ADVERTISEMENT

ಹತ್ಯೆ: ಆರೋಪಿಗಳ ಪತ್ತೆಗೆ ಆಗ್ರಹ

ಮದರಸಾ ಶಿಕ್ಷಕನ ಕೊಲೆಗೆ ಜಿಲ್ಲೆಯ ವಿವಿಧ ಸಂಘಟನೆಗಳಿಂದ ಖಂಡನೆ

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2017, 6:14 IST
Last Updated 23 ಮಾರ್ಚ್ 2017, 6:14 IST

ಮಡಿಕೇರಿ: ಕಾಸರಗೋಡಿನ ಮದರಸಾದಲ್ಲಿ ಶಿಕ್ಷಕನಾಗಿದ್ದ ಕೊಡಗು ಜಿಲ್ಲೆಯ ಕೊಟ್ಟಂಮುಡಿ ರಿಯಾಜ್‌ ಮುಸ್ಲಿಯಾರ್‌ನನ್ನು ಕೊಲೆ ಮಾಡಿದ್ದು ಖಂಡನೀಯ. ಆರೋಪಿಗಳನ್ನು ಬಂಧಿಸಬೇಕು ಎಂದು ಎಸ್‌ಕೆಜೆಎಸ್, ಎಸ್‌ಕೆಎಸ್‌ಎಸ್‌ಎಫ್, ಎಸ್‌ವೈಎಸ್ ಹಾಗೂ ಎಸ್‌ಕೆಜೆಎಂ ಜಿಲ್ಲಾ ಸಮಿತಿಗಳು ಒತ್ತಾಯಿಸಿವೆ.

ನಗರದಲ್ಲಿ ಬುಧವಾರ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಎಸ್‌ಕೆಜೆಎಸ್ ಸಮಿತಿ ಕಾರ್ಯದರ್ಶಿ ಎಂ. ತಮ್ಲೀಖ್ ದಾರಿಮಿ, ‘ಎಂಟು ವರ್ಷಗಳಿಂದ ಕಾಸರಗೋಡಿನಲ್ಲಿ ಮದರಸಾದಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದರು. ಕೆಲವು ಕಿಡಿಗೇಡಿಗಳು ಪ್ರಾರ್ಥನಾ ಮಂದಿರಕ್ಕೆ ನುಗ್ಗಿ ಕೊಲೆ ಮಾಡಿರುವುದು ಆತಂಕಕಾರಿ ಬೆಳವಣಿಗೆ. ಕೊಲೆಯ ಹಿಂದೆ ಯಾರ ಕೈವಾಡವಿದೆ ಎಂಬುದನ್ನು ಪತ್ತೆಹಚ್ಚಿ ಆರೋಪಿಗಳನ್ನು ಬಂಧಿಸಬೇಕು’ ಎಂದು ಆಗ್ರಹಿಸಿದರು.

ರಾಜಕೀಯ ಬಲದೊಂದಿಗೆ ಕೆಲವು ವ್ಯಕ್ತಿಗಳು ಕಾನೂನನ್ನು ಲೆಕ್ಕಿಸದೇ ಇರುವುದು, ಇಂತಹ ದುರ್ಘಟನೆಗಳಿಗೆ ಕಾರಣವಾಗಿದೆ. ಇಂತಹ ಗುಂಪುಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.  ರಿಯಾಜ್‌ ಮುಸ್ಲಿಯಾರ್‌ ಕೊಲೆಯಾದ ಹಿನ್ನೆಲೆಯಲ್ಲಿ ಶುಕ್ರವಾರ ಜಿಲ್ಲೆಯ ಎಲ್ಲ ಮದರಸಾಗಳಲ್ಲಿ ಸಾಮೂಹಿಕ ಪ್ರಾರ್ಥನೆ ಸಲ್ಲಿಸಬೇಕು ಎಂದು ಮನವಿ ಮಾಡಿದರು.

ಪತ್ರಿಕಾಗೋಷ್ಢಿಯಲ್ಲಿ ವಿವಿಧ ಸಮಿತಿಗಳ ಪ್ರಮುಖರಾದ ಎಂ. ಅಬ್ದುಲ್‌ ರೆಹಮಾನ್‌, ಪಿ.ಎಂ. ಆರೀಫ್ ಪೈಝಿ, ಎನ್.ಎನ್. ಇಕ್ಬಾಲ್, ವೈ.ಯು. ನೌಷದ್ ಫೈಝಿ ಇದ್ದರು.

ನಗರ ಕಾಂಗ್ರೆಸ್ ಖಂಡನೆ: ರಿಯಾಜ್‌ ಮುಸ್ಲಿಯಾರ್ ಅವರ ಹತ್ಯೆ ಪ್ರಕರಣವನ್ನು ಮಡಿಕೇರಿ ನಗರ ಕಾಂಗ್ರೆಸ್ ಘಟಕ ತೀವ್ರವಾಗಿ ಖಂಡಿಸಿದೆ. ಪತ್ರಿಕಾ ಹೇಳಿಕೆ ನೀಡಿರುವ ಕಾಂಗ್ರೆಸ್ ನಗರಾಧ್ಯಕ್ಷ ಕೆ.ಯು.ಅಬ್ದುಲ್ ರಜಾಕ್ ಕೊಲೆಗಾರರನ್ನು ತಕ್ಷಣ ಬಂಧಿಸಿ ಕಠಿಣ ಶಿಕ್ಷೆಗೆ ಒಳಪಡಿಸಬೇಕು.

ಇತ್ತೀಚಿನ ದಿನಗಳಲ್ಲಿ ಅಲ್ಪಸಂಖ್ಯಾತರ ಮೇಲೆ ಈ ರೀತಿಯ ದಾಳಿ ಹೆಚ್ಚಾಗುತ್ತಿದೆ. ದುಷ್ಕೃತ್ಯದ ಹಿಂದಿರುವ ದುಷ್ಟ ಶಕ್ತಿಯನ್ನು ತನಿಖೆ ಮೂಲಕ ಬಯಲಿಗೆ ತರಬೇಕು ಎಂದು ಆಗ್ರಹಿಸಿದ್ದಾರೆ.

ಅಲ್ಪಸಂಖ್ಯಾತರಲ್ಲಿ ಭಯದ ವಾತಾವರಣವನ್ನು ಮೂಡಿಸಿ ಗೊಂದಲ ಸೃಷ್ಟಿಸುವ ಈ ರೀತಿಯ ಕೃತ್ಯಗಳು ಮರುಕಳಿಸದಂತೆ ಪೊಲೀಸರು ಅಗತ್ಯ ಕ್ರಮ ಕೈಗೊಳ್ಳಬೇಕು. ಭಯ ಮುಕ್ತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು ಎಂದು ಅಬ್ದುಲ್ ರಜಾಕ್ ಮನವಿ ಮಾಡಿದ್ದಾರೆ.

₹25 ಲಕ್ಷ ಪರಿಹಾರ ವಿತರಣೆಗೆ ಆಗ್ರಹ
ಮಡಿಕೇರಿ:
ರಿಯಾಜ್ ಮುಸ್ಲಿಯಾರ್‌ ಕೊಲೆ ಮಾಡಿರುವ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿ ಬುಧವಾರ ನಗರದಲ್ಲಿ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ಸದಸ್ಯರು ಪ್ರತಿಭಟನೆ ನಡೆಸಿದರು.

ನಗರದ ಇಂದಿರಾಗಾಂಧಿ ವೃತ್ತದಲ್ಲಿ ಜಮಾಯಿಸಿದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಪದಾಧಿಕಾರಿಗಳು, ಘಟನೆಯನ್ನು ಖಂಡಿಸಿ ಮತ್ತು ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿದರು.

ಜಿಲ್ಲಾ ಘಟಕದ ಅಧ್ಯಕ್ಷ ಹ್ಯಾರೀಶ್ ಮಾತನಾಡಿ, ಕೊಡಗು ಜಿಲ್ಲೆಯ ಕೊಟ್ಟಂಮುಡಿ ನಿವಾಸಿ ರಿಯಾಜ್ ಮುಸ್ಲಿಯಾರ್ ಅವರನ್ನು ಮತಾಂಧ ದುಷ್ಕರ್ಮಿ ಗಳು ಪ್ರಾರ್ಥನಾ ಮಂದಿರಕ್ಕೆ ನುಗ್ಗಿ ಕೊಲೆ ಮಾಡಿದ್ದಾರೆ. ಆರೋಪಿಗಳನ್ನು ಕೂಡಲೇ ಬಂಧಿಸಬೇಕು. ಕೇರಳ ರಾಜ್ಯ ಸರ್ಕಾರ ₹ 25 ಲಕ್ಷ   ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.