ADVERTISEMENT

ಹೆಣ್ಣು ಸಬಲೆ: ಸಾಧನೆಯೇ ಸಾಕ್ಷಿ

ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮ– ತಿಲೋತ್ತಮೆ ಅಭಿಮತ

​ಪ್ರಜಾವಾಣಿ ವಾರ್ತೆ
Published 11 ಮಾರ್ಚ್ 2017, 7:18 IST
Last Updated 11 ಮಾರ್ಚ್ 2017, 7:18 IST
ಸೋಮವಾರಪೇಟೆ:  ಹೆಣ್ಣು ಸಮಾಜದ ಎಲ್ಲ ಕ್ಷೇತ್ರಗಳಲ್ಲೂ ತನ್ನ ಛಾಪನ್ನು ಮೂಡಿಸುವ ಮೂಲಕ ಪುರುಷರಿಗೇನು ಕಮ್ಮಿಯಿಲ್ಲ ಎಂದು ತೋರಿಸಿಕೊಟ್ಟಿದ್ದಾಳೆ ಎಂದು ಪದವಿಪೂರ್ವ ಕಾಲೇಜಿನ ಪ್ರಭಾರ ಪ್ರಾಂಶುಪಾಲರಾದ ತಿಲೋತ್ತಮೆ ಹೇಳಿದರು.
 
ಇಲ್ಲಿನ ಮಹಿಳಾ ಸಮಾಜದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಅವರು ಮಾತನಾಡಿದರು. 
 
ಸಮಾಜದಲ್ಲಿ ಇಂದು ಪುರುಷರಿಗೆ ಸರಿಸಮಾನರಾಗಿ ಎಲ್ಲ ಕ್ಷೇತ್ರಗಳಲ್ಲೂ ಸಾಧನೆಗಳನ್ನು ಮಾಡಿರುವುದು ಇತಿಹಾಸದ ಪುಟವನ್ನು ನೋಡಿದಾಗಿ ತಿಳಿದು ಬರುತ್ತದೆ. ಈ ಹಿಂದೆ ಕೇವಲ ಅಡುಗೆ ಕೋಣೆಗೆ ಸೀಮಿತಳಾಗಿದ್ದ ಮಹಿಳೆಯರನ್ನು ಸೀಮಿತಗೊಳಿಸಲಾಗಿತ್ತು. ಝಾನ್ಸಿರಾಣಿ ಲಕ್ಷ್ಮೀಬಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಮದರ್ ಥೆರೇಸಾ, ಕಿರಣ್ ಬೇಡಿ ಅಂಥವರು ಹೆಣ್ಣು ಅಬಲೆಯಲ್ಲ, ಸಬಲೆ ಎಂದು ತೋರ್ಪಡಿಸಿದ್ದಾಳೆ ಎಂದರು.
 
ಇದೇ ಸಂದರ್ಭ ಐವರು ಮಹಿಳೆಯರಿಗೆ ‘ಪಂಚಮಿತ್ರ’ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು. ಕ್ರೀಡಾ ಕ್ಷೇತ್ರದಿಂದ ಶಾಂತವೇರಿ ಗ್ರಾಮದ ದೇವರಾಜಮ್ಮ, ಶಿಕ್ಷಣ ಕ್ಷೇತ್ರದಿಂದ ಹಾನಗಲ್ಲು ಗ್ರಾಮದ ನಿವೃತ್ತ ಶಿಕ್ಷಕಿ ತಂಗಮ್ಮ, ಸಮಾಜ ಸೇವೆಯಲ್ಲಿ ಪಟ್ಟಣ ಪಂಚಾಯಿತಿ ಪೌರಕಾರ್ಮಿಕರಾದ ಕಾಳಮ್ಮ, ಕೃಷಿ ಕ್ಷೇತ್ರದಲ್ಲಿ ಕುಸುಬೂರು ಗ್ರಾಮದ ಚಂದ್ರಿಕಾ ಕುಮಾರ್ ಹಾಗೂ ಯಶಸ್ವಿ ಉದ್ಯಮಿಗಳಾದ ಕುಸುಬೂರು ಗ್ರಾಮದ ಶಕುಂತಲಾ ಅವರು ಪ್ರಶಸ್ತಿಗೆ ಭಾಜನರಾದರು.
 
ದಿನಾಚರಣೆ ಪ್ರಯುಕ್ತ ಬೆಳಿಗ್ಗೆ ಅಂಗನವಾಡಿ ಸಿಬ್ಬಂದಿಗೆ ವಿವಿಧ ಕ್ರೀಡಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿತ್ತು. ರಂಗೋಲಿ ಸ್ಪರ್ಧೆಯಲ್ಲಿ ಪಲಿತಾ ಪ್ರಥಮ ಬಹುಮಾನ ಪಡೆದರು. ಅಶ್ವಿನಿ ದ್ವಿತೀಯ ಹಾಗೂ ಸವಿತಾ ತೃತೀಯ ಬಹುಮಾನ ಪಡೆದರು.
 
ಇಟ್ಟಿಗೆ ಮೇಲೆ ಗಂಟೆ ಹಿಡಿದು ನಡೆಯುವ ಸ್ಪರ್ಧೆಯಲ್ಲಿ ಬೆಳ್ಯಮ್ಮ ಪ್ರಥಮ, ಜನ್ನಿಫರ್ ತಾರಾ ಲೋಬೋ ದ್ವಿತೀಯ ಹಾಗೂ ವನಜಾ ತೃತೀಯ ಬಹುಮಾನ ಪಡೆದರು. ಸಂಗೀತ ಕುರ್ಚಿ ಸ್ಪರ್ಧೆಯಲ್ಲಿ ಇಂದ್ರಾಣಿ ಪ್ರಥಮ ಬಹುಮನ ಪಡೆದರೆ, ದ್ವಿತೀಯ ಬಹುಮಾನವನ್ನು ಕುಸುಮಾ ಮತ್ತು ತೃತೀಯ ಬಹುಮಾನವನ್ನು ಪೂರ್ಣಿಮಾ ಕುಮಾರಿ ಪಡೆದರು.
 
ಅಧ್ಯಕ್ಷತೆಯನ್ನು ಜೇಸಿ ಮಹಿಳಾ ಘಟಕದ ಅಧ್ಯಕ್ಷೆ ಮೀನಾ ಮಂಜುನಾಥ್ ವಹಿಸಿದ್ದರು. ವೇದಿಕೆಯಲ್ಲಿ ಜೇಸಿ ಸಂಸ್ಥೆಯ ಅಧ್ಯಕ್ಷ ಬಿ.ಎಸ್. ಮನೋಹರ್, ಜೇಸಿ ವಲಯಾಧಿಕಾರಿ ಕೆ.ಜೆ. ಗಿರೀಶ್, ಸಹ ಕಾರ್ಯದರ್ಶಿ ಉಷಾ ಪ್ರಕಾಶ್, ಮಹಿಳಾ ಸಮಾಜದ ಅಧ್ಯಕ್ಷೆ ನಳಿನಿ ಗಣೇಶ್, ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕಿ ಕವಿತಾ ವಿರೂಪಾಕ್ಷ ಇತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.