ADVERTISEMENT

ಎಸ್‌ಎನ್‌ಆರ್‌ ಜಿಲ್ಲಾ ಆಸ್ಪತ್ರೆ ರಾಜ್ಯಕ್ಕೆ ಮಾದರಿ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2017, 10:08 IST
Last Updated 7 ಏಪ್ರಿಲ್ 2017, 10:08 IST

ಕೋಲಾರ: ‘ಅಭಿವೃದ್ಧಿ ಹಾಗೂ ವೈದ್ಯಕೀಯ ಸೇವೆಯಲ್ಲಿ ಜಿಲ್ಲೆಯ ಶ್ರೀನರಸಿಂಹರಾಜ (ಎಸ್‌ಎನ್‌ಆರ್‌) ಜಿಲ್ಲಾ ಆಸ್ಪತ್ರೆ  ರಾಜ್ಯದಲ್ಲೇ ಮಾದರಿ ಆಸ್ಪತ್ರೆಯಾಗಿದೆ’ ಎಂದು ರಾಷ್ಟ್ರೀಯ ಆರೋಗ್ಯ ಅಭಿಯಾನದ (ಎನ್‌ಎಚ್‌ಎಂ) ವ್ಯವಸ್ಥಾಪಕ ನಿರ್ದೇಶಕ ರತನ್‌ ಖೇಲ್ಕರ್‌ ಮೆಚ್ಚುಗೆ ವ್ಯಕ್ತಪಡಿಸಿದರು.

ನಗರದ ಎಸ್‌ಎನ್‌ಆರ್‌ ಜಿಲ್ಲಾ ಆಸ್ಪತ್ರೆಗೆ ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು, ‘ಈ ಆಸ್ಪತ್ರೆಯ ಮಾದರಿಯಲ್ಲೇ ರಾಜ್ಯದ ಎಲ್ಲಾ ಜಿಲ್ಲಾ ಆಸ್ಪತ್ರೆಗಳನ್ನು ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ’ ಎಂದು ತಿಳಿಸಿದರು.

‘ಆರೋಗ್ಯ ಕಾರ್ಯಕ್ರಮಗಳು ಈ ಆಸ್ಪತ್ರೆಯಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಂಡಿವೆ. ರಾಜ್ಯದ ಎಲ್ಲಾ ಜಿಲ್ಲಾ ಆಸ್ಪತ್ರೆಗಳಲ್ಲೂ ಇದೇ ರೀತಿಯ ವಾತಾವರಣ ಸೃಷ್ಟಿಯಾಗಬೇಕು. ಜತೆಗೆ ಆಸ್ಪತ್ರೆಗಳಲ್ಲಿನ ವೈದ್ಯಕೀಯ ಸಿಬ್ಬಂದಿ ರೋಗಿಗಳಿಗೆ ಗುಣಮಟ್ಟದ ವೈದ್ಯಕೀಯ ಸೇವೆ ನೀಡುವ ಸಂಕಲ್ಪ ಮಾಡಬೇಕು. ಎಸ್‌ಎನ್‌ಆರ್‌ ಆಸ್ಪತ್ರೆಯಲ್ಲಿ ಸಾಕಷ್ಟು ಸುಧಾರಣೆಯಾಗಿದ್ದು, ಇದರಿಂದ ಆಸ್ಪತ್ರೆ ಮೇಲೆ ಜನರಿಗೆ ನಂಬಿಕೆ ಹೆಚ್ಚಿದೆ’ ಎಂದು ಹೇಳಿದರು.

ADVERTISEMENT

‘ಮೂರ್ನಾಲ್ಕು ವರ್ಷಗಳ ಹಿಂದೆ ಎಸ್‌ಎನ್‌ಆರ್‌ ಆಸ್ಪತ್ರೆಯಲ್ಲಿ ತಿಂಗಳಿಗೆ ಸುಮಾರು 250 ಹೆರಿಗೆಗಳಾಗುತ್ತಿದ್ದವು. ಆದರೆ, ಕಳೆದ ತಿಂಗಳು 446 ಹೆರಿಗೆಗಳಾಗಿವೆ. ಈ ಅಂಕಿ ಸಂಖ್ಯೆಯೇ ಆಸ್ಪತ್ರೆ ಅಭಿವೃದ್ಧಿ ಆಗಿರುವುದಕ್ಕೆ ಸಾಕ್ಷಿ. ಹಿಂದೆ ಈ ಆಸ್ಪತ್ರೆಗೆ ಬರುತ್ತಿದ್ದ ರೋಗಿಗಳು ಚಿಕಿತ್ಸೆಗೆ ಹಣ ಕೊಡಬೇಕಿತ್ತು. ಆದರೆ ಈಗ ಆ ಪರಿಸ್ಥಿತಿ ಇಲ್ಲ’ ಎಂದರು.

ಕಾಗದರಹಿತ ಬಿಲ್‌: ‘ಮಾಹಿತಿ ತಂತ್ರಜ್ಞಾನದ ಮೂಲಕ ರಾಜ್ಯದ 47 ಆಸ್ಪತ್ರೆಗಳಲ್ಲಿ ಕಾಗದರಹಿತ ಬಿಲ್‌ ವ್ಯವಸ್ಥೆ ಜಾರಿಗೆ ಕ್ರಮ ಕೈಗೊಳ್ಳಲಾಗಿದೆ. ಇದರಿಂದ ಆಸ್ಪತ್ರೆ ಸಿಬ್ಬಂದಿಯ ಕೆಲಸ ಕಡಿಮೆಯಾಗುತ್ತದೆ. ಜಿಲ್ಲೆಯ ಶ್ರೀನಿವಾಸಪುರ ಆರೋಗ್ಯ ಕೇಂದ್ರದಲ್ಲಿ ರಿಮೋಟ್ ತೀವ್ರ ನಿಗಾ ಘಟಕ (ಐಸಿಯು) ತೆರೆಯಲಾಗುತ್ತದೆ. ದತ್ತಾಂಶ ಅಡಕ ಮಾಡಲು ಪ್ರಾಯೋಗಿಕವಾಗಿ ಜಿಲ್ಲೆಯ ಅಂಗನವಾಡಿ ಕಾರ್ಯಕರ್ತೆಯರಿಗೆ 30 ಟ್ಯಾಬ್‌ ನೀಡಲಾಗುತ್ತದೆ’ ಎಂದು ವಿವರಿಸಿದರು.

‘ರಕ್ತನಿಧಿ ಕೇಂದ್ರದಲ್ಲಿ 2,000 ಯೂನಿಟ್ ರಕ್ತ ಸಂಗ್ರಹವಿದ್ದರೆ ಸಕಾಲಕ್ಕೆ ರಕ್ತ ಸಿಗುತ್ತದೆ. ಆದರೆ, ತುಮಕೂರು, ಚಾಮರಾಜನಗರ ಜಿಲ್ಲೆ ಹೊರತುಪಡಿಸಿ ರಾಜ್ಯದ ಯಾವುದೇ ಜಿಲ್ಲೆಯಲ್ಲಿ ಈ ಗುರಿ ಮುಟ್ಟಲು ಸಾಧ್ಯವಾಗುತ್ತಿಲ್ಲ’ ಎಂದು ಹೇಳಿದರು.

ರತನ್‌ ಖೇಲ್ಕರ್‌, ಆಸ್ಪತ್ರೆಯಲ್ಲಿನ ರೋಗಿಗಳು ಮತ್ತು ವೈದ್ಯಕೀಯ ಸಿಬ್ಬಂದಿ ಜತೆ ಸಮಾಲೋಚನೆ ನಡೆಸಿದರು. ಸುರ್ವಣ ಆರೋಗ್ಯ ಟ್ರಸ್ಟ್‌ನ ವ್ಯವಸ್ಥಾಪಕ ನಿರ್ದೇಶಕಿ ಸುಧಾ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಶಿವಕುಮಾರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ವಿಜಯ್‌ಕುಮಾರ್‌, ವೈದ್ಯಾಧಿಕಾರಿ ಡಾ.ವಿಜಯಕುಮಾರಿ, ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಲತಾ ಪ್ರಮೀಳಾ ಹಾಜರಿದ್ದರು.

**

ಖಾಲಿ ಇರುವ ಹುದ್ದೆಗಳ ಭರ್ತಿ
ಆಸ್ಪತ್ರೆಯಲ್ಲಿ ಆರ್‍ಎಸ್‌ಬಿವೈ, ವಾಜಪೇಯಿ ಆರೋಗ್ಯ ಯೋಜನೆ ಸೇರಿದಂತೆ ಸರ್ಕಾರದ ಯೋಜನೆಗಳು ಅನುಷ್ಠಾನಗೊಂಡಿವೆ. ಇದರಿಂದ ಆಸ್ಪತ್ರೆಗೂ ಆದಾಯ ಬರುತ್ತಿದೆ. ಆಸ್ಪತ್ರೆಯಲ್ಲಿ ಸದ್ಯದಲ್ಲೇ ಡಯಾಲಿಸಿಸ್ ಘಟಕ ಆರಂಭಿಸಲಾಗುತ್ತದೆ.

ಖಾಲಿ ಇರುವ ವೈದ್ಯರು ಹಾಗೂ ಶುಶ್ರೂಷಕಿಯರ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಕೊರತೆ ಇರುವ 32 ಬಗೆಯ ಔಷಧಗಳ ಪೂರೈಕೆಗೆ ಕ್ರಮ ಕೈಗೊಳ್ಳಲಾಗುತ್ತದೆ.
–ರತನ್‌ ಖೇಲ್ಕರ್‌, ರಾಷ್ಟ್ರೀಯ ಆರೋಗ್ಯ ಅಭಿಯಾನದ ವ್ಯವಸ್ಥಾಪಕ ನಿರ್ದೇಶಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.