ADVERTISEMENT

ಆರೋಗ್ಯ ಇಲಾಖೆ:4ಮಂದಿ ಅಮಾನತು

ರೋಗಿಗಳಿಂದ ಚಿಕಿತ್ಸೆಗೆ ಹಣ ವಸೂಲಿ; ಆರೋಗ್ಯ ಪರೀಕ್ಷೆಗಳ ದರ ನಮೂದಿಸಿಲ್ಲ

​ಪ್ರಜಾವಾಣಿ ವಾರ್ತೆ
Published 18 ಜುಲೈ 2017, 6:03 IST
Last Updated 18 ಜುಲೈ 2017, 6:03 IST

ಮಾಲೂರು: ಕರ್ತವ್ಯ ಲೋಪದ ಆರೋಪದ ಮೇಲೆ ತಾಲ್ಲೂಕು ಆರೋಗ್ಯ ಆಡಳಿತಾಧಿಕಾರಿ (ಟಿಎಚ್‌ಒ) ಡಾ.ಪ್ರಸನ್ನ ಕುಮಾರ್, ಪಟ್ಟಣದ ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ (ಎಎಂಒ) ಡಾ.ರವಿ ಶಂಕರ್, ಕಿರಿಯ ಆರೋಗ್ಯ ನಿರೀಕ್ಷಕಿ ನೀಲಿಮಾ ಹಾಗೂ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ ತಂತ್ರಜ್ಞ ನಂದನ್ ಕುಮಾರ್ ಅವರನ್ನು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿ ಅಮಾನತುಗೊಳಿಸಿದ್ದಾರೆ.

ಕಳೆದ ವಾರ ಪಟ್ಟಣದ ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ರಾಷ್ಟ್ರೀಯ ಆರೋಗ್ಯ ಅಭಿಯಾನದ ನಿರ್ದೇಶಕ ರತನ್ ಖೇಲ್‌ಕರ್ ಅವರು ರೋಗಿಯಂತೆ ಬಂದು ಚಿಕಿತ್ಸೆ ಪಡೆದಿದ್ದರು. ಆಗ ಡಾ.ರವಿಶಂಕರ್ ಪ್ರತಿಯೊಬ್ಬ ರೋಗಿಯಿಂದ ಹಣ ಪಡೆಯುತ್ತಿದ್ದು ಕಂಡು ಬಂದಿದೆ. ಆಸ್ಪತ್ರೆಯಲ್ಲಿ ಔಷಧಿಗಳ ದಾಸ್ತಾನು ಇದ್ದರೂ ಖಾಸಗಿ ಔಷಧಿ ಮಳಿಗೆಗೆ ಚೀಟಿ ಬರೆದು ಕೊಡುತ್ತಿದ್ದರು.

ಪ್ರಯೋಗ ಶಾಲೆಯಲ್ಲಿಯೂ ಹಣ ಪಡೆಯಲಾಗುತ್ತಿತ್ತು. ಆರೋಗ್ಯ ಪರೀಕ್ಷೆ ಗಳ ದರಗಳನ್ನು ಸೂಚನಾ ಫಲಕದಲ್ಲಿ ನಮೂದಿಸಿಲ್ಲ. ಶಸ್ತ್ರ ಚಿಕಿತ್ಸೆ ನಂತರ ಪುರುಷರು ಹಾಗೂ ಮಹಿಳೆಯರನ್ನು ಪ್ರತ್ಯೇಕ  ವಾರ್ಡ್ ಗಳಲ್ಲಿ ಇರಿಸದೆ ಒಂದೇ ವಾರ್ಡ್‌ನಲ್ಲಿ ಇರಿಸಲಾಗಿತ್ತು.

ADVERTISEMENT

‘ಔಷಧ ವಿತರಣ ಕೇಂದ್ರ ದಲ್ಲಿನ ಸೂಚನಾ ಫಲಕ ದಲ್ಲಿ  ದಾಸ್ತಾನಿನ ಬಗ್ಗೆ ತಪ್ಪು ಮಾಹಿತಿ ನೀಡಲಾಗಿದೆ.  ದಾಸ್ತಾನು ಇದ್ದರೂ ಔಷಧಿಗಳು ಇಲ್ಲ ಎಂದು ನಮೂದಿಸಿ ರುವುದು ತಿಳಿದು ಬಂದಿದೆ’ ಎಂದು ಅಮಾನತು ಆದೇಶದಲ್ಲಿ ತಿಳಿಸಿದ್ದಾರೆ.

‘ಡಾ.ಪ್ರಸನ್ನ ಕುಮಾರ್ ಅವರು ಆಸ್ಪತ್ರೆಯಲ್ಲಿನ ಎಲ್ಲ ನೂನ್ಯತೆಗಳಿಗೆ  ಕಾರಣರಾಗಿದ್ದಾರೆ. ಆಡಳಿತವನ್ನು ಸಮರ್ಪಕವಾಗಿ ನಡೆಸಲು ವಿಫಲರಾಗಿ ದ್ದಾರೆ. ರವಿಶಂಕರ್ ರೋಗಿಗಳಿಗೆ ಉಚಿತವಾಗಿ ಚಿಕಿತ್ಸೆ ನೀಡದೆ ಹಣ ಪಡೆದಿದ್ದಾರೆ. ನೀಲಿಮಾ, ಔಷಧಿಗಳ ದಾಸ್ತಾನು ಇದ್ದರೂ ಸೂಚನಾ ಫಲಕ ದಲ್ಲಿ ತಪ್ಪು ಮಾಹಿತಿ ನೀಡಿದ್ದಾರೆ.

ಇವರ ಕರ್ವವ್ಯ ಲೋಪ ಮೇಲ್ನೋಟಕ್ಕೆ ಸಾಬೀತಾಗಿದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.