ADVERTISEMENT

ಕಾಫಿ ತೋಟದಲ್ಲಿ ‘ಶ್ವೇತ ಸುಂದರಿ’

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2018, 8:57 IST
Last Updated 21 ಫೆಬ್ರುವರಿ 2018, 8:57 IST

ಗೋಣಿಕೊಪ್ಪಲು: ‘ನಡೆದು ನೋಡು ಕೊಡಗಿನ ಬೆಡಗ...’ ಎಂದು ಕವಿಯೊಬ್ಬರು ಹಾಡಿರುವಂತೆ ಕೊಡಗಿನ ಸೊಬಗನ್ನು ಈಗ ಸವಿಯಬೇಕು. ಕಣ್ಣು ಹಾಯಿಸಿದಷ್ಟಕ್ಕೂ ದೂರ ಕಾಣುವುದು ಹಸಿರು ಸಾಗರ. ಅದಕ್ಕೆ ಬೆಳ್ಳಿ ತೋರಣದ ಅಲಂಕಾರ!

ಕಾಫಿ ಗಿಡಗಳಲ್ಲಿ ಘಮ ಘಮಿಸುವ ಬಿಳಿಯ ಹೂಗಳು ಅರಳಿ ತೋರಣಗಟ್ಟಿದಂತೆ ಕಾಣುತ್ತ ಸೊಬಗು ಬೀರುತ್ತಿವೆ. ಇಡೀ ಜಿಲ್ಲೆಯಲ್ಲೀಗ ಇದರದ್ದೇ ಸುವಾಸನೆ.

ಪ್ರತಿ ವರ್ಷ ಫೆಬ್ರುವರಿ ಸಮಯದಲ್ಲಿ ಕೊಡಗಿನ ಪ್ರಕೃತಿ ಮಾತೆಗೆ ಸುಗ್ಗಿಯ ಕಾಲ. ಕಾಫಿ ತೋಟ ಮೈತುಂಬ ಹೂ ಮುಡಿದು ನರ್ತಿಸುವ ಸಮಯ. ಕಳೆದ ವಾರ ಕೊಡಗಿನ ಕೆಲವು ಭಾಗಗಳಲ್ಲಿ ಚದುರಿದಂತೆ ಬಿದ್ದ ತುಂತುರು ಮಳೆ ಹನಿಗೆ ಕಾಫಿ ಗಿಡದ ರೆಂಬೆಗಳು ಬಾಯ್ದೆರೆದಿವೆ. ಕೆಲವು ಕಡೆ ಮಂಜಿಗೆ, ಮತ್ತೆ ಕೆಲವು ಕಡೆ ಸ್ಪ್ರಿಂಕ್ಲರ್ ನೀರಿಗೆ ಹೂ ಬಿಟ್ಟಿದೆ. ಇತ್ತ ತೋಟಕ್ಕೂ ನೀರು ಹಾಯಿಸಿರುವುದರಿಂದ ಮರಗಿಡಗಳು ಚಿಗುರಿ ನಿಂತಿವೆ.

ADVERTISEMENT

ಸಾಗರದಂತೆ ಕಾಣುತ್ತಿರುವ ಕಾಫಿ ಹೂಗಳಿಗೆ ದುಂಬಿ, ಜೇನು ಹುಳುಗಳು ಮುತ್ತಿಕ್ಕುತ್ತಿವೆ. ಹೂವಿನ ಸುವಾಸನೆ ಜತೆಗೆ ಇವುಗಳ ಝೇಂಕಾರ ಪ್ರಕೃತಿಯಲ್ಲಿ ಸಂಗೀತ ನಿನಾದ ಉಂಟುಮಾಡಿದೆ.

ಕಳೆದ ಬಾರಿ ಉತ್ತಮ ಮಳೆಯಾಗಿದ್ದರಿಂದ ತೋಟದ ಕೆರೆಗಳಲ್ಲಿ ತುಸು ನೀರಿದೆ. ಇದನ್ನು ಬಳಸಿಕೊಂಡು ಬೆಳೆಗಾರರು ಹಗಲು ರಾತ್ರಿ ಸ್ಪ್ರಿಂಕ್ಲರ್ ಮೂಲಕ ಕಾಫಿಗೆ ನೀರು ಹಾಕುತ್ತಿದ್ದಾರೆ. ‘ಅರಳಿದ ಹೂಗಳು ಐದಾರು ದಿನಗಳವರೆಗೆ ಇರುತ್ತವೆ. ಆಮೇಲೆ ಕಾಯಿಗಟ್ಟಲು ತೊಡಗುತ್ತವೆ. ಈ ವೇಳೆಗೆ ಮತ್ತೊಂದು ಬಾರಿ ಗಿಡಕ್ಕೆನೀರು ಕೊಡಲೇ ಬೇಕು. ಇಲ್ಲದಿದ್ದರೆ ಹೂ ನಿಲ್ಲದೇ ಕಾಫಿ ಕಟ್ಟುವುದಕ್ಕೆ ಭಾರಿ ಹೊಡೆತ ಬೀಳುತ್ತದೆ’ ಎನ್ನುತ್ತಾರೆ ಕಾಫಿ ಬೆಳೆಗಾರ ತಿತಿಮತಿಯ ಕೀಕಿರ ವಸಂತ ಪೊನ್ನಪ್ಪ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.