ADVERTISEMENT

ಪ್ರತಿಭಟನೆಗೆ ಕೊಡವ ಸಮಾಜ ಬೆಂಬಲ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2018, 9:21 IST
Last Updated 8 ಫೆಬ್ರುವರಿ 2018, 9:21 IST

ಗೋಣಿಕೊಪ್ಪಲು: ಕೊಡಗಿನಲ್ಲಿ ನಿರ್ಮಿಸಲು ಉದ್ದೇಶಿಸಿರುವ ರೈಲು ಮಾರ್ಗ ವಿರೋಧಿಸಿ ಫೆ.18ರಂದು ಮೈಸೂರಿನಲ್ಲಿ ನಡೆಯಲಿರುವ ಪ್ರತಿಭಟನೆಗೆ ಕೊಡವ ಸಮಾಜ ಒಕ್ಕೂಟ ಬೆಂಬಲ ವ್ಯಕ್ತಪಡಿಸಲಿದೆ ಎಂದು ಒಕ್ಕೂಟದ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಹೇಳಿದರು.

ಬಾಳುಗೋಡು ಕೊಡವ ಫೆಡರೇಷನ್ ಸಭಾಂಗಣದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಗೆ ಮಾರಕವಾಗುವ ಯಾವುದೇ ಯೋಜನೆಗಳನ್ನು ವಿರೋಧಿಸುವ ಸಂಘಟನೆಗೆ ಒಕ್ಕೂಟದ ಸಂಪೂರ್ಣ ಬೆಂಬಲ ನೀಡಲಾಗುವುದು. ಜಿಲ್ಲೆಯ ಸಾಂಸ್ಕೃತಿಕ, ಧಾರ್ಮಿಕ ಕೇಂದ್ರಗಳು ಹಾಗೂ ಶಾಲಾ ಕಾಲೇಜಿಗೆ ತೊಂದರೆಯಾಗುವ ಮೈಸೂರು ತೆಲಚೇರಿ ರೈಲು ಮಾರ್ಗ ಯೋಜನೆಯನ್ನು ಎಲ್ಲ ಸಂಘಸಂಸ್ಥೆಗಳು ಹಾಗೂ ಜನಪ್ರತಿನಿಧಿಗಳು ಒಗ್ಗೂಡಿ ಹೋರಾಟ ನಡೆಸಬೇಕು ಎಂದು ಹೇಳಿದರು.

ಒಕ್ಕೂಟದ ಪೋಷಕ ಸದಸ್ಯ ಎಂ.ಸಿ.ನಾಣಯ್ಯ, ‘ರೈಲು ಮಾರ್ಗದಿಂದ ಜಿಲ್ಲೆಗೆ ಯಾವುದೇ ಪ್ರಯೋಜನವಿಲ್ಲ. ಈ ಯೋಜನೆಯಿಂದ ಕೊಡಗಿನ ಮೇಲೆ ಉಂಟಾಗುವ ದುಷ್ಪರಿಣಾಮವನ್ನು ಊಹಿಸಲು ಅಸಾಧ್ಯ. ಈ ನಿಟ್ಟಿನಲ್ಲಿ ಎಲ್ಲರೂ ಒಗ್ಗಟ್ಟಾಗಿ ಯೋಜನೆಯನ್ನು ವಿರೋಧಿಸಬೇಕು. ಕುಶಾಲನಗರದ ವರೆಗಿನ ರೈಲು ಮಾರ್ಗವನ್ನೂ ತಡೆಯಬೇಕು. ಜಿಲ್ಲೆಯಲ್ಲಿ ಕೇವಲ ದ್ವಿಪಥ ರಸ್ತೆ ಸಾಕು. ನಮಗೆ ಬಹುಮಾರ್ಗ ಹೆದ್ದಾರಿಗಳ ಅವಶ್ಯಕತೆ ಇಲ್ಲ’ ಎಂದು ಹೇಳಿದರು.

ADVERTISEMENT

‘ಈ ಯೋಜನೆಯ ಹಿಂದೆ ರಾಜಕೀಯ ನಡೆಯುತ್ತಿದೆ. ಜನಪ್ರತಿನಿಧಿಗಳು ವೋಟ್ ಬ್ಯಾಂಕ್ ರಾಜಕೀಯ ಮಾಡುವುದರ ಮೂಲಕ ಸಾರ್ವಜನಿಕರಿಗೆ ತಪ್ಪು ಸಂದೇಶವನ್ನು ನೀಡುತ್ತಿದ್ದಾರೆ. ಹೈಟೆನ್ಷನ್ ವಿದ್ಯುತ್ ಮಾರ್ಗ ಅಳವಡಿಸುವ ಸಂದರ್ಭದಲ್ಲೂ ಇದೇ ರೀತಿಯ ಗೊಂದಲ ಏರ್ಪಟ್ಟಿತ್ತು. ಈ ನಿಟ್ಟಿನಲ್ಲಿ ರಾಜಕೀಯ ರಹಿತವಾಗಿ ಹೋರಾಟ ನಡೆಯಬೇಕಾಗಿದೆ. ಜಿಲ್ಲೆಯ ಪ್ರತಿಯೊಂದು ಸಂಘ ಸಂಸ್ಥೆಗಳನ್ನು ಒಟ್ಟಿಗೆ ಸೇರಿಸಿಕೊಂಡು ಹೋರಾಟವನ್ನು ರೂಪಿಸಬೇಕು. ಈ ಹೋರಾಟದಲ್ಲಿ ಪ್ರತಿಯೊಬ್ಬರು ಇಲ್ಲಿನ ಮಣ್ಣನ್ನು ಉಳಿಸುವ ನಿಟ್ಟಿನಲ್ಲಿ ಹಾಗೂ ಮುಂದಿನ ಜನಾಂಗದ ಭವಿಷ್ಯದ ದೃಷ್ಟಿಯಿಂದ ಹೋರಾಟದಲ್ಲಿ ಸ್ವಯಂ ಪ್ರೇರಿತರಾಗಿ ಭಾಗವಹಿಸಬೇಕು’ ಎಂದು ಹೇಳಿದರು.

ಬೆಂಗಳೂರು ಕೊಡವ ಸಮಾಜದ ಅಧ್ಯಕ್ಷ ಮಂಡೇಡ ರವಿ ಉತ್ತಪ್ಪ ಮಾತನಾಡಿ, ಬೆಂಗಳೂರಿನಲ್ಲಿ ವಾಸಿಸುತ್ತಿರುವ ಕೊಡಗಿನ ಜನರು ಹಾಗೂ ವಿವಿಧ ಸಂಘ ಸಂಸ್ಥೆಗಳು ರೈಲ್ವೆ ಯೋಜನೆಯ ವಿರುದ್ಧ ನಡೆಯುವ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡಲು ಈಗಾಗಲೇ ನಿರ್ಧರಿಸಿದ್ದಾರೆ ಎಂದರು.

ಬಾಳೆಲೆ ಕೊಡವ ಸಮಾಜದ ಅಧ್ಯಕ್ಷ ಮಲ್ಚೀರ ಬೋಸ್ ಚಿಟ್ಟಿಯಪ್ಪ, ಯುಕೊ ಸಂಚಾಲಕ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ, ಮಕ್ಕಂದೂರು ಕೊಡವ ಸಮಾಜದ ಅಧ್ಯಕ್ಷ ನಾಪಂಡ ರವಿ ಕಾಳಪ್ಪ, ಗೋಣಿಕೊಪ್ಪ ಕೊಡವ ಸಮಾಜದ ಅಧ್ಯಕ್ಷ ಚೆಕ್ಕೇರ ಸೋಮಯ್ಯ, ವೀರಾಜಪೇಟೆ ಕೊಡವ
ಸಮಾಜದ ಅಧ್ಯಕ್ಷ ವಾಂಚೀರ ನಾಣಯ್ಯ, ಫೆೆಡರೇಷನ್ ಆಫ್ ಕೊಡವ ಸಮಾಜದ ಖಜಾಂಚಿ ಚಿರಿಯಪಂಡ ಕಾಶಿಯಪ್ಪ ಮಾತನಾಡಿದರು.

ಫೆಡರೇಷನ್ ಆಫ್ ಕೊಡವ ಸಮಾಜದ ಗೌರವ ಕಾರ್ಯದರ್ಶಿ ವಾಟೇರಿರ ಶಂಕರಿ ಪೂವಯ್ಯ, ಮಡಿಕೇರಿ ಕೊಡವ ಸಮಾಜದ ಉಪಾಧ್ಯಕ್ಷ ಮಣವಟ್ಟಿರ ಚಿಣ್ಣಪ್ಪ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.