ADVERTISEMENT

ಬೆಂಬಳೂರು: ಬಾಣಂತಮ್ಮ ಜಾತ್ರೆ ಸಡಗರ

​ಪ್ರಜಾವಾಣಿ ವಾರ್ತೆ
Published 17 ಜನವರಿ 2018, 9:51 IST
Last Updated 17 ಜನವರಿ 2018, 9:51 IST

ಶನಿವಾರಸಂತೆ: ಸಮೀಪದ ಬೆಂಬಳೂರು ಗ್ರಾಮದ ಇತಿಹಾಸ ಪ್ರಸಿದ್ಧ ಬಾಣಂತಮ್ಮ ಜಾತ್ರಾ ಮಹೋತ್ಸವ ಮಂಗಳವಾರ ವಿಜೃಂಭಣೆಯಿಂದ ಜರುಗಿತು. ಸುತ್ತಮುತ್ತಲ ಗ್ರಾಮಸ್ಥರು ಮಹೋತ್ಸವಕ್ಕೆ ಸಾಕ್ಷಿಯಾದರು.

ಬೆಳಿಗ್ಗೆ 9ರಿಂದ ಜಾತ್ರೆ ಆರಂಭವಾಯಿತು. ಬಾಣಂತಮ್ಮ ಕೆರೆಯಲ್ಲಿ ಗಂಗಾಸ್ನಾನ, ಪೂಜೆಯ ಬಳಿಕ ದೇವಿಯ ಉತ್ಸವ ಮೂರ್ತಿ ಯನ್ನು ಅಡ್ಡಪಲ್ಲಕ್ಕಿಯಲ್ಲಿರಿಸಿ ಜಾತ್ರಾ ಮೈದಾನದ ಮಂಟಪಕ್ಕೆ ಮೆರವಣಿಗೆ ಯಲ್ಲಿ ತಂದು ಇರಿಸಲಾಯಿತು. ಭಕ್ತರು ಹೂ, ಹಣ್ಣುಕಾಯಿ ಅರ್ಪಿಸಿ ಪೂಜಿಸಿದರು. ಬೆಳಿಗ್ಗೆ ಪ್ರಸಾದ ವಿನಿಯೋಗ ಹಾಗೂ ಮಧ್ಯಾಹ್ನ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಮಧ್ಯಾಹ್ನ 1ಕ್ಕೆ ಬಾಣಂತಮ್ಮ ದೇವಿ ಯನ್ನು ಪುನಃ ಮೆರವಣಿಗೆಯಲ್ಲಿ ತಂದು ದೇವಸ್ಥಾನದಲ್ಲಿ ಇರಿಸಲಾಯಿತು.

ಮಧ್ಯಾಹ್ನ 2ಕ್ಕೆ ಬಾಣಂತಮ್ಮನ ಮಗ ಕುಂಟ ಕುಮಾರಲಿಂಗೇಶ್ವರ ಉತ್ಸವ ಮೂರ್ತಿಯನ್ನು ಅಡ್ಡ ಪಲ್ಲಕ್ಕಿಯಲ್ಲಿರಿಸಿ ಕುಂಟುತ್ತಲೇ ಮೆರವಣಿಗೆಯಲ್ಲಿ ಜಾತ್ರಾ ಮಂಟಪಕ್ಕೆ ತಂದು ಇರಿಸಿ ಪೂಜಿಸಲಾಯಿತು. ಭಕ್ತರು ಪೂಜೆ ಸಲ್ಲಿಸಿದ ಬಳಿಕ ಮರಳಿ ಮೆರವಣಿಗೆಯಲ್ಲಿ ದೇವಸ್ಥಾನಕ್ಕೆ ತರುವ ಮೂಲಕ ಜಾತ್ರೋತ್ಸವಕ್ಕೆ ತೆರೆ ಎಳೆಯಲಾಯಿತು. ಮೈದಾನದಲ್ಲಿ ಅಲಂಕಾರಿಕ ವಸ್ತುಗಳು, ಮಕ್ಕಳ ಆಟಿಕೆಗಳು, ಹೋಟೆಲ್, ತಿಂಡಿ– ತಿನಿಸುಗಳ ಅಂಗಡಿಗಳು ಮಹಿಳೆಯರು ಹಾಗೂ ಮಕ್ಕಳನ್ನು ಆಕರ್ಷಿಸಿದವು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.