ADVERTISEMENT

ಏ.22, 23ರಂದು ಉದ್ಯೋಗ ಮೇಳ

ವೆಬ್‌ ಸೈಟ್‌ ಅನಾವರಣಗೊಳಿಸಿದ ಸಚಿವ ರಮೇಶ್‌ಕುಮಾರ್

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2017, 7:16 IST
Last Updated 9 ಮಾರ್ಚ್ 2017, 7:16 IST
ಕೋಲಾರ: ‘ಜಿಲ್ಲೆಯಲ್ಲಿ ನಿರುದ್ಯೋಗ ಸಮಸ್ಯೆ ಹೋಗಲಾಡಿಸಲು ಏ.22 ಮತ್ತು 23ರಂದು ಬೃಹತ್ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗುತ್ತಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ಆರ್.ರಮೇಶ್ ಕುಮಾರ್ ತಿಳಿಸಿದರು.
 
ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ವೃತ್ತಿ ತರಬೇತಿ ಮತ್ತು ಕೌಶಲ ಅಭಿವೃದ್ಧಿ ನಿಗಮದ ವತಿಯಿಂದ ಬುಧವಾರ ನಡೆದ ಕಾರ್ಯಕ್ರಮದಲ್ಲಿ ಉದ್ಯೋಗ ಮೇಳದ ಲಾಂಛನ ಹಾಗೂ ವೆಬ್‌ ಸೈಟ್‌ ಅನಾವರಣ ಮಾಡಿ ಅವರು ಮಾತನಾಡಿದರು.
 
ಸಾಕಷ್ಟು ಮಂದಿ ಉದ್ಯೋಗ ಆಕಾಂಕ್ಷಿಗಳು ಪ್ರತಿದಿನ ಜನಪ್ರತಿನಿಧಿಗಳ ಬಳಿಗೆ ಬರುತ್ತಾರೆ. ಇದರಿಂದ ನಿರುದ್ಯೋಗದ ಸಮಸ್ಯೆ ಎಷ್ಟಿದೆ ಎಂಬುವುದನ್ನು ಅರಿಯಬಹುದು. ಹಾಗಾಗಿ ಯುವಕ- ಯುವತಿಯರಿಗೆ ವ್ಯವಸ್ಥಿತವಾಗಿ ಉದ್ಯೋಗ ಅವಕಾಶಗಳನ್ನು ಕಲ್ಪಿಸಿ ಕೊಡಬೇಕೆಂಬ ಉದ್ದೇಶದಿಂದ ಕೋಲಾ ರದಲ್ಲಿ ಎರಡು ದಿನಗಳ ಕಾಲ ಉದ್ಯೋ ಗ ಮೇಳ ಆಯೋಜಿಸಲಾಗಿದೆ ಎಂದರು. 
 
ಉದ್ಯೋಗ ಮೇಳದಲ್ಲಿ ಸಾವಿರಾರು ಮಂದಿ ನಿರುದ್ಯೋಗಿ ಯುವಕ ಮತ್ತು ಯುವತಿಯರು ಪಾಲ್ಗೊಳ್ಳುವ ನಿರೀಕ್ಷೆ ಇರುವುದರಿಂದ ಹೆಚ್ಚಿನ ಸ್ಥಳಾವಕಾಶದ ಅಗತ್ಯ ಇದೆ. ಆದ್ದರಿಂದ ಸಿ.ಬೈರೇಗೌಡ ತಾಂತ್ರಿಕ ಮಹಾ ವಿದ್ಯಾಲಯದ ಬಳಿ ಮೇಳ ಏರ್ಪಡಿಸಲಾಗುವುದು. ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು 130ಕ್ಕೂ ಹೆಚ್ಚು ಕಂಪೆನಿಗಳು ಪಾಲ್ಗೊಳ್ಳಲಿವೆ ತಿಳಿಸಿದರು.
 
ಮೇಳದಲ್ಲಿ ಪಾಲ್ಗೊಳ್ಳುವವರು ವೆಬ್‌ಸೈಟ್‌ನಲ್ಲಿ ನೋಂದಣಿ ಮಾಡಿಕೊಳ್ಳಬಹುದು. ಇದರಿಂದಾಗಿ ನಿಮ್ಮ ಮೊಬೈಲ್‌ಗೆ ಸಂದೇಶ ಬರುತ್ತದೆ.  ಉದ್ಯೋಗ ಮೇಳದಲ್ಲಿ ಕೈಗಾರಿಕಾ ಸಚಿವ ದೇಶಪಾಂಡೆ, ಜಿಲ್ಲೆಯ ಜನಪ್ರತಿ ನಿಧಿಗಳು ಪಾಲ್ಗೊಳ್ಳಿದ್ದಾರೆ ಎಂದರು.
 
ಸಂಸದ ಕೆ.ಎಚ್.ಮುನಿಯಪ್ಪ ಮಾತ ನಾಡಿ, ‘ಜಿಲ್ಲೆಯಲ್ಲಿ ತೀವ್ರ ಬರಗಾಲ ಎದುರಾಗಿದ್ದು ತೀವ್ರವಾಗಿ ನೀರಿನ ಸಮಸ್ಯೆ ಕಾಡುತ್ತಿದೆ. ಹಾಗಾಗಿ ಎಷ್ಟೋ ಮಂದಿ ತಮ್ಮ ಮಕ್ಕಳನ್ನು ವಿದ್ಯಾಭ್ಯಾಸ ಕೊಡಿಸಿ ಉದ್ಯೋಗದ ಆಶಾಭಾವನೆ ಹೊಂದಿದ್ದಾರೆ. ಈ ಉದ್ದೇಶದಿಂದ ಉದ್ಯೋಗ ಮೇಳ ಆಯೋಜಿಸಲಾಗಿದೆ’ ಎಂದು ತಿಳಿಸಿದರು. 
 
ಈ ಹಿಂದೆ ನಗರದಲ್ಲಿ ನಡೆದ ಉದ್ಯೋಗ ಮೇಳದಲ್ಲಿ ಸುಮಾರು 13 ಸಾವಿರ ಅರ್ಜಿಗಳು ಬಂದಿದ್ದು ಅದರಲ್ಲಿ 8 ಸಾವಿರ ಮಂದಿಗೆ ಉದ್ಯೋಗ ದೊರೆಯಿತು. ಈ ಬಾರಿಯೂ ಕನಿಷ್ಟ 10 ಸಾವಿರ ಮಂದಿಗಾದರೂ ಉದ್ಯೋಗ ಅವಕಾಶಗಳು ದೊರೆಯಬೇಕು. ಅಷ್ಟೇ ಅಲ್ಲದೆ ಇದರ ಬಗ್ಗೆ ಹೆಚ್ಚಿನ ಕಾಳಜಿ ವಹಿಸಿ ಉದ್ಯೋಗಾಕಾಂಕ್ಷಿಗಳಿಗೆ ತರ ಬೇತಿ ಕೇಂದ್ರಗಳನ್ನು ತೆರೆಯಬೇಕು ಎಂದು ಹೇಳಿದರು. 
 
ಶಾಸಕರಾದ ವರ್ತೂರು ಆರ್. ಪ್ರಕಾಶ್, ಎಸ್.ಎನ್. ನಾರಾಯಣ ಸ್ವಾಮಿ, ಕೆ.ಎಸ್.ಮಂಜು ನಾಥ್‌ಗೌಡ, ರಾಮಕ್ಕ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗೀತಮ್ಮ, ಉಪಾಧ್ಯಕ್ಷೆ ಯಶೋಧಾ, ಜಿಲ್ಲಾಧಿಕಾರಿ ಡಾ.ಕೆ.ವಿ.ತ್ರಿಲೋಕ್‌ಚಂದ್ರ,  ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಿ.ಬಿ.ಕಾವೇರಿ, ನಗರಸಭೆ ಅಧ್ಯಕ್ಷೆ ಮಹಾಲಕ್ಷ್ಮಿ  ಪಾಲ್ಗೊಂಡಿದ್ದರು.

* ಉದ್ಯೋಗ ಮೇಳ ಕುರಿತು ಗೊಂದಲಗಳ ನಿವಾರಣೆಗೆ ಸಹಾಯವಾಣಿ ತೆರೆಯಲಾಗಿದೆ. ಮೇಳದಲ್ಲಿ ಪಾಲ್ಗೊಳ್ಳುವವರು ಯಾವ ಮಧ್ಯವರ್ತಿಗಳನ್ನು ಸಂಪರ್ಕಿಸಬೇಕಾಗಿಲ್ಲ.
ರಮೇಶ್ ಕುಮಾರ್, ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.