ADVERTISEMENT

ಸ್ಮಶಾನ; ಭೂಮಿ ಗುರುತಿಸಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2017, 6:13 IST
Last Updated 23 ಮಾರ್ಚ್ 2017, 6:13 IST

ಸೋಮವಾರಪೇಟೆ: ಐಗೂರು ಗ್ರಾಮದ ಸ್ಮಶಾನ ಜಾಗ ಹೋರಾಟ ಸಮಿತಿ ಸಭೆ ಸೋಮವಾರ  ಸ್ಥಳೀಯ ಗುಳಿಗಪ್ಪ ಮಂಟಪದಲ್ಲಿ ನಡೆಯಿತು.

ಸುಮಾರು 200 ಕುಟಂಬಗಳಿರುವ ಈ ಗ್ರಾಮದಲ್ಲಿ 800 ಮತದಾರರಿದ್ದಾರೆ. ಆದರೆ, ಈ ಗ್ರಾಮದಲ್ಲಿ ಸ್ಮಶಾನವಿಲ್ಲದೆ ಗ್ರಾಮಸ್ಥರು ಪರದಾಡುತ್ತಿದ್ದು ಇದನ್ನು ಪರಿಹರಿಸುವಂತೆ ತಹಶೀಲ್ದಾರ್ ಹಾಗೂ ಸಂಬಂಧಿಸಿದ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ.  ತಿಂಗಳ ಒಳಗೆ ಸಮಸ್ಯೆ ಪರಿಹರಿಸದಿದ್ದಲ್ಲಿ ತಾಲ್ಲೂಕು ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಲು ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಐಗೂರಿನಲ್ಲಿ ಯಾರೇ ಮೃತ ಪಟ್ಟರೂ, ಅವರನ್ನು ಕಿರಗಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸ್ಮಶಾನ ದಲ್ಲಿ ಅಂತ್ಯಸಂಸ್ಕಾರ ಮಾಡಬೇಕಿದೆ.    ಹಲವು ವರ್ಷಗಳ ಹಿಂದೆಯೇ ಸ್ಮಶಾನಕ್ಕೆ ಸ್ಥಳ ಗುರುತಿಸಿಕೊಡುವಂತೆ ಗ್ರಾಮ ಪಂಚಾಯಿತಿಗೆ ಮನವಿ ಮಾಡಿದ್ದರೂ ಇನ್ನೂ ಜಾಗ ಗುರುತಿಸಿಲ್ಲ.

ಶೀಘ್ರದಲ್ಲಿ ಸ್ಮಶಾನ ಜಾಗ ಗುರುತಿಸ ದಿದ್ದರೆ, ಮುಂದೆ ಯಾರಾದರೂ ಮೃತ ಪಟ್ಟರೆ ಅವರ ಶವವನ್ನು ಗ್ರಾಮದ ರಸ್ತೆಯಲ್ಲಿ ಅಂತ್ಯ ಸಂಸ್ಕಾರ ಮಾಡುವು ದಾಗಿ ಗ್ರಾಮಸ್ಥರು ಎಚ್ಚರಿಸಿದರು.

ಸಮಿತಿ ಅಧ್ಯಕ್ಷ ಕೆ.ಪಿ. ದಿನೇಶ್ ಮಾತನಾಡಿ, ಈ ಹಿಂದೆ ಗ್ರಾಮದಲ್ಲಿ ಮೃತರಾದವರನ್ನು ಚೆಂಡುಬಾಣೆಯಲ್ಲಿ ಅಂತ್ಯ ಸಂಸ್ಕಾರ ಮಾಡಲಾಗುತ್ತಿತ್ತು. ಆದರೆ, ಆ ಸ್ಥಳವೂ ಅತಿಕ್ರಮಣ ಕ್ಕೊಳಗಾಗಿದ್ದು, ಅದನ್ನು ತೆರವುಗೊಳಿ ಸುವಂತೆ ಅಥವಾ ಬೇರೆ ಜಾಗ ನೀಡುವಂತೆ ಮತ್ತೊಮ್ಮೆ ತಹಶೀಲ್ದಾರ್‌ಗೆ ಮನವಿ ಮಾಡಲಾಗುವುದು. ತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.

ವೇದಿಕೆಯಲ್ಲಿ ಸಮಿತಿಯ ಗೌರವಾಧ್ಯಕ್ಷ ಕೆ.ಪಿ. ರಾಯ್, ಉಪಾಧ್ಯಕ್ಷ ಧರ್ಮಪ್ಪ, ಕಾರ್ಯದರ್ಶಿ ಎಂ. ಅಪ್ಪು, ಕೆ.ಎಲ್. ಹೊನ್ನಪ್ಪ, ಸಲಹೆಗಾರರಾದ ಮೇದಪ್ಪ, ಡಿ.ಎಸ್. ಚಂಗಪ್ಪ, ವಿ. ರಾಜನ್ , ಸಮಿತಿ ಪದಾಧಿಕಾರಿಗಳು ಹಾಗೂ ಗ್ರಾಮಸ್ಥರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.