ADVERTISEMENT

ಸಹಬಾಳ್ವೆಯಿಂದ ಮುಖ್ಯವಾಹಿನಿ ಪ್ರವೇಶ

ಸೋಮವಾರಪೇಟೆ ಹಿಂದೂ ಮಲೆಯಾಳ ಸಮಾಜ ಆಯೋಜಿಸಿದ್ದ ಓಣಂ ಉತ್ಸವದಲ್ಲಿ ಶಾಸಕ

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2016, 9:42 IST
Last Updated 26 ಸೆಪ್ಟೆಂಬರ್ 2016, 9:42 IST
ಸೋಮವಾರಪೇಟೆಯಲ್ಲಿ ನಡೆದ ಓಣಂ ಉತ್ಸವವನ್ನು ಭಾನುವಾರ ಶಾಸಕ ಅಪ್ಪಚ್ಚು ರಂಜನ್ ಉದ್ಘಾಟಿಸಿದರು.
ಸೋಮವಾರಪೇಟೆಯಲ್ಲಿ ನಡೆದ ಓಣಂ ಉತ್ಸವವನ್ನು ಭಾನುವಾರ ಶಾಸಕ ಅಪ್ಪಚ್ಚು ರಂಜನ್ ಉದ್ಘಾಟಿಸಿದರು.   

ಸೋಮವಾರಪೇಟೆ: ಸಹಬಾಳ್ವೆ ನಡೆಸಿದಲ್ಲಿ ಮಾತ್ರ ಎಲ್ಲರೂ ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯ ಎಂದು ಮಡಿಕೇರಿ ಕ್ಷೇತ್ರದ ಶಾಸಕ ಅಪ್ಪಚ್ಚು ರಂಜನ್ ಹೇಳಿದರು.
ಹಿಂದೂ ಮಲೆಯಾಳ ಸಮಾಜದ ವತಿಯಿಂದ ಭಾನುವಾರ ಇಲ್ಲಿನ ಒಕ್ಕಲಿಗರ ಕಲ್ಯಾಣ ಮಂಟಪದಲ್ಲಿ ಆಯೋಜಿಸಿದ್ದ ಓಣಂ ಆಚರಣೆಯಲ್ಲಿ ಅವರು ಮಾತನಾಡಿದರು.

ಯಾವುದೇ ಜನಾಂಗದವರು ಸಮಾಜದಲ್ಲಿ ಇತರ ಸಮಾಜದವರನ್ನು ಗೌರವಿಸಿ ಒಂದಾಗಿ ಮುನ್ನಡೆಯಬೇಕಾ ಗಿದೆ. ಸಮಾಜದಲ್ಲಿ ಶಿಕ್ಷಣಕ್ಕೆ ಹಣ ಕ್ರೋಢೀಕರಿಸುವ ಮೂಲಕ ಆರ್ಥಿಕವಾಗಿ ಹಿಂದುಳಿದವರಿಗೆ ಹಣ ಸಹಾಯ ನೀಡಿದಲ್ಲಿ ಸಮಾಜವರು ಶೈಕ್ಷಣಿಕವಾಗಿ ಸಬಲರಾಗಲು ಸಾಧ್ಯ ಎಂದರು. ಹಿಂದೂ ಮಲೆಯಾಳ ಸಮಾಜದ ನೂತನ ಕಟ್ಟಡ ನಿರ್ಮಾಣಕ್ಕೆ ಮುಂದಾದಲ್ಲಿ ಶಾಸಕರ ನಿಧಿಯಿಂದ  ₹10ಲಕ್ಷ ಹಾಗೂ ನನ್ನ ವೈಯುಕ್ತಿಕ ಖಾತೆಯಿಂದ ₹1ಲಕ್ಷ ನೀಡುವುದಾಗಿ ಭರವಸೆ ನೀಡಿದರು.

ವಿಧಾನ ಪರಿಷತ್ ಸದಸ್ಯೆ ಶಾಂತೆ ಯಂಡ ವೀಣಾ ಅಚ್ಚಯ್ಯ ಮಾತನಾಡಿ, ನಮ್ಮ ಹಿಂದಿನ ತಲೆಮಾರಿನ ಕಲೆ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಇಂತಹ ಸಂಘಟನೆಗಳಿಂದ ಸಾಧ್ಯ. ಮಲೆಯಾಳಿಗರು ಓಣಂ ಉತ್ಸವವನ್ನು ಜಿಲ್ಲೆಯ ಪ್ರತಿಯೊಂದು ಭಾಗದಲ್ಲೂ ಆಚರಿಸುವ ಮೂಲಕ ಮಲೆಯಾಳ ಸಂಸ್ಕೃತಿಯನ್ನು ಜಿಲ್ಲೆಯ ಜನತೆಗೆ ಪರಿಚಯಿಸುತ್ತಿರುವುದು ಉತ್ತಮ ಬೆಳವಣಿಗೆ. ಎಲ್ಲರೊಂದಿಗೂ ಸೌಹಾರ್ದ ಯುತವಾಗಿ ಬೆರೆಯುವ ಮೂಲಕ ಸಮಾಜದ ಬೆಳವಣಿಗೆಗೆ ಸಹಕರಿಸ ಬೇಕೆಂದು ಮನವಿ ಮಾಡಿದರು.

ಮಲಯಾಳ ಕೈಪಿಡಿಯನ್ನು ಬಿಡುಗಡೆ ಮಾಡಿದ ಮಾಜಿ ಸಚಿವ ಬಿ.ಎ. ಜೀವಿಜಯ ಮಾತನಾಡಿ,   ಕೆಲವರು ದೇಶದ ಸಂವಿಧಾನದ ಆಶಯಗಳಿಗೆ ವಿರುದ್ಧವಾಗಿ ನಡೆದುಕೊಳ್ಳುತ್ತಿದ್ದಾರೆ. ಇದರಿಂದಾಗಿ ಜನರ ನಡುವೆ ಶಾಂತಿ ಸಾಮರಸ್ಯ ಇಲ್ಲದಂತಾಗಿದೆ. ಇಂತಹ ಸಂದರ್ಭದಲ್ಲಿ ಹಬ್ಬದಾಚರಣೆಗಳು ಜನಾಂಗದ ನಡುವೆ ಒಗ್ಗಟ್ಟು ಮೂಡಿ ಸಲು ಸಹಕಾರಿಯಾಗುತ್ತದೆ ಎಂದರು.

ಹಿಂದೂ ಮಲಯಾಳ ಸಮಾಜದ ಸಲಹೆಗಾರ ವಿ.ಕೆ. ಲೋಕೇಶ್, ಜಿಲ್ಲೆಯ ಜನಾಂಗದವರನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಹಿಂದೂ ಮಲೆಯಾಳ ಸಂಘವನ್ನು ಹುಟ್ಟುಹಾಕಲಾಗಿದೆ. ಜನಾಂಗದ ಅಭಿವೃದ್ಧಿಗೆ ಪ್ರತಿಯೊಬ್ಬರೂ ಸಹಕಾರ ನೀಡಿದರೆ, ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಕಾರ್ಯಕ್ರಮಗಳನ್ನು ನಡೆಸಲಾಗುವುದು ಎಂದರು.

ಅಧ್ಯಕ್ಷತೆಯನ್ನು ಮಲೆಯಾಳ ಸಂಘದ ಅಧ್ಯಕ್ಷ ಪಿ.ಡಿ. ಪ್ರಕಾಶ್ ವಹಿಸಿ ದ್ದರು. ವೇದಿಕೆಯಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯೆ ಸುನೀತಾ ಮಂಜುನಾಥ್, ಕುಶಾಲನಗರದ ಸಮಾಜದ ಅಧ್ಯಕ್ಷ ಶಿವನ್, ವಿರಾಜಪೇಟೆಯ ಹರ್ಷವರ್ಧನ್, ಸುಂಟಿಕೊಪ್ಪದ ಪಿ.ಸಿ. ಮೋಹನ್, ಚೆಟ್ಟಳ್ಳಿಯ ಶಶಿಕುಮಾರ್, ಮೂರ್ನಾಡಿನ ಬಾಬು, ಮರಗೋಡಿನ ಬಾಲಕೃಷ್ಣನ್, ಕಾಜೂರು ಎಸ್.ಎನ್. ಡಿ.ಪಿ ಅಧ್ಯಕ್ಷ ಭಾಸ್ಕರ್ ಇದ್ದರು.

ಉತ್ಸವದ ಅಂಗವಾಗಿ ಉತ್ಸವ ಸಮಿತಿ ಅಧ್ಯಕ್ಷ ವಿ.ಎಂ. ವಿಜಯ ನೇತೃತ್ವದಲ್ಲಿ ಸ್ಥಳೀಯ ಮುತ್ತಪ್ಪ ದೇವಾಲಯದ ಬಳಿಯಿಂದ ಪಟ್ಟಣದ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ಸಾಗಿದರು. ಇದೇ ಸಂದರ್ಭ ಸಿಂಗಾರಿ ಮೇಳ ವಾದ್ಯಗೋಷ್ಠಿ ನಡೆಯಿತು. ಕಾರ್ಯಕ್ರಮದಲ್ಲಿ ಹತ್ತನೇ ತರಗತಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಿಸಲಾಯಿತು. ಸಮಾಜದ ಮಾಜಿ ಸೈನಿಕರನ್ನು ಸನ್ಮಾನಿಸಲಾಯಿತು. ಉತ್ಸವದ ಅಂಗವಾಗಿ ಪೂಕಳಂ ಮತ್ತು ನೃತ್ಯ ಸ್ಪರ್ಧೆ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.