ADVERTISEMENT

ಗುತ್ತಿಗೆ ಹೆಸರಿನಲ್ಲಿ ಜೀತಗಾರಿಕೆ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2017, 7:30 IST
Last Updated 14 ಡಿಸೆಂಬರ್ 2017, 7:30 IST

ಕೆಜಿಎಫ್‌: ‘ಹೊರಗುತ್ತಿಗೆ ಕಾರ್ಮಿಕರು ಒಗ್ಗಟ್ಟಿನಿಂದ ನ್ಯಾಯಯುತವಾದ ತಮ್ಮ ಹಕ್ಕುಗಳಿಗಾಗಿ ಹೋರಾಟ ನಡೆಸಬೇಕು. ಇಲ್ಲದಿದ್ದಲ್ಲಿ ಗುತ್ತಿಗೆ ಹೆಸರಿನಲ್ಲಿ ಜೀತಗಾರಿಕೆ ಮುಂದುವರೆಯಲಿದೆ’ ಎಂದು ರಾಜ್ಯ ಹೊರಗುತ್ತಿಗೆ ಕಾರ್ಮಿಕರ ಒಕ್ಕೂಟದ ರಾಜ್ಯ ಅಧ್ಯಕ್ಷ ಎಂ.ಬಿ.ನಾಗಣ್ಣಗೌಡ ಹೇಳಿದರು.

ರಾಬರ್ಟಸನ್‌ಪೇಟೆಯಯಲ್ಲಿ ಇತ್ತೀಚೆಗೆ ಜಲಮಂಡಳಿ ಹೊರಗುತ್ತಿಗೆ ಕಾರ್ಮಿಕರನ್ನು ಉದ್ದೇಶಿಸಿ ಮಾತನಾಡಿದರು.

‘ಸರ್ಕಾರಿ ಇಲಾಖೆಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ದುಡಿಯುತ್ತಿರುವವರನ್ನು ಜೀತದಾಳುಗಳ ರೀತಿಯಲ್ಲಿ ದುಡಿಸಿಕೊಳ್ಳಲಾಗುತ್ತಿದೆ. ರಾಜ್ಯದ ವಿವಿಧ ಇಲಾಖೆಗಳಲ್ಲಿ ನಾಲ್ಕು ಲಕ್ಷಕ್ಕೂ ಹೆಚ್ಚು ಹೊರಗುತ್ತಿಗೆ ನೌಕರರು ಇದ್ದಾರೆ. ಅವರಿಗೆ ನಿಯಮಾನುಸಾರ ಯಾವುದೇ ಸೌಲಭ್ಯ ನೀಡುತ್ತಿಲ್ಲ’ ಎಂದು ಆರೋಪಿಸಿದರು.

ADVERTISEMENT

‘ಹೊರಗುತ್ತಿಗೆ ಎಂಬುದು ಸರ್ಕಾರಿ ಜೀತಗಾರಿಕೆಯಾಗಿದೆ. ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಸರ್ಕಾರ ಸಾವಿರಾರು ಕೋಟಿ ಬಿಡುಗಡೆ ಮಾಡುತ್ತದೆ. ಅದರೆ ಸರ್ಕಾರ ಈ ಯೋಜನೆಗಳ ಜಾರಿಗೆ ಬೆನ್ನೆಲಬು ಆಗಿರುವ ಹೊರಗುತ್ತಿಗೆ ಕಾರ್ಮಿಕರನ್ನು ಕಡೆಗಣಿಸಲಾಗುತ್ತಿದೆ. ರಾಜ್ಯದ ಸ್ಥಳೀಯ ಸಂಸ್ಥೆಗಳಲ್ಲಿ ಹೊರಗುತ್ತಿಗೆ ರದ್ದುಪಡಿಸಿ ನೇರ ವೇತನ ಪಾವತಿಸುವಂತೆ ಒತ್ತಾಯಿಸಿ ಜನವರಿ ತಿಂಗಳಲ್ಲಿ ವಿಧಾನಸೌಧ ಚಲೋ ಹಮ್ಮಿಕೊಳ್ಳಲಾಗುವುದು’ ಎಂದು ನಾಗಣ್ಣ ತಿಳಿಸಿದರು.

ಸಭೆಯಲ್ಲಿ ಜಲಮಂಡಳಿ ಹೊರಗುತ್ತಿಗೆ ನೌಕರರ ಸಂಘದ ಶಂಕರ್, ನಾಗರಾಜು, ಹಕೀಬ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.