ADVERTISEMENT

ಕಾನೂನು ತಿದ್ದುಪಡಿ ಇಂದಿನ ಅಗತ್ಯ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2017, 8:48 IST
Last Updated 10 ಮಾರ್ಚ್ 2017, 8:48 IST

ಶ್ರೀನಿವಾಸಪುರ: ಕಾನೂನು ನಿಂತ ನೀರಲ್ಲ. ಅದು ಹರಿಯುವ ನದಿ ಇದ್ದಂತೆ. ಅಗತ್ಯಕ್ಕೆ ತಕ್ಕಂತೆ ಹೊಸ ಕಾನೂನುಗಳ ಸೇರ್ಪಡೆ ಹಾಗೂ ತಿದ್ದುಪಡಿ ಇಂದಿನ ಅಗತ್ಯವಾಗಿದೆ ಎಂದು ರಾಜ್ಯ ಕಾನೂನು ಆಯೋಗದ ಅಧ್ಯಕ್ಷ ನ್ಯಾಯಮೂರ್ತಿ ಎಸ್‌.ಆರ್.ನಾಯಕ್‌ ಹೇಳಿದರು.

ಪಟ್ಟಣದ ಜೆಎಂಎಫ್‌ಸಿ ನ್ಯಾಯಾಲಯದ ಸಭಾಂಗಣದಲ್ಲಿ ಬಾರ್‌ ಕೌನ್ಸಿಲ್‌ ವತಿಯಿಂದ ಈಚೆಗೆ ಏರ್ಪಡಿಸಿದ್ದ ಕಾನೂನು ತಿದ್ದುಪಡಿ ಹಾಗೂ ಹೊಸ ಕಾನೂನುಗಳ ಸೇರ್ಪಡೆ ಕುರಿತು ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿ, ಇಂದಿನ ಸಾಮಾಜಿಕ ವ್ಯವಸ್ಥೆಗೆ ಅಗತ್ಯವಿಲ್ಲದ ಕಾನೂನುಗಳನ್ನು ತೆಗೆಯಬೇಕಾಗಿದೆ ಎಂದು ಅಭಿಪ್ರಾಯಪಟ್ಟರು.

ದೇಶದಲ್ಲಿ ಬ್ರಿಟೀಷರು ಕಾನೂನು ಪ್ರಕ್ರಿಯೆ ಜಾರಿಗೆ ತಂದರು. ಸ್ವಾತಂತ್ರ್ಯಾ ನಂತರ ನಮ್ಮದೇ ಸಂವಿಧಾನ ರಚನೆಯಾಯಿತು. ಅಂದಿನಿಂದ ಕಾನೂನು ಬದ್ಧವಾಗಿ ನಡೆದುಕೊಂಡು ಬರುತ್ತಿದ್ದೇವೆ. ಹೊಸ ಕಾನೂನು ರಚಿಸಿ ಜಾರಿಗೆ ತರುತ್ತಿದ್ದೇವೆ. ಅಗತ್ಯಕ್ಕೆ ಅನುಗುಣವಾಗಿ ಕಾನೂನು ತಿದ್ದುಪಡಿ ಮಾಡುತ್ತಿದ್ದೇವೆ.

ಕಾನೂನು ತಿದ್ದುಪಡಿ ಹಾಗೂ ಕಾನೂನು ಪರಿಶೀಲನೆ ಮಾಡುವ ಉದ್ದೇಶದಿಂದ ಕಾನೂನು ಆಯೋಗವನ್ನು ಸ್ಥಾಪಿಸಲಾಗಿದೆ. ಈಗ ಹೈಕೋರ್ಟ್‌ ಹಾಗೂ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಆಯೋಗದ ಅಧ್ಯಕ್ಷರಾಗುತ್ತಿದ್ದಾರೆ ಎಂದು ಹೇಳಿದರು.

ರಾಜ್ಯದಲ್ಲಿ 2009 ರಲ್ಲಿ ಕಾನೂನು ಆಯೋಗವನ್ನು ಜಾರಿಗೆ ತರಲಾಯಿತು. ವಿಧಾನಸೌಧದಲ್ಲಿ ಕುಳಿತು ಕಾನೂನು ತಿದ್ದುಪಡಿ ಮಾಡುವುದು ಸರಿಯಾದ ಕ್ರಮವಲ್ಲ. ಹಾಗಾಗಿ ಇಂದು ರಾಜ್ಯದಾದ್ಯಂತ ಪ್ರತಿ ನ್ಯಾಯಾಲಯದ ಬಾರ್‌ ಕೌನ್ಸಿಲ್‌ನಲ್ಲಿ ನ್ಯಾಯಾಧೀಶರೊಂದಿಗೆ ಹಾಗೂ ವಕೀಲರೊಂದಿಗೆ ಸಂವಾದ ಏರ್ಪಡಿಸಿ, ವಿಧೇಯಕ ಅಳವಡಿಕೆ ಅಥವಾ ತಿದ್ದುಪಡಿಗೆ ಶಿಫಾರಸ್ಸು ಮಾಡಲಾಗುವುದು. ಸೂಕ್ಷ್ಮ ಪರಿಶೀಲನೆಯ ನಂತರ ಉನ್ನತ ಮಟ್ಟದಲ್ಲಿ ನಿರ್ಧರಿಸಲಾಗುವುದು ಎಂದು ಹೇಳಿದರು.

ವಕೀಲ ಕೆ.ಶಿವಪ್ಪ ಮಾತನಾಡಿ, ನಮ್ಮ ದೇಶದಲ್ಲಿ ಸಂಪತ್ತಿನ ಒಂದು ಭಾಗ ಮಹಿಳೆಯರ ಹೆಸರಲ್ಲಿದೆ. ಸಿಂಹಪಾಲು ಪುರುಷರ ಅಧೀನದಲ್ಲಿದೆ. ಇನ್ನೂ ಮಹಿಳೆಯನ್ನು ಅಬಲೆ ಎಂಬ ದೃಷ್ಟಿಯಿಂದ ನೋಡಲಾಗುತ್ತಿದೆ. ಇದು ಸರಿಯಲ್ಲ. ಸಮಾಜದಲ್ಲಿ ಸ್ತ್ರೀಯರಿಗೆ,  ಪುರುಷರಿಗೆ ಸಮಾನವಾದ ಸ್ವಾತಂತ್ರ್ಯ ಇರಬೇಕು. ಕಾನೂನಿನ ದೃಷ್ಟಿಯಲ್ಲಿ ಎಲ್ಲರೂ ಸಮಾನರು.

ಕಾನೂನು ಅರಿವು ಪಡೆದಾಗ ಮಾತ್ರ ಹಕ್ಕುಗಳ ಅರಿವಾಗುತ್ತದೆ. ಕಾನೂನು ತಿದ್ದುಪಡಿ, ಸೇರ್ಪಡೆ ವಿಷಯದಲ್ಲಿ ಕಾನೂನು ಆಯೋಗ ಮಹತ್ವದ ಪಾತ್ರ ವಹಿಸುತ್ತಿದೆ ಎಂದು ಹೇಳಿದರು.

ನ್ಯಾಯಾಧೀಶ ಬಿ.ಮೋಹನ್‌ ಬಾಬು, ವಕೀಲರ ಸಂಘದ ಅಧ್ಯಕ್ಷ ರಾಜಗೋಪಾಲರೆಡ್ಡಿ, ವಕೀಲರಾದ ಸೌಭಾಗ್ಯ, ಶ್ರೀನಿವಾಸರೆಡ್ಡಿ, ವೆಂಕಟರೆಡ್ಡಿ, ನಾಗರಾಜ್‌, ವೆಂಟರವಣಪ್ಪ ವಿಚಾರ ಸಂಕಿರಣದಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.