ADVERTISEMENT

ಹಾಲಿಗಳಿಗೇ ಮಣೆ; ಅತೃಪ್ತರ ನಡೆ ಕುತೂಹಲ

ಅದಿತ್ಯ ಕೆ.ಎ.
Published 12 ಫೆಬ್ರುವರಿ 2018, 9:03 IST
Last Updated 12 ಫೆಬ್ರುವರಿ 2018, 9:03 IST
ಕೆ.ಜಿ. ಬೋಪಯ್ಯ
ಕೆ.ಜಿ. ಬೋಪಯ್ಯ   

ಮಡಿಕೇರಿ: ಕಮಲದ ಭದ್ರಕೋಟೆ ಕೊಡಗು ಜಿಲ್ಲೆಯಲ್ಲಿ ಈ ಬಾರಿ ಹೊಸ ಪ್ರಯೋಗಕ್ಕೆ ಕೈಹಾಕಲು ಬಿಜೆಪಿ ವರಿಷ್ಠರು ಹಿಂದೇಟು ಹಾಕಿದ್ದಾರೆ. ಜ. 24ರಂದು ನಡೆದ ಪರಿವರ್ತನಾ ಯಾತ್ರೆಯಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರು ಹಾಲಿ ಶಾಸಕರೇ ಈ ಬಾರಿ ಅಭ್ಯರ್ಥಿ ಗಳೆಂದು ಪರೋಕ್ಷವಾಗಿ ಹೇಳುವ ಮೂಲಕ ಅತೃಪ್ತರನ್ನು ತಣ್ಣಗಾಗಿಸುವ ಪ್ರಯತ್ನ ಮಾಡಿದ್ದಾರೆ. ಆದರೆ, ಅತೃಪ್ತರ ನಡೆ ಈಗ ಕುತೂಹಲ ಮೂಡಿಸಿದೆ.

‘ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್‌ಗೆ ಟಿಕೆಟ್‌ ನೀಡಬಾರದು. ಕ್ಷೇತ್ರದಲ್ಲಿ ಹೊಸ ಮುಖ ಪರಿಚಯಿಸಬೇಕೆಂದು’ ಸೋಮವಾರಪೇಟೆಯಲ್ಲಿ ಅತೃಪ್ತರು ಎರಡು ಸಭೆಗಳನ್ನು ನಡೆಸಿದ್ದರು. ನಿರ್ಣಯಗಳನ್ನು ವರಿಷ್ಠರಿಗೂ ಪತ್ರದ ಮೂಲಕ ತಿಳಿಸುವ ಪ್ರಯತ್ನ ನಡೆಸಿದ್ದರು. ಯಡಿಯೂರಪ್ಪ ಅವರ ಹೇಳಿಕೆಯಿಂದ ಅತೃಪ್ತರ ಓಟಕ್ಕೆ ಬ್ರೇಕ್‌ ಬಿದ್ದಿದೆ.

ಕಾಂಗ್ರೆಸ್‌ನಂತೆಯೇ ಬಿಜೆಪಿಯಲ್ಲೂ ಟಿಕೆಟ್‌ ಆಕಾಂಕ್ಷಿಗಳ ದಂಡು ದೊಡ್ಡ ದಿದ್ದು, ಟಿಕೆಟ್‌ ಘೋಷಣೆಯ ಬಳಿಕ ಬಂಡಾಯ ಸ್ಫೋಟಗೊಳ್ಳುವ ಸಾಧ್ಯತೆ ಯಿದೆ ಎಂಬ ಮಾತುಗಳು ಕ್ಷೇತ್ರದಲ್ಲಿ ಕೇಳಿ ಬರುತ್ತಿವೆ.

ADVERTISEMENT

ಮಡಿಕೇರಿ ಕ್ಷೇತ್ರದಿಂದ ಎಂ.ಪಿ. ಅಪ್ಪಚ್ಚು ರಂಜನ್‌ ಜತೆಗೆ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಬಿ.ಬಿ. ಭಾರತೀಶ್‌, ಜಿಲ್ಲಾ ಪಂಚಾಯಿತಿ ಸದಸ್ಯ ದೀಪಕ್‌ ಹಾಗೂ ಮುಖಂಡ ರವಿ ಕುಶಾಲಪ್ಪ ಟಿಕೆಟ್‌ ಆಕಾಂಕ್ಷಿಗಳು.

ಇದುವರೆಗೆ ಅಪ್ಪಚ್ಚು ರಂಜನ್‌ ನಾಲ್ಕು ಬಾರಿ ಜಯಗಳಿಸಿದ್ದಾರೆ. ಐದನೇ ಗೆಲುವಿನ ದಾರಿ ಅಷ್ಟು ಸುಲಭವಾಗಿಲ್ಲ. ಪಕ್ಷದಲ್ಲೇ ಕಾಲೆಳೆಯುವ ತಂತ್ರಗಳು ನಡೆಯುತ್ತಿವೆ. ವರಿಷ್ಠರೊಂದಿಗೆ ಅಪ್ಪಚ್ಚು ಸ್ನೇಹ ಸಂಬಂಧ ಗಟ್ಟಿಯಾಗಿಲ್ಲ. ಈ ಎಲ್ಲ ಅಂಶಗಳು ರಂಜನ್‌ ತೊಡಕಾಗುವ ಸಾಧ್ಯತೆಯಿದೆ ಎಂಬ ವಿಶ್ಲೇಷಣೆಗಳು ನಡೆಯುತ್ತಿವೆ.

ಇನ್ನೂ ಒಕ್ಕಲಿಗರು, ಅರೆ ಭಾಷಿಕರು ಹಾಗೂ ಲಿಂಗಾಯತ ಸಮುದಾಯವು ಹೆಚ್ಚಿನ ಸಂಖ್ಯೆಯಲ್ಲಿರುವ ಮಡಿಕೇರಿ ಕ್ಷೇತ್ರಕ್ಕೆ ಬೋಪಯ್ಯ ಅವರಿಗೆ ಟಿಕೆಟ್‌ ನೀಡುವ ಸಂಬಂಧ ತೆರೆಮರೆಯಲ್ಲಿ ಸಮೀಕ್ಷೆಗಳು ನಡೆಯುತ್ತಿವೆ.

ಹಾಲಿ ಶಾಸಕರಿಗೆ ಟಿಕೆಟ್‌ ನೀಡು ವುದು ಖಚಿತವಾದ ಬೆನ್ನಲೇ ಕ್ಷೇತ್ರ ಬದಲಾವಣೆ ಪ್ರಸ್ತಾಪ ಮುನ್ನೆಲೆಗೆ ಬಂದಿದೆ. ಕೊಡವರು ಹೆಚ್ಚಾಗಿರುವ ವಿರಾಜಪೇಟೆ ಕ್ಷೇತ್ರದಿಂದ ಅಪ್ಪಚ್ಚು ರಂಜನ್‌ಗೆ ಟಿಕೆಟ್‌ ನೀಡಿ, ಬೋಪಯ್ಯ ಅವರನ್ನು ಮಡಿಕೇರಿಯಿಂದ ಕಣಕ್ಕೆ ಇಳಿಸುವ ಆಲೋಚನೆ ವರಿಷ್ಠರ ಮುಂದಿದೆ.

ಅದಕ್ಕೆ ಸಂಬಂಧಪಟ್ಟ ಮಾಹಿತಿ ಯನ್ನೂ ವರಿಷ್ಠರು ಪಡೆದುಕೊಂಡಿದ್ದಾರೆ. ಅಪ್ಪಚ್ಚು ಸಹೋದರ ಸುಜಾ ಕುಶಾಲಪ್ಪ ಅವರೂ ಟಿಕೆಟ್‌ಗಾಗಿ ತೆರೆಮರೆ ಕಸರತ್ತು ನಡೆಸುತ್ತಿದ್ದಾರೆ.

ಒಂದು ವೇಳೆ ಹಾಲಿ ಶಾಸಕರಿಗೆ ಅದೇ ಕ್ಷೇತ್ರದಿಂದಲೇ ಬಿ– ಫಾರಂ ಲಭಿಸಿದರೆ ಅತೃಪ್ತರ ಬೇಡಿಕೆಗೆ ಮನ್ನಣೆ ಸಿಗದಂತೆ ಆಗಲಿದೆ. ಆಗ ಅವರ ನಡೆ ಏನೆಂಬುದನ್ನು ಚುನಾವಣೆ ತನಕ ಕಾದುನೋಡಬೇಕಿದೆ ಎಂದು ಬಿಜೆಪಿ ಮುಖಂಡರು ಹೇಳುತ್ತಾರೆ.

ಕಳೆದ ಚುನಾವಣೆಯ ಬಲಾಬಲ: 2013ರ ವಿಧಾನಸಭೆ ಚುನಾವಣೆಯಲ್ಲಿ ಎಂ.ಪಿ. ಅಪ್ಪಚ್ಚು ಅವರು ಸಮೀಪದ ಸ್ಪರ್ಧಿ ಜೆಡಿಎಸ್‌ ಬಿ.ಎ. ಜೀವಿಜಯ ಎದುರು ಕೇವಲ 4,629 ಮತಗಳಿದ್ದು ಗೆಲುವು ಸಾಧಿಸಿದ್ದರು.

ಇನ್ನು ವಿರಾಜಪೇಟೆ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿದ್ದ ದಿವಂಗತ ಬಿ.ಟಿ. ಪ್ರದೀಪ್‌ ಸಹ ಬಿಜೆಪಿ ಅಭ್ಯರ್ಥಿಗೆ ತೀವ್ರ ಪೈಪೋಟಿವೊಡ್ಡಿದ್ದರು. ಬೋಪಯ್ಯ 3,414 ಮತಗಳ ಅಂತರದಿಂದ ಗೆಲುವು ಪಡೆದಿದ್ದರು. ಈ ಬಾರಿ ಹಾಲಿ ಶಾಸಕರಿಗೆ ಪ್ರಕೃತಿ ಮಡಿಲಿನ ಅಖಾಡ ಅಷ್ಟು ಸುಲಭವಾಗಿಲ್ಲ ಎಂಬ ವಾತಾವರಣವಿದೆ.

ಮಡಿಕೇರಿ ಕ್ಷೇತ್ರ

ಕ್ರಮ ಸಂಖ್ಯೆ  ಅಭ್ಯರ್ಥಿ                 ಪಕ್ಷ          ಪಡೆದ ಮತಗಳು
1.         ಎಂ.ಪಿ.ಅಪ್ಪಚ್ಚು ರಂಜನ್‌    ಬಿಜೆಪಿ        56,696 (ಗೆಲುವು)
2.         ಬಿ.ಎ. ಜೀವಿಜಯ          ಜೆಡಿಎಸ್‌     52,067 (ಸಮೀಪ ಸ್ಪರ್ಧಿ)
3.         ಕೆ.ಎಂ. ಲೋಕೇಶ್‌          ಕಾಂಗ್ರೆಸ್‌     32,313
4.        ಎನ್‌.ಎನ್‌. ಶಂಭುಲಿಂಗಪ್ಪ   ಕೆಜೆಪಿ          5,714
5.        ಹರೀಶ್‌ ಪೂವಯ್ಯ            ಪಕ್ಷೇತರ     1,537

ವಿರಾಜಪೇಟೆ ಕ್ಷೇತ್ರ

ಕ್ರ.ಸಂ ಅಭ್ಯರ್ಥಿಗಳು        ಪಕ್ಷ        ಮತಗಳು
1.         ಕೆ.ಜಿ. ಬೋಪಯ್ಯ    ಬಿಜೆಪಿ     67,250 (ಗೆಲುವು)
2.         ಬಿ.ಟಿ. ಪ್ರದೀಪ್‌      ಕಾಂಗ್ರೆಸ್‌   63,836 (ಸಮೀಪ ಸ್ಪರ್ಧಿ)
3.         ಮಾದಪ್ಪ              ಜೆಡಿಎಸ್‌   5,880
4.        ವಿ.ಆರ್‌. ಡೆವಿಡ್‌      ಪಕ್ಷೇತರ    2,140
5.        ಎಂ.ಎನ್‌. ಅಯ್ಯಪ್ಪ    ಬಿಎಸ್‌ಆರ್‌    972

ಚುನಾವಣೆಯ ಪ್ರಮುಖ ವಿಷಯಗಳು

ಈ ಬಾರಿ ಚುನಾವಣಾ ಅಖಾಡದಲ್ಲಿ ಕೊಡಗಿನ ಸಮಸ್ಯೆಗಳ ಕುರಿತು ಆರೋಪ– ಪ್ರತ್ಯಾರೋಪಗಳು ಮೊಳಗುವ ಸಾಧ್ಯತೆಯಿದೆ. ದಿಡ್ಡಳ್ಳಿಯಲ್ಲಿ ನಡೆದ ಆದಿವಾಸಿಗಳ ಪ್ರತಿಭಟನೆ, ಅವರಿಗೆ ನಿವೇಶನ ನೀಡುವ ವಿಚಾರದಲ್ಲಿ ಮೂರು ಪಕ್ಷಗಳು ನಡೆದುಕೊಂಡ ರೀತಿ ಹಾಗೂ ನಿರ್ಲಕ್ಷ್ಯ ಧೋರಣೆ, ಪಾಲೆಮಾಡು ಕ್ರಿಕೆಟ್‌ ಸ್ಪೇಡಿಯಂಗಾಗಿ ಸ್ಮಶಾನವನ್ನೇ ತೆರವು ಮಾಡಿದ ವಿಚಾರ, ಹಕ್ಕುಪತ್ರ ನೀಡುವಲ್ಲಿ ಜನಪ್ರತಿನಿಧಿಗಳ ತೋರಿದ ಅಸಹಕಾರ, ಕಾಳುಮೆಣಸು ಕಲಬೆರಕೆ ಪ್ರಕರಣಗಳು ಪ್ರಚಾರ ಸಭೆಗಳಲ್ಲಿ ಪ್ರಸ್ತಾಪವಾಗುವ ಸಾಧ್ಯತೆಯಿದೆ.

ಈ ಸಮಸ್ಯೆಗಳು ಒಂದು ವರ್ಷಗಳ ಕಾಲ ಜಿಲ್ಲೆಯಲ್ಲಿ ಪ್ರತಿಧ್ವನಿಸಿದ್ದವು. ಇಂದೂ ಕೆಲವು ಸಮಸ್ಯೆಗಳು ಬಗೆಹರಿದಿಲ್ಲ ಎಂದು ಹೋರಾಟಗಾರರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.