುದಿಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.