ADVERTISEMENT

ಕೈಗಾರಿಕೀಕರಣಕ್ಕೆ ಆರೋಗ್ಯಕರ ವಾತಾವರಣ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2017, 6:36 IST
Last Updated 19 ನವೆಂಬರ್ 2017, 6:36 IST

ಕೋಲಾರ: ರಾಜ್ಯದ ರಾಜಧಾನಿಗೆ ಹತ್ತಿರದಲ್ಲೇ ಇರುವ ಜಿಲ್ಲೆಯಲ್ಲಿ ಕೈಗಾರಿಕೀಕರಣಕ್ಕೆ ಆರೋಗ್ಯಕರ ವಾತಾವರಣವಿದೆ. ಜಿಲ್ಲಾಡಳಿತ ಮೂಲಸೌಕರ್ಯ ಕಲ್ಪಿಸಿದರೆ ಹೆಚ್ಚಿನ ಕೈಗಾರಿಕೆಗಳು ಜಿಲ್ಲೆಗೆ ಬರುತ್ತವೆ ಎಂದು ಉದ್ದಿಮೆದಾರರು ಹೇಳಿದರು.

ಸರಬರಾಜುದಾರರ ಅಭಿವೃದ್ಧಿ ಮತ್ತು ಹೂಡಿಕೆದಾರರ ಶೃಂಗಸಭೆಯ ಕಾರಣ ನಗರದಲ್ಲಿ ಶನಿವಾರ ನಡೆದ ಉದ್ದಿಮೆದಾರರ ಸಭೆಯಲ್ಲಿ ತಿಳಿಸಿದರು. ಕೈಗಾರಿಕೆಗಳ ಸ್ಥಾಪನೆಗೆ ನಾವು ಸಿದ್ಧರಿದ್ದೇವೆ. ಆದರೆ ಬ್ಯಾಂಕ್‌ಗಳಿಂದ ಹಣಕಾಸು ನೆರವು ಸಿಗುತ್ತಿಲ್ಲ. ಹೀಗಾಗಿ ಸಾಕಷ್ಟು ಉದ್ದಿಮೆದಾರರು ನಿರಾಶರಾಗಿದ್ದಾರೆ ಎಂದು ಅಳಲು ತೋಡಿಕೊಂಡರು.

ಸ್ವಂತ ಜಾಗದಲ್ಲಿ ಕೈಗಾರಿಕೆ ಆರಂಭಿಸಲು ಮುಂದಾದರೆ ಕಂದಾಯ ಇಲಾಖೆ ಅಧಿಕಾರಿಗಳು ಕೈಗಾರಿಕೆ ಉದ್ದೇಶಕ್ಕೆ ಭೂ ಪರಿವರ್ತನೆ ಮಾಡಿಕೊಡಲು ವರ್ಷಗಟ್ಟಲೇ ಸಮಯ ತೆಗೆದುಕೊಳ್ಳುತ್ತಾರೆ. ಅಧಿಕಾರಿಗಳ ವಿಳಂಬ ಧೋರಣೆಯಿಂದಾಗಿ ಕಂದಾಯ ಇಲಾಖೆಗೆ ಅಲೆಯುವ ಪರಿಸ್ಥಿತಿ ಎದುರಾಗಿದೆ ಎಂದು ಉದ್ದಿಮೆದಾರರಾದ ಚೇತನ್ ಮತ್ತು ನಾಗರಾಜ್ ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ಉದ್ಯೋಗಾವಕಾಶ ಸೃಷ್ಟಿ: ’ಯಾವುದೇ ಪ್ರದೇಶದಲ್ಲಿ ಕೈಗಾರಿಕೆಗಳು ಸ್ಥಾಪನೆಯಾದಾಗ ಅಭಿವೃದ್ಧಿ ಜತೆಗೆ ಉದ್ಯೋಗಾವಕಾಶ ಸೃಷ್ಟಿಯಾಗುತ್ತದೆ. ಕೈಗಾರಿಕೆ ಬರ ಮಾಡಿಕೊಳ್ಳಲು ಮೂಲಸೌಕರ್ಯ ಕಲ್ಪಿಸುವುದು ಸರ್ಕಾರ ಹಾಗೂ ಸ್ಥಳೀಯ ಆಡಳಿತದ ಜವಾಬ್ದಾರಿ. ಕೈಗಾರಿಕೆಗಳು ಜಿಲ್ಲೆಗೆ ಯಾಕೆ ಬರುತ್ತಿಲ್ಲ ಎಂಬ ಬಗ್ಗೆ ಅಧಿಕಾರಿಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು’ ಎಂದು ಜಿಲ್ಲಾಧಿಕಾರಿ ಜಿ.ಸತ್ಯವತಿ ಹೇಳಿದರು.

ಉದ್ದಿಮೆದಾರರಿಗೆ ಕೈಗಾರಿಕೆ ಸ್ಥಾಪಿಸಲು ಮೂಲವಾಗಿ ಎದುರಾಗುವುದು ಜಾಗದ ಸಮಸ್ಯೆ. ಭೂ ಪರಿವರ್ತನೆಗೆ ಕೆಲ ದಿನಗಳ ಕಾಲಾವಕಾಶ ಬೇಕು. ಇದಕ್ಕೆ ಉದ್ದಿಮೆದಾರರು ಸಹಕರಿಸಬೇಕು. ಯಾವುದೇ ಉದ್ಯಮ ಉತ್ಪಾದಿಸುವ ವಸ್ತುಗಳು ಗುಣಮಟ್ಟದಿಂದ ಕೂಡಿದ್ದರೆ ಬೇಡಿಕೆ ಹೆಚ್ಚಾಗುತ್ತದೆ. ಜತೆಗೆ ಕಂಪೆನಿಗೆ ಹೆಚ್ಚಿನ ಆದಾಯ ಬರುತ್ತದೆ ಎಂದರು.

ಸಾಫ್ಟ್‌ವೇರ್ ಕಂಪೆನಿಯನ್ನು ನಾಲ್ಕು ಗೋಡೆ ಮಧ್ಯೆ ಆರಂಭಿಸಬಹುದು. ಆದರೆ ಜನಕ್ಕೆ ಅಗತ್ಯವಿರುವ ವಸ್ತುಗಳನ್ನು ಉತ್ಪಾದಿಸುವ ಕಂಪೆನಿಗಳನ್ನು ಗೋಡೆ ಮಧ್ಯೆ ನಡೆಸಲು ಸಾಧ್ಯವಿಲ್ಲ. ನ.23 ಮತ್ತು 24ರಂದು ಬೆಂಗಳೂರಿನಲ್ಲಿ ಸರಬರಾಜುದಾರ ಅಭಿವೃದ್ಧಿ ಹಾಗೂ ಹೂಡಿಕೆದಾರರ ಶೃಂಗಸಭೆ ನಡೆಯಲಿದ್ದು, ಉದ್ದಿಮೆದಾರರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಕೋರಿದರು.

ಸಹಕಾರ ನೀಡಬೇಕು: ‘ನಾನು ಈ ಹಿಂದೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ಜಿಲ್ಲಾಧಿಕಾರಿಯಾಗಿದ್ದಾಗ ಕೈಗಾರಿಕೆಗಳನ್ನು ಆಕರ್ಷಿಸಲು ಸಾಧ್ಯವಾಗಲಿಲ್ಲ. ಅಲ್ಲಿನ ಜನ ಕಾಫಿ ತೋಟಗಳ ಮೇಲೆ ಅವಲಂಬಿತರಾಗಿದ್ದು, ಬರ ಪರಿಸ್ಥಿತಿ ಎದುರಾಗಿತ್ತು, ಕೈಗಾರಿಕೆಗಳಿಗೆ ಆಹ್ವಾನ ನೀಡಿದರೂ ಜಿಲ್ಲೆಯತ್ತ ಬರಲಿಲ್ಲ’ ಎಂದು ತಿಳಿಸಿದರು.

ಕಾರ್ಪೊರೇಟ್ ಕಂಪೆನಿಗಳ ಸಾಮಾಜಿಕ ಹೊಣೆಗಾರಿಕೆಯಡಿ (ಸಿಎಸ್‌ಆರ್) ಕೈಗಾರಿಕಾ ಪ್ರದೇಶದಲ್ಲಿನ ಸ್ಥಳೀಯ ಗ್ರಾಮಗಳನ್ನು ಅಭಿವೃದ್ಧಿಪಡಿಸಲು ಕ್ರಿಯಾ ಯೋಜನೆ ಸಿದ್ಧಪಡಿಸಿ ಕಂಪೆನಿಗಳಿಗೆ ಕಳುಹಿಸಲಾಗುವುದು. ಇದಕ್ಕೆ ಉದ್ದಿಮೆದಾರರು ಸಹಕಾರ ನೀಡಬೇಕು ಎಂದು ಕೋರಿದರು.

ಮುಂದಿನ ಪೀಳಿಗೆಯ ಉಳಿವಿಗಾಗಿ ನೈಸರ್ಗಿಕ ಸಂಪನ್ಮೂಲಗಳನ್ನು ರಕ್ಷಿಸಬೇಕು. ಇದು ಎಲ್ಲರ ಜವಾಬ್ದಾರಿ. ಇಟ್ಟಿಗೆ ತಯಾರಿಕೆಗೆ ಮಣ್ಣು ಸಿಗುತ್ತಿಲ್ಲ ಎಂಬ ಕಾರಣಕ್ಕೆ ಕೃಷಿ ಜಮೀನುಗಳಲ್ಲಿ ಮಣ್ಣು ತೆಗೆಯುವುದು ಎಷ್ಟು ಸರಿ ಎಂದು ಇಟ್ಟಿಗೆ ಕಾರ್ಖಾನೆ ಮಾಲೀಕರನ್ನು ಪ್ರಶ್ನಿಸಿದರು.

ಕೈಗಾರಿಕೆಗಳ ಪಿತಾಮಹ: ’ಸರ್.ಎಂ.ವಿಶ್ವೇಶ್ವರಯ್ಯ ಅವರು ರಾಜ್ಯದ ಅಭಿವೃದ್ಧಿಗೆ ಪೂರಕವಾಗಿ ಕೈಗಾರಿಕೆ ಪರಿಚಯಿಸಿಕೊಟ್ಟರು. ಅವರನ್ನು ಕೈಗಾರಿಕೆಗಳ ಪಿತಾಮಹ ಎಂದು ಕರೆಯಬಹುದು’ ಎಂದು ಖಾದಿ ಮತ್ತು ಗ್ರಾಮೋದ್ಯೋಗ ಅಭಿವೃದ್ಧಿ ಮಂಡಳಿ ಅಧ್ಯಕ್ಷ ರಮೇಶ್ ಅಭಿಪ್ರಾಯಪಟ್ಟರು.

ಅವಿಭಜಿತ ಕೋಲಾರ ಜಿಲ್ಲೆಯು ಹಾಲು ಹಾಗೂ ರೇಷ್ಮೆ ಉತ್ಪಾದನೆಗೆ ಹೆಸರಾಗಿದೆ. ಜಿಲ್ಲೆಯ ನೀರಿನ ಸಮಸ್ಯೆ ಪರಿಹಾರಕ್ಕಾಗಿ ಸರ್ಕಾರ ಕೆ.ಸಿ.ವ್ಯಾಲಿ ಯೋಜನೆ ಆರಂಭಿಸಿದೆ. ಮೂರ್ನಾಲ್ಕು ತಿಂಗಳಲ್ಲಿ ಯೋಜನೆಯ ಕಾಮಗಾರಿ ಪೂರ್ಣಗೊಂಡು ಜಿಲ್ಲೆಯ ಕೆರೆಗಳಿಗೆ ನೀರು ಬರುತ್ತದೆ ಎನ್ನುವಷ್ಟರಲ್ಲಿ ಉತ್ತಮ ಮಳೆಯಾಗಿ ಕೆರೆಗಳೆಲ್ಲಾ ತುಂಬಿವೆ. ಇದರಿಂದ ಜನ ಸಂತಸಗೊಂಡಿದ್ದಾರೆ ಎಂದರು.

ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಗೀತಾ, ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ಮಂಡಳಿ ಅಧ್ಯಕ್ಷ ಗೋಪಾಲಕೃಷ್ಣ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಎಂ.ಆಂಜಿನಪ್ಪ, ಸಿಇಒ ಬಿ.ಬಿ.ಕಾವೇರಿ, ನೋಡಲ್‌ ಅಧಿಕಾರಿ ವೀರಣ್ಣ ಇದ್ದರು.

ಕೈಗಾರಿಕೆ ಆಕರ್ಷಣೆಗೆ ಕ್ರಮ
ನೀರಿನ ಸಮಸ್ಯೆಯ ಕಾರಣಕ್ಕೆ ಸಾಕಷ್ಟು ಕೈಗಾರಿಕೆಗಳು ಜಿಲ್ಲೆಯಿಂದ ವಾಪಸ್ ಹೋಗಿವೆ. ಜಿಲ್ಲೆಯಲ್ಲಿ ಈಗ ನೀರಿನ ಲಭ್ಯತೆ ಹೆಚ್ಚಿದೆ. ಜಿಲ್ಲಾಡಳಿತವು ಕೈಗಾರಿಕೆಗಳನ್ನು ಆಕರ್ಷಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಖಾದಿ ಮತ್ತು ಗ್ರಾಮೋದ್ಯೋಗ ಅಭಿವೃದ್ಧಿ ಮಂಡಳಿ ಅಧ್ಯಕ್ಷ ರಮೇಶ್ ಹೇಳಿದರು.

* * 

ಸಮಾಜ ಅಭಿವೃದ್ಧಿಗೆ ಉದ್ದಿಮೆದಾರರ ಪಾತ್ರ ಮುಖ್ಯ. ಕೈಗಾರಿಕೆ ಸ್ಥಾಪನೆಯಾಗಿರುವ ಪ್ರದೇಶ ಅಭಿವೃದ್ಧಿಗೆ ಉದ್ದಿಮೆದಾರರು ಕೈಜೋಡಿಸಬೇಕು
ಜಿ.ಸತ್ಯವತಿ,
ಜಿಲ್ಲಾಧಿಕಾರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.