ADVERTISEMENT

ಮೈಸೂರು– ತಲಚೇರಿ ಮಾರ್ಗಕ್ಕೆ ಒಪ್ಪಿಗೆ ನೀಡಿಲ್ಲ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2018, 9:25 IST
Last Updated 8 ಫೆಬ್ರುವರಿ 2018, 9:25 IST
ಬೋಪಯ್ಯ
ಬೋಪಯ್ಯ   

ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ರೈಲ್ವೆ ಯೋಜನೆ ಸಂಬಂಧಿಸಿದಂತೆ ಶಾಸಕ ಕೆ.ಜಿ. ಬೋಪಯ್ಯ ಅವರ ಪ್ರಶ್ನೆಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಆರ್.ವಿ ದೇಶಪಾಂಡೆ ಅವರು ಲಿಖಿತ ಉತ್ತರ ನೀಡಿದ್ದಾರೆ.

ಜಿಲ್ಲೆಯಲ್ಲಿ ಯಾವ್ಯಾವ ರೈಲ್ವೆ ಯೋಜನೆಗಳಿಗೆ ಮಂಜೂರಾತಿ ನೀಡಲಾಗಿದೆ ಎಂಬ ಪ್ರಶ್ನೆಗೆ  ಮೈಸೂರು– -ಕುಶಾಲನಗರ – -ಮಡಿಕೇರಿ ರೈಲು ಮಾರ್ಗಕ್ಕೆ ಮಾತ್ರ ಮಂಜೂರಾತಿ ನೀಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

ಕೊಡಗು ಜಿಲ್ಲೆಯ ವಿರಾಜಪೇಟೆ ತಾಲ್ಲೂಕಿನ ಮೂಲಕ ಹಾದು ಹೋಗುವ ಮೈಸೂರು– ತಲಚೇರಿ ಮಾರ್ಗಕ್ಕೆ ಪೂರ್ವಭಾವಿ ಸಮೀಕ್ಷೆ ನಡೆಸಲು ಒಪ್ಪಿಗೆ ನೀಡಲಾಗಿದೆಯೇ ಎಂಬ ಪ್ರಶ್ನೆಗೆ ‘ಯೋಜನೆಗೆ ಯಾವುದೇ ಒಪ್ಪಿಗೆ ನೀಡಿಲ್ಲ’ ಎಂದು ಉತ್ತರಿಸಿದ್ದಾರೆ.

ADVERTISEMENT

ಕೇರಳ ಸರ್ಕಾರದಿಂದ ಸ್ಪಷ್ಟ ಪ್ರಸ್ತಾವನೆಯನ್ನು ನಿರೀಕ್ಷಿಸಲಾಗುತ್ತಿದ್ದು, ಪ್ರಸ್ತಾವನೆ ಸ್ವೀಕೃತಗೊಂಡ ನಂತರ ಅದನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ವಿವರಿಸಿದ್ದಾರೆ.

ಈ ಯೋಜನೆಗೆ ಸ್ಥಳೀಯ ವಿರೋಧವಿದ್ದು ತಮ್ಮ ಗಮನಕ್ಕೆ ಬಂದಿದ್ದೆಯೇ? ತಮ್ಮ ನಿಲುವೇನು? ಎಂದೂ ಬೋಪಯ್ಯ ಪ್ರಶ್ನಿಸಿದ್ದರು. ‘ಸರ್ಕಾರದ ಗಮನಕ್ಕೆ ಬಂದಿದ್ದು, ಈ ಯೋಜನೆ ಅನುಷ್ಠಾನದಿಂದ ಸ್ಥಳೀಯರ ಭಾವನೆ, ಯೋಜನೆ ಅನುಷ್ಠಾನದಿಂದ ವನ್ಯಜೀವಿ ಹಾಗೂ ಪರಿಸರದ ಮೇಲಾಗುವ ಪರಿಣಾಮ ಮತ್ತು ರಾಜ್ಯ ಸರ್ಕಾರದ ಮೇಲಾಗುವ ಆರ್ಥಿಕ ಪರಿಣಾಮಗಳನ್ನು ಮತ್ತಿತರ ಅಂಶಗಳನ್ನು ಪರಿಶೀಲಿಸಿ ಸೂಕ್ತ ನಿರ್ಧಾರಗಳನ್ನು ಕೈಗೊಳ್ಳಲಾಗುವುದು’ ಎಂದೂ ಹೇಳಿದ್ದಾರೆ.

ಮೈಸೂರಿನಿಂದ ಕುಶಾಲನಗರದ ತನಕ ಸಂಪರ್ಕ ಕಲ್ಪಿಸುವ ಯೋಜನೆಯ ಸರ್ವೆ ಕಾರ್ಯ ಪೂರ್ಣಗೊಂಡಿದ್ದು, ವರದಿಯನ್ನು ಅಂತಿಮಗೊಳಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ. ಕಾಡಾನೆ ಹಾವಳಿ ನಿಯಂತ್ರಣ ಮಾಡಿ: ವಿರಾಜಪೇಟೆ ತಾಲ್ಲೂಕಿನಲ್ಲಿ ಕಾಡಾನೆಗಳ ಹಾವಳಿ ವಿಪರೀತವಾಗಿದ್ದು ರೈತರು ಕಾಡಾನೆಗಳ ದಾಳಿಗೆ ತುತ್ತಾಗಿ ಮರಣ ಹೊಂದುತ್ತಿದ್ದಾರೆ.

ರೈಲು ಕಂಬಿಗಳ ಬೇಲಿ ನಿರ್ಮಾಣಕ್ಕೆ ಚಾಲನೆ ದೊರಕಿಲ್ಲ. ಅರಣ್ಯ ಇಲಾಖೆ ಮುಖ್ಯಸ್ಥರ ಸಭೆ ಆಹ್ವಾನಿಸಿ ಕಾಮಗಾರಿ ಕೈಗೆತ್ತಿಕೊಳ್ಳಲು ಸಂಬಂಧಿಸಿದವರಿಗೆ ಸೂಚಿಸಬೇಕು ಎಂದು ಬೋಪಯ್ಯ ಅವರು ಸಚಿವರ ಗಮನ ಸೆಳೆದಿದ್ದರು‌.

ಅರಣ್ಯ ಸಚಿವ ಬಿ. ರಮಾನಾಥ ರೈ ಅವರು, 2017–18ನೇ ಸಾಲಿನಲ್ಲಿ ರೈಲ್ವೆ ಕಂಬಿಗಳನ್ನು ಬಳಸಿ ಬೇಲಿ ನಿರ್ಮಿಸುವ ಕಾಮಗಾರಿಯ ಕುರಿತು ಮೇಲಿಂದ ಮೇಲೆ ಪ್ರಗತಿ ಪರಿಶೀಲನೆ ನಡೆಸಲಾಗುತ್ತಿದೆ. ರೈಲ್ವೆ ಇಲಾಖೆಗೆ ರೈಲ್ವೆ ಹಳಿಗಳ ಸರಬರಾಜಿಗೆ ಮುಂಗಡ ಹಣವನ್ನು ಪಾವತಿಸುವ ಬಗ್ಗೆ ಇರುವ ಅಡಚಣೆ ಗಮನಿಸಲಾಗಿದೆ ಎಂದು ಹೇಳಿದ್ದಾರೆ.

ನಾಗರಹೊಳೆಗೆಯಲ್ಲಿ ₹ 7 ಕೋಟಿ ಹಾಗೂ ಬಂಡೀಪುರ, ಬನ್ನೇರುಘಟ್ಟ, ಮಡಿಕೇರಿ ಮತ್ತು ವಿರಾಜಪೇಟೆ ವ್ಯಾಪ್ತಿಯಲ್ಲಿ ₹ 2 ಕೋಟಿಯಲ್ಲಿ ರೈಲು ಕಂಬಿ ಅಳವಡಿಕೆಗೆ ಅನುಮೋದನೆ ನೀಡಲಾಗಿದೆ. ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸಲು ಸಂಬಂಧಿಸಿದವರಿಗೆ ಸೂಚಿಸಲಾಗುವುದು ಎಂದು ಭರವಸೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.