ADVERTISEMENT

ಕಲಾವಿದರು ಸಾಂಸ್ಕೃತಿಕ ರಾಯಭಾರಿಗಳು

ಜಿಲ್ಲಾ ಮಟ್ಟದ ಕಾಲೇಜು ರಂಗೋತ್ಸವ

​ಪ್ರಜಾವಾಣಿ ವಾರ್ತೆ
Published 8 ಫೆಬ್ರುವರಿ 2017, 6:24 IST
Last Updated 8 ಫೆಬ್ರುವರಿ 2017, 6:24 IST

ಕೋಲಾರ: ‘ಕಲಾವಿದರು ದೇಶದ ಸಂಸ್ಕೃತಿ ಉಳಿಸಿ ಬೆಳೆಸುವುದರ ಜತೆಗೆ ವಿವಿಧತೆಯಲ್ಲಿ ಏಕತೆ ಸಾರಬೇಕು’ ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ ನಾಗಾನಂದ ಕೆಂಪರಾಜ್ ತಿಳಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಶಿವಮೊಗ್ಗದ ರಂಗಾಯಣದ ಸಹಯೋಗದಲ್ಲಿ ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಮಂಗಳವಾರ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕಾಲೇಜು ರಂಗೋತ್ಸವದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಕಲಾವಿದರು ದೇಶದ ಸಾಂಸ್ಕೃತಿಕ ರಾಯಭಾರಿಗಳು ಎಂದರು.

ದೇಶದಲ್ಲಿ ಅತಿ ಹೆಚ್ಚು ಯುವಶಕ್ತಿ ಇರುವುದರಿಂದ ಇತರೆ ದೇಶಗಳು ಭಾರತದತ್ತ ತಿರುಗಿ ನೋಡುವಂತಾಗಿದೆ. ಆದರೆ, ಯುವ ಪ್ರತಿಭೆಗಳಿಗೆ ಪ್ರತಿಭೆಯ ಅನಾವರಣಕ್ಕೆ ಸೂಕ್ತ ವೇದಿಕೆ ಸಿಗದ ಕಾರಣ ಅವರು ರಂಗ ಪ್ರವೇಶ ಮಾಡಲು ಸಾಧ್ಯವಾಗುತ್ತಿಲ್ಲ. ಪರಿಪೂರ್ಣ ವ್ಯಕ್ತಿತ್ವ ರೂಪಿಸುವಲ್ಲಿ ಕಾಲೇಜು ರಂಗೋತ್ಸವ ಸಹಕಾರಿ ಎಂದು ಅಭಿಪ್ರಾಯಪಟ್ಟರು.

ದೇಶದ ಕಲೆ, ಸಾಹಿತ್ಯ, ಸಂಸ್ಕೃತಿ, ನಾಟಕ, ಜನಪದ ಕಲೆಗಳು ವಿಶಿಷ್ಟ ಸ್ಥಾನಮಾನ ಪಡೆದಿವೆ. ಕಲಾವಿದರು ಭಾರತೀಯ ಕಲೆ ಮತ್ತು ಸಾಂಸ್ಕೃತಿಕ ನಾಯಕರಾಗಿ ಹೊರಹೊಮ್ಮಬೇಕು. ಯುವಕ ಯುವತಿಯರಿಗೆ ಜಾನಪದ ಕಲೆಗಳ ಅರಿವು ಮೂಡಿಸಬೇಕು. ಯುವ ಪೀಳಿಗೆಯು ಕಲೆ, ಸಾಹಿತ್ಯದಲ್ಲಿ ತೊಡಗಿಸಿಕೊಳ್ಳುವ ಮೂಲಕ ಕಲೆಗಳನ್ನು ಉಳಿಸಿ ಬೆಳೆಸಲು ಮುಂದಾಗಬೇಕು ಎಂದು ಕಿವಿಮಾತು ಹೇಳಿದರು.

ಮೂಲೆ ಗುಂಪು: ಕಲಾವಿದ ಪಿ.ಮುನಿರೆಡ್ಡಿ ಮಾತನಾಡಿ, ‘ಕಲಾವಿದನಾಗಲು ಯಾವುದೇ ಪದವಿ ಅಥವಾ ಪ್ರಮಾಣಪತ್ರದ ಅಗತ್ಯವಿಲ್ಲ. ಅವನಲ್ಲಿ ವಿನಯ ಇದ್ದರೆ ಸಾಕು. ಸಮಾಜದಲ್ಲಿ ವಿವಿಧ ರೀತಿಯ ಕಲಾವಿದರಿದ್ದಾರೆ. ಈ ಹಿಂದೆ ಕಲಾವಿದರಿಗೆ ಸಿಗುತ್ತಿದ್ದ ಗೌರವ ಈಗಿನ ಸಮಾಜದಲ್ಲಿ ಸಿಗುತ್ತಿಲ್ಲ.

ಕಲಾವಿದರಿಗೆ ಸರಿಯಾದ ರೀತಿ ಪ್ರೋತ್ಸಾಹ ಸಿಗದ ಕಾರಣ ಮೂಲೆಗುಂಪಾಗಿದ್ದಾರೆ. ಕಲಾವಿದರನ್ನು ಸಮಾಜದ ಮುಖ್ಯವಾಹಿನಿಗೆ ಕರೆತರುವ ನಿಟ್ಟಿನಲ್ಲಿ ಸರ್ಕಾರ ಹೆಚ್ಚಿನ ಸೌಕರ್ಯ ಕಲ್ಪಿಸಬೇಕು’ ಎಂದರು.

‘ಇತ್ತೀಚಿನ ದಿನಗಳಲ್ಲಿ ವಿದ್ಯಾರ್ಥಿ ಸಮೂಹ ಮೊಬೈಲ್‌, ಟಿ.ವಿ, ಸಾಮಾಜಿಕ ಜಾಲತಾಣಗಳ ಮೇಲೆ ಅತಿಯಾಗಿ ಅವಲಂಬಿತವಾಗಿದೆ. ಇದರಿಂದ ಓದು ಕುಂಠಿತವಾಗುತ್ತಿದೆ. ವಿದ್ಯಾರ್ಥಿಗಳು ಮೊಬೈಲ್‌ ಹಾಗೂ ಇಂಟರ್‌ನೆಟ್‌ ಸೇವೆಯನ್ನು ಸದುದ್ದೇಶಕ್ಕೆ ಬಳಕೆ ಮಾಡಬೇಕು. ಜತೆಗೆ ಸಾಹಿತ್ಯ, ಸಂಗೀತ ಕ್ಷೇತ್ರದಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳಬೇಕು’ ಎಂದು ಗ್ರಂಥಾಲಯ ಇಲಾಖೆ ಉಪನಿರ್ದೇಶಕ ಗಣೇಶ್ ಹೇಳಿದರು.

ಒಟ್ಟಾರೆ ಎರಡು ದಿನದ ಕಾಲೇಜು ರಂಗೋತ್ಸವದಲ್ಲಿ ಮೊದಲ ದಿನ ನಾಟಕ ಪ್ರದರ್ಶನ ಹಾಗೂ ಜನಪದ ನೃತ್ಯ ಸ್ಪರ್ಧೆಗಳು ನಡೆದವು. ಸ್ಪರ್ಧೆಯಲ್ಲಿ 16 ತಂಡಗಳು ಭಾಗವಹಿಸಿದವು. ಮುನಿನಾರಾಯಣ ಮಾತನಾಡಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ರಾಮ್ ಶಿಂಧೆ, ಕಲಾವಿದ ಎಸ್.ವೆಂಕಟೇಶಪ್ಪ, ಸಮುದಾಯ ತಂಡದ ಅಧ್ಯಕ್ಷ ಅಚ್ಯುತ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.