ADVERTISEMENT

ಖಾಸಗಿ ಜಮೀನಿನಲ್ಲೂ ನೀಲಗಿರಿ ನಿರ್ಬಂಧ

ಪುರ ಸರ್ಕಾರಿ ಶಾಲೆಗೆ ‘ಪರಿಸರ ಮಿತ್ರ’ ಶಾಲೆ ಪ್ರಶಸ್ತಿ; ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ 78 ಶಾಲೆಗಳು

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2017, 10:17 IST
Last Updated 11 ಫೆಬ್ರುವರಿ 2017, 10:17 IST
ಕೋಲಾರದಲ್ಲಿ ಶುಕ್ರವಾರ ನಡೆದ ಪರಿಸರ ಮಿತ್ರ ಶಾಲೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಲಾವಿದರು ನೃತ್ಯ ಪ್ರದರ್ಶನ ನೀಡಿದರು
ಕೋಲಾರದಲ್ಲಿ ಶುಕ್ರವಾರ ನಡೆದ ಪರಿಸರ ಮಿತ್ರ ಶಾಲೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಲಾವಿದರು ನೃತ್ಯ ಪ್ರದರ್ಶನ ನೀಡಿದರು   

ಕೋಲಾರ: ‘ಪರಿಸರ ಮತ್ತು ಅಂತರ್ಜಲಕ್ಕೆ ಮಾರಕವಾಗಿರುವ ನೀಲಗಿರಿ ಮರಗಳನ್ನು ಖಾಸಗಿ ಜಮೀನಿನಲ್ಲೂ ಬೆಳೆಯದಂತೆ ನಿರ್ಬಂಧ ವಿಧಿಸಲು ಸರ್ಕಾರ ಚಿಂತನೆ ನಡೆಸಿದೆ’ ಎಂದು ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಕಾರ್ಯದರ್ಶಿ ಎಸ್.ಶಾಂತಪ್ಪ ತಿಳಿಸಿದರು.

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ರಾಜ್ಯ ವಿಜ್ಞಾನ ಪರಿಷತ್‌ ಹಾಗೂ ಜಿಲ್ಲಾಡಳಿತದ ಸಹಯೋಗದಲ್ಲಿ ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ಶುಕ್ರವಾರ ಆಯೋಜಿಸಿದ್ದ 2016–-17ನೇ ಸಾಲಿನ ‘ಪರಿಸರ ಮಿತ್ರ’ ಶಾಲೆ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಅಂತರ್ಜಲ ಮತ್ತು ಕೃಷಿಗೆ ಮಾರಕವಾಗಿರುವ ನೀಲಗಿರಿ ಮರಗಳನ್ನು ಸರ್ಕಾರಿ ಜಮೀನಿನಲ್ಲಿ ಬೆಳೆಯುವುದನ್ನು ಸರ್ಕಾರ ಈಗಾಗಲೇ ನಿಷೇಧಿಸಿದ್ದು, ಈ ಕ್ರಮವನ್ನು ಖಾಸಗಿ ಜಮೀನಿಗೂ ವಿಸ್ತರಿಸಲು ನಿರ್ಧರಿಸಿದೆ. ಪರಿಸರ ಸಂರಕ್ಷಣೆಗೆ ಸಾಕಷ್ಟು ಕಾನೂನುಗಳಿವೆ. ಆದರೆ, ಅವು ಪರಿಣಾಮಕಾರಿಯಾಗಿ ಅನುಷ್ಠಾನಗೊಳ್ಳುತ್ತಿಲ್ಲ. ಭೂಮಿ, ವಾಯು ಮತ್ತು ಜಲ ಮಾಲಿನ್ಯ ತಡೆಗೆ ಹಾಗೂ ಪ್ಲಾಸ್ಟಿಕ್ ತ್ಯಾಜ್ಯ ನಿಯಂತ್ರಣಕ್ಕೆ ಕಾನೂನುಗಳನ್ನು ಮತ್ತಷ್ಟು ಬಲಪಡಿಸಬೇಕು ಎಂದರು.

ಜಿಲ್ಲೆಗೆ ಸಾಕಷ್ಟು ಕೈಗಾರಿಕೆಗಳು ಬರುತ್ತಿದ್ದು, ಭವಿಷ್ಯದಲ್ಲಿ ಪರಿಸರ ಮಾಲಿನ್ಯ ನಿಯಂತ್ರಣಕ್ಕೆ ಒತ್ತು ಕೊಡಬೇಕು. ಸಾಮಾಜಿಕ ಅರಣ್ಯ ಯೋಜನೆಯಲ್ಲಿ ಮತ್ತಷ್ಟು ಶಾಲಾ ವನಗಳನ್ನು ನಿರ್ಮಾಣ ಮಾಡಬೇಕು. ಜಿಲ್ಲೆಯಲ್ಲಿ 40 ಸಾವಿರ ಹೆಕ್ಟೇರ್ ಅರಣ್ಯ ಪ್ರದೇಶವಿದ್ದು, ಜಿಲ್ಲೆಯು ಕೃಷ್ಣ ಮೃಗಗಳ ತಾಣವಾಗಿದೆ. ಗಿಡ ಮರಗಳನ್ನು ಉಳಿಸುವ ಜತೆಗೆ ಶಾಲಾ ಆವರಣ ಮತ್ತು ಸರ್ಕಾರಿ ಜಾಗಗಳಲ್ಲಿ ಸಸಿ ನೆಡಬೇಕು. ಶಾಲಾ ಮಕ್ಕಳಲ್ಲಿ ಪರಿಸರ ಕಾಳಜಿ ಹೆಚ್ಚಿಸಬೇಕು ಎಂದು ಸಲಹೆ ನೀಡಿದರು.

ಪಂಚಭೂತಗಳು ಮಲಿನ: ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ (ಪ್ರಭಾರ) ಕೆ.ಜಿ.ರಂಗಯ್ಯ ಮಾತನಾಡಿ, ‘ಮಾನವನ ದುರಾಸೆಗೆ ಪಂಚಭೂತಗಳು ಮಲಿನವಾಗುತ್ತಿವೆ. ಮಕ್ಕಳಲ್ಲಿ ಪರಿಸರ ಕಾಳಜಿ ಬೆಳೆಸುವುದು ಶಿಕ್ಷಕರ ಜವಾಬ್ದಾರಿ. ಜಿಲ್ಲೆಯಲ್ಲಿ ನೀರು ಪಾತಾಳ ತಲುಪಿದೆ. ತಜ್ಞರ ಪ್ರಕಾರ ಪರಿಸ್ಥಿತಿ ಹೀಗೆ ಮುಂದುವರಿದರೆ ಜಿಲ್ಲೆಯು ಭಾರತದ ಎರಡನೇ ಥಾರ್‌ ಮರುಭೂಮಿಯಾಗುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದರು.

ADVERTISEMENT

‘ನಾಗರೀಕತೆ ಬೆಳೆದಂತೆ ಮರುಭೂಮಿ ಹಿಂಬಾಲಿಸುತ್ತಿದೆ. ಸಂಪನ್ಮೂಲ ಜಿಲ್ಲೆ ಇಂದು ಬರುಡಾಗಿದ್ದು, ಇದನ್ನು ಉಳಿಸುವ ನಿಟ್ಟಿನಲ್ಲಿ ಭವಿಷ್ಯದ ಪ್ರಜೆಗಳಾದ ಶಾಲಾ ಮಕ್ಕಳಲ್ಲಿ ಪರಿಸರ ಕಾಳಜಿ ಬೆಳೆಸಲು ನಿರ್ಧರಿಸಿರುವುದು ಸರಿಯಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಲಕ್ಷ್ಮೀನಾರಾಯಣ ಅಭಿಪ್ರಾಯಪಟ್ಟರು.

ಉತ್ತೇಜಿಸಬೇಕು: ವಿಜ್ಞಾನ ಪರಿಷತ್ ಜಿಲ್ಲಾ ಘಟಕದ ಕಾರ್ಯದರ್ಶಿ ಮಂಜುಳಾ ಭೀಮರಾವ್ ಮಾತನಾಡಿ, ‘ಶಿವಮೊಗ್ಗ ಜಿಲ್ಲೆಯ ಜನಾರ್ದನ್‌ ಅವರ ಕನಸಾಗಿ 2013–-14ನೇ ಸಾಲಿನಿಂದ ಪರಿಸರ ಶಾಲೆ ಪ್ರಶಸ್ತಿ ಯೋಜನೆ ಚಾಲನೆಗೆ ಬಂತು. ಮಕ್ಕಳಲ್ಲಿ ನೀರಿನ ಮಿತ ಬಳಕೆ, ತ್ಯಾಜ್ಯದಿಂದ ವಿದ್ಯುತ್ ತಯಾರಿಕೆ ಮತ್ತಿತರ ಪರಿಸರ ಪ್ರೇಮಿ ಚಟುವಟಿಕೆಗಳನ್ನು ಉತ್ತೇಜಿಸಬೇಕು’ ಎಂದು ಹೇಳಿದರು.

‘ಪರಿಸರ ಮಿತ್ರ’ ಪ್ರಶಸ್ತಿ ಸ್ಪರ್ಧೆಗೆ ಜಿಲ್ಲೆಯ 78 ಶಾಲೆಗಳು ಪಾಲ್ಗೊಂಡಿದ್ದವು.  ಈ ಪೈಕಿ 240 ವಿವಿಧ ಮಾದರಿ ಗಿಡ ಮರ, ಔಷಧ ವನ ಮತ್ತಿತರ ಪರಿಸರ ಕಾಳಜಿ ಅಂಶಗಳೊಂದಿಗೆ ಮಾಲೂರು ತಾಲ್ಲೂಕಿನ ಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯು ಪ್ರಥಮ ಸ್ಥಾನ ಪಡೆದಿದೆ. ಈ ಶಾಲೆಗೆ ₹ 30 ಸಾವಿರ ಬಹುಮಾನ ನೀಡಲಾಗಿದೆ’ ಎಂದು ಜಿಲ್ಲಾ ಪರಿಸರ ಮಾಲಿನ್ಯ ನಿಯಂತ್ರಣಾಧಿಕಾರಿ ಸಿ.ಆರ್.ಮಂಜುನಾಥ್ ಮಾಹಿತಿ ನೀಡಿದರು.

ಉಳಿದಂತೆ 10 ಶಾಲೆಗಳಿಗೆ ಹಸಿರು ಶಾಲೆ ಪ್ರಶಸ್ತಿ, 10ಕ್ಕೆ ‘ಹಳದಿ ಶಾಲೆ’ ಪ್ರಶಸ್ತಿ ಹಾಗೂ 10 ಶಾಲೆಗಳಿಗೆ ಕಿತ್ತಳೆ ಶಾಲೆ ಪ್ರಶಸ್ತಿ ನೀಡಲಾಗಿದೆ. ಭಾಗವಹಿಸಿದ ಎಲ್ಲಾ ಶಾಲೆಗಳಿಗೆ ಪ್ರಮಾಣಪತ್ರ ವಿತರಿಸಲಾಗಿದೆ ಎಂದರು.

ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಜೈಪ್ರಕಾಶ್ ಆಳ್ವ, ಡಿವೈಪಿಸಿ ಮಾಧವರೆಡ್ಡಿ, ವಿಷಯ ಪರಿವೀಕ್ಷಕ ಬಾಬು ಜನಾರ್ದನನಾಯ್ಡು, ಹಿರಿಯ ಪರಿಸರ ಅಧಿಕಾರಿ ಲಕ್ಷ್ಮಣ್, ಉಪ ಪರಿಸರ ಅಧಿಕಾರಿ ಸೋಮಶೇಖರ್, ಸಹಾಯಕ ಪರಿಸರ ಅಧಿಕಾರಿ ಮೃತ್ಯುಂಜಯ, ಯಶಸ್ವಿನ ಸಂಸ್ಥೆಯ ನಾಗವೇಣಿ ಸೇರಿದಂತೆ ಮತ್ತಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.