ADVERTISEMENT

ಒಂದೇ ದಿನ 10 ಖಾಸಗಿ ಬಸ್‌ ಜಪ್ತಿ

ಖಾಸಗಿ ಬಸ್‌ ಮಾಫಿಯಾಕ್ಕೆ ಕಡಿವಾಣಕ್ಕೆ ಮುಂದಾದ ಸಾರಿಗೆ ಅಧಿಕಾರಿಗಳು

​ಪ್ರಜಾವಾಣಿ ವಾರ್ತೆ
Published 23 ಮಾರ್ಚ್ 2017, 4:50 IST
Last Updated 23 ಮಾರ್ಚ್ 2017, 4:50 IST

ಕೋಲಾರ: ಜಿಲ್ಲೆಯಲ್ಲಿ ಮಿತಿ ಮೀರಿರುವ ಖಾಸಗಿ ಬಸ್‌ ಮಾಫಿಯಾಕ್ಕೆ ಕಡಿವಾಣ ಹಾಕಲು ಮುಂದಾಗಿರುವ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು (ಆರ್‌ಟಿಒ) ನಗರ ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಬುಧವಾರ ಒಂದೇ ದಿನ 10 ಖಾಸಗಿ ಬಸ್‌ಗಳನ್ನು ಜಪ್ತಿ ಮಾಡಿದ್ದಾರೆ.

ಜಿಲ್ಲೆಯಲ್ಲಿ ಸುಮಾರು 217 ಖಾಸಗಿ ಬಸ್‌ಗಳಿದ್ದು, ಈ ಪೈಕಿ 153 ಬಸ್‌ಗಳು ಅನಧಿಕೃತವಾಗಿ ಸಂಚಾರ ನಡೆಸುತ್ತಿವೆ. ಕೆಲ ಬಸ್‌ಗಳ ಮಾಲೀಕರು ಪರವಾನಗಿ ಪಡೆದ ಮಾರ್ಗವನ್ನು ಹೊರತುಪಡಿಸಿ ಬೇರೆ ಮಾರ್ಗಗಳಲ್ಲಿ ವಾಹನ ಓಡಿಸಿ ಕೆಎಸ್‌ಆರ್‌ಟಿಸಿಗೆ ನಷ್ಟ ಉಂಟು ಮಾಡುತ್ತಿದ್ದಾರೆ. ಮತ್ತೆ ಕೆಲ ಮಾಲೀಕರು  ಪರವಾನಗಿಯೇ ಇಲ್ಲದೆ ಹಾಗೂ ಒಂದೇ ನೋಂದಣಿ ಸಂಖ್ಯೆಯಲ್ಲಿ ಎರಡೆರಡು ಬಸ್‌ಗಳನ್ನು ಓಡಿಸುತ್ತಿದ್ದಾರೆ.

ಮತ್ತೊಂದೆಡೆ ಪ್ರವಾಸದ ಉದ್ದೇಶಕ್ಕೆ ಅನುಮತಿ ಪಡೆದು ಅನಧಿಕೃತವಾಗಿ ಜಿಲ್ಲೆಯಲ್ಲಿ ಬಸ್‌ ಓಡಿಸುತ್ತಿದ್ದಾರೆ. ಜಿಲ್ಲಾ ಕೇಂದ್ರ ಸೇರಿದಂತೆ ಮಾಲೂರು, ಮುಳಬಾಗಿಲು. ಬಂಗಾರಪೇಟೆ, ಶ್ರೀನಿವಾಸಪುರ, ಕೆಜಿಎಫ್‌ ಭಾಗದಲ್ಲಿ ಖಾಸಗಿ ಬಸ್‌ಗಳ ಸಂಚಾರ ಮೇರೆ ಮೀರಿದೆ.

ಬೆಂಗಳೂರು, ಚಿಕ್ಕಬಳ್ಳಾಪುರ, ಆಂಧ್ರಪ್ರದೇಶದ ಪುಂಗನೂರು, ಚಿತ್ತೂರು, ಕದಿರಿ, ಮದನಪಲ್ಲಿ, ಹಿಂದೂಪುರ, ಪಲಮನೇರು, ತಮಿಳುನಾಡಿನ ಹೊಸೂರಿಗೆ ಪ್ರತಿನಿತ್ಯ ನೂರಾರು ಖಾಸಗಿ ಬಸ್‌ಗಳು ಸಂಚರಿಸುತ್ತಿವೆ.

₹ 27 ಕೋಟಿ ನಷ್ಟ: ಖಾಸಗಿ ಬಸ್‌ ಮಾಫಿಯಾದಿಂದ ಜಿಲ್ಲೆಯಲ್ಲಿ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ (ಕೆಎಸ್‌ಆರ್‌ಟಿಸಿ) ಸಂಪಾದನೆ ಖೋತಾ ಆಗುತ್ತಿದೆ. ಕಳೆದ ಹಣಕಾಸು ವರ್ಷದಲ್ಲಿ ಕೆಎಸ್‌ಆರ್‌ಟಿಸಿಗೆ ಸುಮಾರು ₹ 27 ಕೋಟಿ ನಷ್ಟವಾಗಿದೆ.

ಈ ಹಿನ್ನೆಲೆಯಲ್ಲಿ ಕಳೆದ ತಿಂಗಳು ಜಿಲ್ಲೆಗೆ ಭೇಟಿ ನೀಡಿದ್ದ ಕೆಎಸ್‌ಆರ್‌ಟಿಸಿ ಅಧ್ಯಕ್ಷ ಕೆ.ಗೋಪಾಲ ಪೂಜಾರಿ, ಪೊಲೀಸ್, ಕೆಎಸ್ಆರ್‌ಟಿಸಿ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿಗಳ ಸಭೆ ನಡೆಸಿ ಖಾಸಗಿ ಬಸ್‌ ಮಾಫಿಯಾಕ್ಕೆ ಕಡಿವಾಣ ಹಾಕುವಂತೆ ಆದೇಶಿಸಿದ್ದರು.

ಈ ಆದೇಶದ ಅನ್ವಯ ಬುಧವಾರ ಇಡೀ ದಿನ ವಿಶೇಷ ಕಾರ್ಯಾಚರಣೆ ನಡೆಸಿದ ಕೆಎಸ್‌ಆರ್‌ಟಿಸಿ, ಪೊಲೀಸ್‌ ಹಾಗೂ ಪ್ರಾದೇಶಿಕ ಸಾರಿಗೆ ಅಧಿಕಾರಿಗಳು 50ಕ್ಕೂ ಹೆಚ್ಚು ಖಾಸಗಿ ಬಸ್‌ಗಳನ್ನು ತಡೆದು ಚಾಲನಾ ಪರವಾನಗಿ (ಡಿ.ಎಲ್‌), ರಹದಾರಿ ಪತ್ರ, ಎಫ್‌.ಸಿ, ವಾಹನ ವಿಮೆಯ ದಾಖಲೆಪತ್ರಗಳನ್ನು ಅಧಿಕಾರಿಗಳು ಪರಿಶೀಲಿಸಿದರು.

ಸೂಕ್ತ ದಾಖಲೆಪತ್ರ ಇಲ್ಲದ, ದಾಖಲೆಪತ್ರ ನವೀಕರಿಸಿಕೊಳ್ಳದ ಮತ್ತು ವಾಹನ ವಿಮೆ ಇಲ್ಲದ, ಪರವಾನಗಿ ಪಡೆದ ಮಾರ್ಗ ಬಿಟ್ಟು ಬೇರೆ ಮಾರ್ಗದಲ್ಲಿ ಸಂಚರಿಸುತ್ತಿದ್ದ ಬಸ್‌ಗಳನ್ನು ಅಧಿಕಾರಿಗಳು ಜಪ್ತಿ ಮಾಡಿ ಪೊಲೀಸರ ವಶಕ್ಕೆ ಒಪ್ಪಿಸಿದರು.

ಪ್ರವಾಸದ ಉದ್ದೇಶಕ್ಕೆ ಅನುಮತಿ ಪಡೆದಿದ್ದ ಖಾಸಗಿ ಬಸ್‌ಗಳನ್ನು ಜಿಲ್ಲೆಯ ಗ್ರಾಮಾಂತರ ಹಾಗೂ ಪಟ್ಟಣ ಪ್ರದೇಶದಲ್ಲಿ ನಿಯಮಬಾಹಿರವಾಗಿ ಓಡಿಸಲಾಗುತ್ತಿತ್ತು. ಅಲ್ಲದೇ, ವಿಜಯವಾಡ ಮತ್ತು ಬೆಂಗಳೂರಿನ ನಡುವೆ ಖಾಸಗಿ ಬಸ್‌ಗಳು ಸಂಚರಿಸುತ್ತಿದ್ದವು. ಆಂಧ್ರಪ್ರದೇಶದಲ್ಲಿ ನೊಂದಣಿಯಾದ ಬಸ್‌ಗಳನ್ನು ಅನಧಿಕೃತವಾಗಿ ಜಿಲ್ಲೆಯಲ್ಲಿ ಓಡಿಸಿ ಹಣ ಸಂಪಾದಿಸಲಾಗುತ್ತಿತ್ತು ಎಂದು ಪ್ರಾದೇಶಿಕ ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.