ADVERTISEMENT

ಉತ್ತಮ ಮಳೆ: ಕೋಡಿ ಹರಿದ ಕೆರೆಗಳು

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2017, 8:34 IST
Last Updated 5 ಸೆಪ್ಟೆಂಬರ್ 2017, 8:34 IST

ಮುಳಬಾಗಿಲು: ತಾಲ್ಲೂಕಿನಾದ್ಯಂತ ಮೂರ್ನಾಲ್ಕು ದಿನಗಳಿಂದ ಉತ್ತಮ ಮಳೆಯಾಗಿದ್ದು, ಕೆರೆ ಕುಂಟೆ, ಗೋಕುಂಟೆ ಹಾಗೂ ತೆರೆದ ಬಾವಿಗಳು ಭರ್ತಿಯಾಗಿವೆ. ಹಲವು ಕೆರೆಗಳು ಕೋಡಿ ಹರಿದಿದ್ದು, ರೈತರು ಸಂತಸಗೊಂಡಿದ್ದಾರೆ.

ಮುಂಗಾರು ಆರಂಭದಲ್ಲಿ ಸಾಧಾರಣ ಮಳೆಯಾಗಿದ್ದರಿಂದ ಕೆರೆಗಳಿಗೆ ಅಲ್ಪಸ್ವಲ್ಪ ನೀರು ಬಂದಿತ್ತು. ಶನಿವಾರದಿಂದ (ಸೆ.2) ಭಾರಿ ಮಳೆಯಾಗಿದ್ದು, ಕೆರೆಗಳಿಗೆ ಹೆಚ್ಚಿನ ಪ್ರಮಾಣದ ನೀರು ಹರಿದು ಬಂದಿದೆ. ಆವಣಿ, ಹೊಸಕೆರೆ, ದೊಡ್ಡಹೊನ್ನ ಶೆಟ್ಟಿಹಳ್ಳಿ, ಕೀಲುಹೊಳಲಿ, ಪುತ್ತೇರಿ, ದೇವರಾಯಸಮುದ್ರ, ಮೇಲೇರಿ, ಭೀಮಾಪುರ, ಕುರುಡುಮಲೆ, ದುಗ್ಗಸಂದ್ರ, ಸಿದ್ದಘಟ್ಟ, ಮಾದಘಟ್ಟ ಗ್ರಾಮದ ಕೆರೆಗಳು ಕೋಡಿ ಬಿದ್ದಿವೆ.

ಬೆಟ್ಟದ ತಪ್ಪಲಿನ ಕೆರೆಗಳು ಎರಡೆರಡು ಬಾರಿ ಕೋಡಿ ಹರಿದಿವೆ. ಈಗಾಗಲೇ ಬಿತ್ತನೆ ಕಾರ್ಯ ಪೂರ್ಣಗೊಂಡಿದೆ. ಹೊಲಗಳಲ್ಲಿ ರಾಗಿ, ಅವರೆ, ಅಲಸಂದಿ, ತೊಗರಿ, ಸಾಸಿವೆ, ಜೋಳ ಮತ್ತು ಸಜ್ಜೆ ಪೈರು ಬೆಳೆದು ನಿಂತಿದೆ. ನೆಲಗಡಲೆ ಉತ್ತಮ ಫಸಲು ಬಿಟ್ಟಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.

ADVERTISEMENT

ಮೀನುಗಾರಿಕೆ ಜೋರು: ಕೆರೆಗಳ ಅಂಚಿನಲ್ಲಿ ಮೀನುಗಾರಿಕೆ ಜೋರಾಗಿದೆ. ಗ್ರಾಮಸ್ಥರು ಭರ್ತಿಯಾಗಿರುವ ಕೆರೆಗಳಿಗೆ ಬಲೆ ಹಾಗೂ ಗಾಳ ಹಾಕಿ ಮೀನು ಹಿಡಿಯುತ್ತಿದ್ದಾರೆ. ಹಳ್ಳಗಳಲ್ಲೂ ಮೀನು ಹಿಡಿಯಲಾಗುತ್ತಿದೆ.

ಗ್ರಾಮ ಪಂಚಾಯಿತಿ ಮತ್ತು ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯ ಕೆರೆಗಳಿಗೆ ಮೀನುಗಾರಿಕೆ ಇಲಾಖೆಯಿಂದ ಹಿಂದಿನ ವರ್ಷ ಮೀನಿನ ಮರಿಗಳನ್ನು ಬಿಡಲಾಗಿತ್ತು. ಮುಂಗಾರು ಆರಂಭದಿಂದಲೂ ಆಗಾಗ್ಗೆ ಮಳೆಯಾಗಿ ಕೆರೆಗಳಿಗೆ ನೀರು ಬಂದಿದ್ದರಿಂದ ಮೀನಿನ ಸಂತಾನೋತ್ಪತ್ತಿ ಹೆಚ್ಚಿದೆ. ಹುಣಸೆ, ಜಲ್ಲು, ಪಕ್ಕೆ, ಕೊರದೆ, ಮಾರು, ಕ್ಯಾಟ್ಲಾಕ್‌ ಮೀನು ಕೆ.ಜಿಗೆ ₹ 180ರಿಂದ ₹ 220ಕ್ಕೆ ಮಾರಾಟವಾಗುತ್ತಿವೆ.

ಈಗ ಸುರಿದಿರುವ ಮಳೆ ನೀರಿನಲ್ಲೇ ಅಲ್ಪಾವಧಿ ಬೆಳೆಗಳು ಬೆಳೆಯುತ್ತವೆ. ಆದರೆ, ಕೆರೆಗಳಲ್ಲಿ ಸಂಗ್ರಹಣೆಯಾಗಿರುವ ನೀರನ್ನು ಕೃಷಿಗೆ ಬಳಸದಂತೆ ಜಿಲ್ಲಾಧಿಕಾರಿ ಆದೇಶ ಹೊರಡಿಸಿರುವುದರಿಂದ ರೈತರು ದೀರ್ಘಾವಧಿ ಬೆಳೆಯಾದ ಭತ್ತವನ್ನು ನಾಟಿ ಮಾಡಬೇಕೆ ಅಥವಾ ಬೇಡವೆ ಎಂದು ಚಿಂತಿತರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.