ADVERTISEMENT

ಇತರೆ ಭಾಷೆಗಳಿಂದ ಕನ್ನಡಕ್ಕೆ ಬಲವಾದ ಪೆಟ್ಟು: ಆತಂಕ

ಮುಳಬಾಗಿಲು: ನಾಲ್ಕನೇ ಕನ್ನಡ ಸಾಹಿತ್ಯ ಸಮ್ಮೇಳನ

​ಪ್ರಜಾವಾಣಿ ವಾರ್ತೆ
Published 18 ಫೆಬ್ರುವರಿ 2017, 7:19 IST
Last Updated 18 ಫೆಬ್ರುವರಿ 2017, 7:19 IST
ಮುಳಬಾಗಿಲು: ವಸಾಹತು ಶಾಹಿ ಇಂಗ್ಲಿಷ್, ಸಾಮ್ರಾಜ್ಯ ಶಾಹಿ ಹಿಂದಿ ಮತ್ತು ಪುರೋಹಿತ ಶಾಹಿ ಸಂಸ್ಕೃತ ಭಾಷೆಗಳಿಂದ ಕನ್ನಡ ಭಾಷೆಗೆ ಬಲವಾದ ಪೆಟ್ಟು ಬಿದ್ದಿದ್ದು, ಈ ಬಗ್ಗೆ ಎಚ್ಚೆತ್ತುಕೊಳ್ಳಬೇಕಿದೆ ಎಂದು ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್.ದ್ವಾರಕನಾಥ್ ಹೇಳಿದರು.
 
ನಗರದ ಕನ್ನಡ ಗಡಿ ಭವನದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ನಾಲ್ಕನೇ ಕನ್ನಡ ಸಾಹಿತ್ಯ ಸಮ್ಮೇಳನಉದ್ಘಾಟಿಸಿ ಮಾತನಾಡಿದರು.
 
ರಾಜ್ಯದಲ್ಲಿ ಸುಮಾರು 57 ಅಲೆಮಾರಿ ಸಮುದಾಯಗಳ ಅಧಿಕೃತ ಪ್ರಮಾಣ ಪತ್ರ ಇಲ್ಲದೆ ವಿದ್ಯಾಭ್ಯಾಸದಿಂದ ವಂಚಿತರಾಗುತ್ತಿದ್ದಾರೆ. ಅಂತಹ ಅಲೆಮಾರಿ ಜನಾಂಗಕ್ಕೆ ಸರ್ಕಾರ ಜಾತಿ ಪ್ರಮಾಣ ಪತ್ರ ನೀಡಿ ಶಾಲೆಗೆ ಕರೆತಂದರೆ ಕನ್ನಡ ಭಾಷೆಯನ್ನು ಮತ್ತಷ್ಟು ಉಳಿಸಿ ಬೆಳೆಸಲು ಸಾಧ್ಯವಾಗುತ್ತದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್‌ ಜಿಲ್ಲಾ ಘಟಕದ ಅಧ್ಯಕ್ಷ ನಾಗಾನಂದ ಕೆಂಪರಾಜ್ ಮಾತನಾಡಿ, ತಾಲ್ಲೂಕಿನಲ್ಲಿ ವಿವಿಧತೆಯಲ್ಲಿ ಏಕತೆಯನ್ನು ಕಾಣುವ ಜನರಿದ್ದಾರೆ ಎಂದರು.
 
ಸಾಹಿತ್ಯ ಸಮ್ಮೇಳನ ನಡೆಯುವುದರಿಂದ ಇಲ್ಲಿನ ಕೆರೆ ಕುಂಟೆ, ಐತಿಹಾಸಿಕ ಸ್ಥಳಗಳ ರಕ್ಷಣೆ ಮಾಡುವ ಕೆಲಸಗಳು ನಡೆಯಬೇಕಿವೆ. ಕನ್ನಡದ ಹಿರಿಯ ಲೇಖಕ ಡಿ.ವಿ.ಗುಂಡಪ್ಪ ಅವರ ಜನ್ಮ ಸ್ಥಳದಲ್ಲಿ ಅವರ ಪ್ರತಿಮೆಯನ್ನು ಅನಾವರಣಗೊಳಿಸಲು ಎಲ್ಲರೂ ಮುಂದಾಗಬೇಕು ಎಂದು ತಾಲ್ಲೂಕು ಕಸಾಪ ಅಧ್ಯಕ್ಷ ಜಯರಾಮರೆಡ್ಡಿ  ಹೇಳಿದರು.
 
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಿ.ಬಿ.ಕಾವೇರಿ, ಸಮ್ಮೇಳನ ಅಧ್ಯಕ್ಷೆ ಮಂಜುಕನ್ನಿಕಾ, ತಾ.ಪಂ ಅಧ್ಯಕ್ಷ ಎಂ.ಸಿ.ನೀಲಕಂಠೇಗೌಡ, ನಗರ ಸಭೆ ಪೌರಾಯುಕ್ತ ಪ್ರಹ್ಲಾದ್, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಗಂಗಿರೆಡ್ಡಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಕೆ.ವಿ.ಜಗನ್ನಾಥ್, ಕನ್ನಡ ಭಟ ವೆಂಕಟಪ್ಪ, ಯು.ವಿ.ನಾರಾಯಣಾಚಾರ್, ಚಾನ್‌ಪಾಷಾ, ಜಿಲ್ಲಾ ಕೋಶಾಧ್ಯಕ್ಷ ಮೇಲಾಗಾಣಿ ರತ್ನಪ್ಪ, ಚಂದ್ರಪ್ಪ, ಯಾನಾದಹಳ್ಳಿ ನಾರಾಯಣಸ್ವಾಮಿ, ಕೆಂಬೊಡಿ ನಾಗರಾಜ್ ಮತ್ತಿತರರು ಹಾಜರಿದ್ದರು.
 
ಸಮ್ಮೇಳನ ಅಧ್ಯಕ್ಷೆ ಮಂಜುಕನ್ನಿಕಾ  ರಚಿತ ‘ಮಧುಲಿಕೆ’, ‘ಬೆನ್ನಹತ್ತಿದ ನಾಗಕನ್ಯೆ’, ‘ಜನ್ಮದ ನೆನಪುಗಳು’, ‘ರಾಜಕುಮಾರಿ’, ‘ಬಿಳಿಕುದುರೆ’, ‘ನೀತಿ ಕತೆಗಳು’, ‘ಪುಟಾಣಿ ಇಲಿಗಳು’, ‘ಮುದುಶ್ರೇಯ’, ‘ನಾನು ಯಾರು ಗೊತ್ತೆ?’ ಪುಸ್ತಕಗಳನ್ನು ಜಿ.ಪಂ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಬಿ.ಬಿ.ಕಾವೇರಿ ಬಿಡುಗಡೆ ಗೊಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.