ADVERTISEMENT

ಹಾರಂಗಿ; ರೈತರಿಗೆ ಹಕ್ಕುಪತ್ರ ವಿತರಣೆ

ಅತ್ತೂರು, ಯಡವನಾಡು ಪುನರ್ವಸತಿ ಗ್ರಾಮಗಳ ರೈತರಲ್ಲಿ ನೆಮ್ಮದಿ

​ಪ್ರಜಾವಾಣಿ ವಾರ್ತೆ
Published 13 ಜುಲೈ 2017, 9:32 IST
Last Updated 13 ಜುಲೈ 2017, 9:32 IST

ಕುಶಾಲನಗರ: ಹಾರಂಗಿ ಜಲಾಶಯದ ಹಿನ್ನೀರಿನಿಂದ ಭೂಮಿ ಕಳೆದುಕೊಂಡ ಅತ್ತೂರು ಮತ್ತು ಯಡವನಾಡು ಪುನರ್ವಸತಿ ಗ್ರಾಮಗಳ ರೈತರಿಗೆ ಅರ್ಜಿಗಳ ಸಮಿತಿ ಅಧ್ಯಕ್ಷ ಶಿವಶಂಕರ ರೆಡ್ಡಿ ಹಕ್ಕುಪತ್ರ ವಿತರಿಸಿದರು.

ಹಾರಂಗಿ ಪ್ರವಾಸಿ ಮಂದಿರ ಆವರಣದಲ್ಲಿ ಬುಧವಾರ ಏರ್ಪಡಿಸಿದ್ದ ಹಕ್ಕುಪತ್ರ ವಿತರಣಾ ಸಮಾರಂಭದಲ್ಲಿ ಅವರು ಮಾತನಾಡಿದರು.

ಹಾರಂಗಿ ಜಲಾಶಯದಿಂದ ಭೂಮಿ ಕಳೆದುಕೊಂಡ ರೈತರಿಗೆ ಪರ್ಯಾಯ ವ್ಯವಸ್ಥೆಯನ್ನು ಮಾಡಬೇಕಾದ ಜವಾ ಬ್ದಾರಿ ಸರ್ಕಾರದ ಮೇಲೆ ಇದೆ. ಆದರೆ ಆಗಿನ ಸರ್ಕಾರದ ವ್ಯವಸ್ಥೆಯ ಲೋಪ ದಿಂದಾಗಿ 45 ವರ್ಷ ಇಲ್ಲಿನ ಜನರು ತೊಂದರೆ ಅನುಭವಿಸುವಂತಾಯಿತು ಎಂದರು.

ADVERTISEMENT

ರಾಜ್ಯ ಸರ್ಕಾರ ಅತ್ತೂರು ಮತ್ತು ಯಡವನಾಡು ಗ್ರಾಮಗಳನ್ನು ಕಂದಾಯ ಗ್ರಾಮವಾಗಿ ಘೋಷಣೆ ಮಾಡಿದೆ. ಇಲ್ಲಿನ ಜನರಿಗೆ ಭೂಮಿಹಕ್ಕು ನೀಡುವ ಮೂಲಕ ಶಾಶ್ವತ ಪರಿಹಾರವನ್ನು ಸರ್ಕಾರ ಮಾಡಿದೆ. ಅಲ್ಲದೆ, ಯಾವುದೇ ಭೇದವಿಲ್ಲದೆ ಎಲ್ಲರಿಗೂ ಹಕ್ಕುಪತ್ರ ವಿತರಿಸಲಾಗುವುದು ಎಂದು ಶಿವಶಂಕರ್ ರೆಡ್ಡಿ ಭರವಸೆ ನೀಡಿದರು.

ವಿಧಾನಸಭೆಯಲ್ಲಿ ಸುಮಾರು 15 ಉಪ ಸಮಿತಿಗಳು ಕಾರ್ಯನಿರ್ವಹಿ ಸುತ್ತವೆ. ಆದರಲ್ಲಿ ಅರ್ಜಿ  ಸಮಿತಿ ಪ್ರಬಲ ವಾದ ಸಮಿತಿಯಾಗಿದೆ. ಈ ಸಮಿತಿ ಅನೇಕ ಸಮಸ್ಯೆಗಳನ್ನು ಪರಿಹಾರ ಮಾಡಿದೆ. ಅರ್ಜಿ ಸಮಿತಿಗೆ ದೂರು ಬಂದ ಕಾರಣ ಅರಣ್ಯ ಇಲಾಖೆ, ಕಂದಾಯ ಇಲಾಖೆ ಹಾಗೂ ನೀರಾವರಿ ಇಲಾಖಾಧಿಕಾರಿಗಳ ಉನ್ನತಮಟ್ಟದ ಸಭೆ ನಡೆಸಿ ಸಮಸ್ಯೆಗೆ ಪರಿಹಾರ ನೀಡಲಾಗಿದೆ ಎಂದರು.

ಅರ್ಜಿ ಸಮಿತಿ ಸದಸ್ಯ, ಶಾಸಕ ನಾಗರಾಜಯ್ಯ ಮಾತನಾಡಿ, ಕುಣಿಗಲ್ ವ್ಯಾಪ್ತಿಯಲ್ಲಿ ಮಾಜಿ ಸೈನಿಕರಿಗೆ, ಭೂರಹಿತರಿಗೆ ಹಾಗೂ ಸಮಾಜ ಸೇವಕರಿಗೆ ನೀಡಿದ 4,500 ಎಕರೆ ಭೂಮಿಯನ್ನು ಸರ್ಕಾರ ಮಂಜೂರು ಮಾಡಿದ್ದು, ಅಗತ್ಯ ದಾಖಲೆಗಳನ್ನು ಹೊಂದಿದರೂ ಕೆಲವು ಕಂದಾಯ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸಮಸ್ಯೆ ಗಳು ಉಂಟಾಗಿವೆ. ಇದೀಗ ಸರ್ಕಾರದ ಮಟ್ಟದಲ್ಲಿ ಸಮಸ್ಯೆ ಪರಿಹಾರಕ್ಕೆ ಅರ್ಜಿ  ಸಮಿತಿ ಮುಂದಾಗಿದೆ ಎಂದು ಹೇಳಿದರು.

ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಮಾತನಾಡಿ, ಹಾರಂಗಿ ಜಲಾಶಯ ನಿರ್ಮಾಣದಿಂದ ಭೂಮಿ ಕಳೆದು ಕೊಂಡ ನೂರಾರು ರೈತರಿಗೆ ಭೂಮಾಲೀಕತ್ವದ ಹಕ್ಕು ಸಿಕ್ಕಿರಲಿಲ್ಲ.
ಅತ್ತೂರು ಮತ್ತು ಯಡವನಾಡು ಪುನರ್ವಸತಿ ಗ್ರಾಮಗಳನ್ನು ಕಂದಾಯ ಗ್ರಾಮಗಳಾಗಿ ಘೋಷಣೆ ಮಾಡಿ ಇಲ್ಲಿನ ರೈತರಿಗೆ ಹಕ್ಕುಪತ್ರ ನೀಡಬೇಕು ಎಂದು ವಿಧಾನಸಭೆಯಲ್ಲಿ 23 ಬಾರಿ ಪ್ರಶ್ನೆ ಕೇಳಿ ದ್ದರೂ ಸಮರ್ಪಕ ಉತ್ತರ ದೊರೆಯಲಿಲ್ಲ.

2009ರಲ್ಲಿ ಅರ್ಜಿ ಸಮಿತಿಗೆ ದೂರು ಸಲ್ಲಿಸಿದ ಕಾರಣ ಸಮಿತಿ ಸುಮಾರು 16 ಸಭೆಗಳನ್ನು ನಡೆಸಿ ಅರಣ್ಯ ಭೂಮಿಯನ್ನು ಕಂದಾಯ ಇಲಾಖೆಗೆ ವರ್ಗಾಯಿಸಲು ನಿರಾಶ್ರಿತರಿಗೆ ಪರಿಹಾರ ದೊರಕಿಸಿಕೊಟ್ಟಿದ್ದಾರೆ ಎಂದರು.

ಜಿ.ಪಂ.ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಸದಸ್ಯೆ ಕೆ.ಆರ್. ಮಂಜುಳಾ, ವಿಧಾನಸಭೆಯ ಅರ್ಜಿ ಸಮಿತಿಯ ಉಪ ಕಾರ್ಯದರ್ಶಿ ಬಿ.ಆರ್.ಅಂಬಾ, ಅಧೀನ ಕಾರ್ಯದರ್ಶಿ  ಪ್ರಶಾಂತ್, ಕೊಡಗು ಜಿಲ್ಲಾಧಿಕಾರಿ ಡಾ.ವಿನ್ಸೆಂಟ್ ಡಿಸೋಜ, ಹೆಚ್ಚುವರಿ ಜಿಲ್ಲಾಧಿಕಾರಿ ಸತೀಶ್, ಉಪ ವಿಭಾಗಾಧಿ ಕಾರಿ ನಂಜುಂಡೇಗೌಡ, ಮಡಿಕೇರಿ ವಿಭಾದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಲಿಂಗರಾಜು, ಡಿಎಫ್ಒ ಸೂರ್ಯಸೇನ, ನೀರಾವರಿ ಇಲಾಖೆ ಗೋರೂರು ವಿಭಾಗದ ಮುಖ್ಯ ಎಂಜಿನಿಯರ್ ಪ್ರಸನ್ನ, ಕುಶಾಲನಗರ ನೀರಾವರಿ ಇಲಾಖೆ ಅಧೀಕ್ಷಕ ಎಂಜಿನಿ ಯರ್ ಚಂದ್ರಕುಮಾರ್, ಕಾರ್ಯಪಾಲಕ ಎಂಜಿನಿಯರ್ ರಂಗೇಗೌಡ, ತಹಶೀ ಲ್ದಾರ್ ಮಹೇಶ್, ಸರ್ವೇ ಅಧಿಕಾರಿ ವಿದ್ಯಾ, ಅತ್ತೂರು ಗ್ರಾಮ ಸಮಿತಿ ಅಧ್ಯಕ್ಷ ಶ್ರೀನಿವಾಸ್ ಉಪಸ್ಥಿತರಿದ್ದರು.

***

₹ 10 ಕೋಟಿ ವೆಚ್ಚದ ಕಾಮಗಾರಿ
ಕುಶಾಲನಗರ:
ಹಾರಂಗಿ ಜಲಾಶಯದ ಹಿನ್ನೀರಿನಿಂದ ಮುಳುಗಡೆಯಾದ ಸಂತ್ರಸ್ತರ ಅತ್ತೂರು ಮತ್ತು ಯಡವನಾಡು ಪುನರ್ವಸತಿ ಗ್ರಾಮಗಳಲ್ಲಿ ಕಾವೇರಿ ನೀರಾವರಿ ನಿಗಮದ ವತಿಯಿಂದ ₹ 10 ಕೋಟಿ ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.