ADVERTISEMENT

ಕಾಫಿನಾಡಿನಲ್ಲಿ ಅಡಿಕೆ ಕೃಷಿ

​ಪ್ರಜಾವಾಣಿ ವಾರ್ತೆ
Published 3 ಜನವರಿ 2018, 10:08 IST
Last Updated 3 ಜನವರಿ 2018, 10:08 IST

ನಾಪೋಕ್ಲು: ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಈಗ ಕಾಫಿ ಕೊಯ್ಲು ಬಿರುಸಿನಿಂದ ಸಾಗುತ್ತಿದ್ದರೆ ಸಮೀಪದ ಬೊಳಿಬಾಣೆ ಎಂಬಲ್ಲಿ ಕಾರ್ಮಿಕರು ಅಡಿಕೆ ಸುಲಿಯುವ, ಬೇಯಿಸುವ, ಒಣಗಿಸುವ ಕೆಲಸದಲ್ಲಿ ನಿರತರಾಗಿರುವುದು ಕಂಡುಬರುತ್ತಿದೆ.

ಕೊಡಗಿನಲ್ಲಿ ಅಲ್ಪ ಪ್ರಮಾಣದಲ್ಲಿ ಬೆಳೆಯುವ ಅಡಿಕೆಯನ್ನು ಸಂಗ್ರಹಿಸಿ ಅದನ್ನು ಸಂಸ್ಕರಿಸಿ ಮಾರಾಟ ಮಾಡುವ ಉದ್ಯಮವನ್ನು ರೂಪಿಸಿಕೊಂಡು ಹತ್ತಾರು ಕುಟುಂಬಗಳಿಗೆ ಉದ್ಯೋಗ ನೀಡುವ ಕಾರ್ಯದಲ್ಲಿ ಕೊಟ್ಟಮುಡಿಯ ಉಸ್ಮಾನ್‌ ನಿರತರಾಗಿದ್ದಾರೆ.

ಮಲೆನಾಡಿನಂತೆ ಇಲ್ಲಿ ಅಡಿಕೆ ಕೊಯ್ಲು ಸಂಸ್ಕರಣೆಯ ಕಾರ್ಯಗಳು ಕಂಡುಬರುವುದು ಅಪರೂಪ. ಆದರೆ ಕಳೆದ ಹತ್ತು ವರ್ಷಗಳಿಂದ ಉಸ್ಮಾನ್‌ ಅಡಿಕೆ ಸಂಸ್ಕರಣೆಯಲ್ಲಿ ನಿರತರಾಗಿದ್ದಾರೆ. ಅಡಿಕೆ ವಹಿವಾಟಿನಲ್ಲಿ ಯಶಸ್ಸು ಕಂಡಿದ್ದಾರೆ.

ADVERTISEMENT

ಮಲೆನಾಡಿನಲ್ಲಿರುವಂತೆ ಅಡಿಕೆ ಕೊಯ್ಲು, ಸಂಸ್ಕರಣೆಯ ಕಾರ್ಯಗಳು ಕಂಡುಬರುವುದು ಅಪರೂಪ. ಉಪಬೆಳೆಯಾಗಿ ಅಡಿಕೆಯನ್ನು ರೈತರು ಬೆಳೆಯ ಹೊರಟು ಕಾರ್ಮಿಕರ ಕೊರತೆ ಎದುರಿಸತೊಡಗಿದಾಗ ಉಸ್ಮಾನ್‌ ಅಡಿಕೆ ಸಂಸ್ಕರಣೆಗೆ ಒಲವು ತೋರಿದರು.

ದಕ್ಷಿಣ ಕನ್ನಡ, ಉತ್ತರಕನ್ನಡ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಅಡಿಕೆ ಮುಖ್ಯ ಬೆಳೆಯಾಗಿದೆ. ಕೊಡಗು ಜಿಲ್ಲೆಯಲ್ಲೂ ಅಡಿಕೆ ಬೆಳೆಯಲಾಗುತ್ತಿದೆ. ನವೆಂಬರ್ ತಿಂಗಳಿನಿಂದ ಮಾರ್ಚ್‌ ತನಕವೂ ಅಡಿಕೆಯ ಸುಗ್ಗಿ ಕಾಲ. ಈ ಅವಧಿಯಲ್ಲಿ ಕಾಫಿ ತೋಟದ ಕೆಲಸಗಳಿಗೆ ಕಾರ್ಮಿಕರು ಸಿಗುವುದಿಲ್ಲ, ಇಂಥ ಸಮಯದಲ್ಲಿ ಕಾರ್ಮಿಕರನ್ನು ಕಲೆಹಾಕುವುದು ಕಷ್ಟ ಎನ್ನುತ್ತಾರೆ ಉಸ್ಮಾನ್‌.

ಬೊಳಿಬಾಣೆಯ ಹಲವು ಕಡೆ ಅಡಿಕೆ ಸಂಸ್ಕರಣೆಯ ದೃಶ್ಯಗಳು ಕಾಣಸಿಗುತ್ತವೆ. ಅಡಿಕೆ ಸುಲಿಯುವ, ಬೇಯಿಸುತ್ತಿರುವ ಹಾಗೂ ಸುಲಿದ ಅಡಿಕೆಯನ್ನು ಒಣಗಿಸಿ ಸಂಸ್ಕರಿಸುತ್ತಿರುವ ಕಾರ್ಮಿಕರು ಇಲ್ಲಿದ್ದಾರೆ.

ಅಡಿಕೆ ಸಂಸ್ಕರಣೆಗೆ ಅನುಭವಿ ಕೆಲಸಗಾರರು ಬೇಕು. ಭದ್ರಾವತಿಯಿಂದ ಕಾರ್ಮಿಕರು ಇಲ್ಲಿಗೆ ಬರುತ್ತಾರೆ. ವರ್ಷದ ಅರು ತಿಂಗಳು ಅಡಿಕೆ ಸುಲಿಯುವ ಕಾರ್ಮಿಕರಿಗೆ ಬಿಡುವಿಲ್ಲದಷ್ಟು ಕೆಲಸ ಎಂದರು ಉಸ್ಮಾನ್‌.

ಜಿಲ್ಲೆಯ ವಿವಿಧ ಭಾಗಗಳಿಂದ ಹಸಿ ಅಡಿಕೆಯನ್ನು ಸಂಗ್ರಹಿಸಿ ಇಲ್ಲಿಗೆ ತರಲಾಗುತ್ತದೆ. ಬಳಿಕ ಸುಲಿಸಿ, ಬೇಯಿಸಿ ಸಂಸ್ಕರಿಸಿ ಒಣಗಿಸಲಾಗುತ್ತದೆ. ಸಂಸ್ಕರಿಸಿದ ಅಡಿಕೆ ಶಿವಮೊಗ್ಗ ಮಾರುಕಟ್ಟೆಯಲ್ಲಿ ಮಾರಲಾಗುತ್ತದೆ ಎಂದರು.

ದಕ್ಷಿಣ ಕೊಡಗಿನಲ್ಲಿ ಅಡಿಕೆಯನ್ನು ಹೆಚ್ಚಾಗಿ ಬೆಳೆಯಲಾಗುತ್ತಿದೆ. ಗೋಣಿಕೊಪ್ಪ, ಪಾಲಿಬೆಟ್ಟ ಭಾಗಗಳಿಂದ ಹಸಿ ಅಡಿಕೆಯನ್ನು ಸಂಗ್ರಹಿಸಲಾಗುತ್ತಿದೆ. ಜಿಲ್ಲೆಯಲ್ಲಿ ಈ ವರ್ಷ ಅಡಿಕೆ ಇಳುವರಿ ಕಡಿಮೆಯಿದ್ದು, ಬೆಳೆಗಾರರಿಗೆ ಉತ್ತಮ ದರ ಲಭಿಸುತ್ತಿದೆ’ ಎಂದರು ಕೊಟ್ಟಮುಡಿ ಉಸ್ಮಾನ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.