ADVERTISEMENT

ಕರ್ತವ್ಯಕ್ಕೆ ಅಡ್ಡಿಪಡಿಸುವವರ ವಿರುದ್ಧ ದೂರು ಕೊಡಿ

​ಪ್ರಜಾವಾಣಿ ವಾರ್ತೆ
Published 24 ಮೇ 2017, 6:54 IST
Last Updated 24 ಮೇ 2017, 6:54 IST

ಕೋಲಾರ: ‘ಕಾನೂನಾತ್ಮಕವಾಗಿ ಕಾರ್ಯ ನಿರ್ವಹಿಸುತ್ತಿದ್ದರೂ  ಸಂಘಟನೆಗಳ ಹೆಸರೇಳಿಕೊಂಡು ಕರ್ತವ್ಯಕ್ಕೆ ಅಡ್ಡಿಪಡಿಸುವವರ ವಿರುದ್ಧ ಪೊಲೀಸರಿಗೆ ದೂರು ಕೊಡಿ’ ಎಂದು ಜಿಲ್ಲಾ ಲೋಕಾಯುಕ್ತ ಇನ್‌ಸ್ಪೆಕ್ಟರ್ ಪವನ್‌ಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ನಗರದಲ್ಲಿ ಮಂಗಳವಾರ ನಡೆದ ಸಾರ್ವಜನಿಕರ ಕುಂದು ಕೊರತೆ ಹಾಗೂ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ‘ಸಮಾಜ ಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಿಗೆ ಸಂಘಟನೆಗಳ ಹೆಸರಿನಲ್ಲಿ ತೊಂದರೆ ಕೊಡುವ ವ್ಯಕ್ತಿಗಳಿಗೆ ಅಧಿಕಾರಿಗಳು ಹೆದರುವ ಅಗತ್ಯವಿಲ್ಲ. ಅಂತಹ ವ್ಯಕ್ತಿಗಳ ವಿರುದ್ಧ ಪೊಲೀಸರಿಗೆ ದೂರು ಕೊಟ್ಟು ಕ್ರಿಮಿನಲ್ ಕೇಸ್‌ ಹಾಕಿಸಿ’ ಎಂದು ತಿಳಿಸಿದರು.

ಖಾಸಗಿ ಶಿಕ್ಷಣ ಸಂಸ್ಥೆಗಳ ವಂತಿಗೆ ಹಾವಳಿ ಬಗ್ಗೆ ಸಾರ್ವಜನಿಕರು ಸಭೆಯಲ್ಲಿ ದೂರು ನೀಡಿದ ಹಿನ್ನೆಲೆಯಲ್ಲಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಅವರು, ‘ಜೂನ್ 1ರಿಂದ ಶಾಲೆಗಳು ಆರಂಭಗೊಳ್ಳುತ್ತವೆ. ಆದರೆ, ಶಾಲೆ ಆರಂಭಕ್ಕೂ ಮುನ್ನವೇ ಮಕ್ಕಳ ದಾಖಲಾತಿ ನಡೆದರೆ ಹೇಗೆ. ಶಿಕ್ಷಣ ಸಂಸ್ಥೆಗಳ ಆಟಾಟೋಪಕ್ಕೆ ಕಡಿವಾಣ ಹಾಕದಿರುವುದು ಸರಿಯಲ್ಲ’ ಎಂದು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ADVERTISEMENT

‘ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಸರ್ಕಾರ ನೀಡುವ ಸೈಕಲ್‌ಗಳ ದುರುಪಯೋಗಕ್ಕೆ ಅವಕಾಶ ನೀಡಬಾರದು. ಗ್ರಾಮೀಣ ಮಕ್ಕಳು ಮೂರ್ನಾಲ್ಕು ಕಿ.ಮೀ ದೂರ ನಡೆದು ಶಾಲೆಗಳಿಗೆ ಹೋಗುತ್ತಾರೆ ಎಂಬ ಕಾರಣಕ್ಕೆ ಸರ್ಕಾರ ಇಂತಹ ಮಹತ್ತರ ಯೋಜನೆ ಜಾರಿಗೊಳಿಸಿದೆ. ಈ ಯೋಜನೆ ದುರುಪಯೋಗವಾಗಬಾರದು. ಶಾಲೆಗಳಲ್ಲಿ ಕಡ್ಡಾಯವಾಗಿ ಶೌಚಾಲಯ ಮತ್ತು ನೀರಿನ ಸೌಕರ್ಯ ಒದಗಿಸಬೇಕು’ ಎಂದು ಸೂಚಿಸಿದರು.

ತಾರತಮ್ಯ: ‘ತಾಲ್ಲೂಕಿನ ಖಾಸಗಿ ಶಾಲೆಗಳಲ್ಲಿ ಶಿಕ್ಷಣ ಹಕ್ಕು ಕಾಯ್ದೆಯಡಿ (ಆರ್‌ಟಿಇ) 950 ಸೀಟುಗಳು ಲಭ್ಯವಿದ್ದು, 627 ಅರ್ಜಿಗಳು ಬಂದಿವೆ. ಈವರೆಗೆ ಆರ್‌ಟಿಇ ಅಡಿ 444 ಮಕ್ಕಳ ದಾಖಲಾತಿ ನಡೆದಿದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಗದೀಶ್‌ ಮಾಹಿತಿ ನೀಡಿದರು. ಇದಕ್ಕೆ ಪ್ರತಿಕ್ರಿಯಿಸಿದ ಇನ್‌ಸ್ಪೆಕ್ಟರ್‌ ಪವನ್‌ಕುಮಾರ್‌, ‘ಆರ್‌ಟಿಇ ಅಡಿ ದಾಖಲಾಗುವ ಮಕ್ಕಳ ವಿಚಾರದಲ್ಲಿ ಶಾಲೆಗಳ ಆಡಳಿತ ಮಂಡಳಿಯವರು ತಾರತಮ್ಯ ಮಾಡುತ್ತಿದ್ದಾರೆ ಎಂಬ ದೂರುಗಳಿವೆ. ಈ ಬಗ್ಗೆ ಅಧಿಕಾರಿಗಳು ಎಚ್ಚರ ವಹಿಸಬೇಕು’ ಎಂದರು.

ಸತಾಯಿಸುತ್ತಾರೆ: ‘ಬ್ಯಾಂಕ್‌ಗಳು ವಿದ್ಯಾರ್ಥಿಗಳಿಗೆ ಸಕಾಲಕ್ಕೆ ವಿದ್ಯಾರ್ಥಿವೇತನ ಕೊಡುತ್ತಿಲ್ಲ. ಹಸು ಸಾಲ ವಿತರಣೆಯಲ್ಲೂ ಬ್ಯಾಂಕ್‌ಗಳು ಸಹಕಾರ ನೀಡುತ್ತಿಲ್ಲ. ಸಾಲ ಯೋಜನೆಯಲ್ಲಿ ರೈತರ ಸಬ್ಸಿಡಿಯನ್ನು ಬ್ಯಾಂಕ್‌ಗಳಿಗೆ ಕಳುಹಿಸಿದರೂ ಸಿಬ್ಬಂದಿ ಸಕಾಲಕ್ಕೆ ಸಾಲ ನೀಡದೆ ಸತಾಯಿಸುತ್ತಾರೆ. ಕೆಎಸ್‌ಆರ್‌ಟಿಸಿ ನೌಕರರಿಗೂ ಸಕಾಲಕ್ಕೆ ಸಂಬಳದ ಹಣ ಕೊಡದೆ ತೊಂದರೆ ಮಾಡುತ್ತಿದ್ದಾರೆ’ ಎಂದು ವಿವಿಧ ಇಲಾಖೆಗಳು ಅಧಿಕಾರಿಗಳು ದೂರಿದರು.

ಇದಕ್ಕೆ ಉತ್ತರಿಸಿದ ಲೀಡ್ ಬ್ಯಾಂಕ್ ಮ್ಯಾನೇಜರ್ ಶ್ರೀನಿವಾಸರಾವ್, ‘ಜಿಲ್ಲೆಯ ಎಲ್ಲ ಬ್ಯಾಂಕ್‌ಗಳ ವ್ಯವಸ್ಥಾಪಕರೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಲಾಗುತ್ತದೆ’ ಎಂದು ಭರವಸೆ ನೀಡಿದರು. ‘ಜಿಲ್ಲೆಯು ತೀವ್ರ ಬರಗಾಲ ಎದುರಿಸುತ್ತಿದ್ದು, ಇಂತಹ ಸಂದರ್ಭದಲ್ಲಿ ಮರ ಗಿಡಗಳನ್ನು ಬೆಳೆಸಿ ಜಿಲ್ಲೆಯನ್ನು ಕಾಪಾಡಿಕೊಳ್ಳಬೇಕು.

ನೀಲಗಿರಿ ಮತ್ತು ಅಕೇಷಿಯಾ ಮರಗಳನ್ನು ಶೀಘ್ರವೇ ತೆರವುಗೊಳಿಸುವಂತೆ ಜಿಲ್ಲಾಡಳಿತ ಸೂಚನೆ ನೀಡಿದೆ. ನೀಲಗಿರಿ ಮತ್ತು ಅಕೇಷಿಯಾ ಮರಗಳಿಗೆ ಪರ್ಯಾಯವಾಗಿ ಹೆಬ್ಬೇವು, ಮಾವು, ನೇರಳೆ, ಹಲಸು, ಅರಳಿ ಮರಗಳನ್ನು ಬೆಳೆಸಬೇಕು’ ಎಂದು ಲೋಕಾಯುಕ್ತ ಇನ್‌ಸ್ಪೆಕ್ಟರ್ ಸಿದ್ದಲಿಂಗಯ್ಯ ಸಲಹೆ ನೀಡಿದರು. ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಚಂದ್ರಪ್ಪ, ಕಂದಾಯ ಇಲಾಖೆ ಅಧಿಕಾರಿ ನಾಗವೇಣಿ ಸಭೆಯಲ್ಲಿ ಪಾಲ್ಗೊಂಡಿದ್ದರು.

* * 

ಖಾಸಗಿ ಶಾಲಾ, ಕಾಲೇಜುಗಳ ವಂತಿಗೆ ಹಾವಳಿ ಬಗ್ಗೆ ಸಾಕಷ್ಟು ದೂರು ಬಂದಿವೆ. ಶಿಕ್ಷಣ ಇಲಾಖೆ ಅಧಿಕಾರಿಗಳು ಯಾವುದೇ ಒತ್ತಡಕ್ಕೆ ಮಣಿಯದೆ ಕಡಿವಾಣ ಹಾಕಬೇಕು.
ಪವನ್‌ಕುಮಾರ್
ಜಿಲ್ಲಾ ಲೋಕಾಯುಕ್ತ ಇನ್‌ಸ್ಪೆಕ್ಟರ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.