ADVERTISEMENT

ಗ್ರಾಹಕ ಸೇವೆಗೆ ಚ್ಯುತಿ ಬಾರದಂತೆ ಕೆಲಸ ಮಾಡಿ

​ಪ್ರಜಾವಾಣಿ ವಾರ್ತೆ
Published 14 ಮೇ 2017, 5:11 IST
Last Updated 14 ಮೇ 2017, 5:11 IST

ಕೋಲಾರ: ‘ಅಧಿಕಾರ ಶಾಶ್ವತವಲ್ಲ. ಸೇವೆಯಲ್ಲಿ ಇದ್ದಷ್ಟು ದಿನ ಗ್ರಾಹಕಸೇವೆಗೆ ಚ್ಯುತಿ ಬಾರದಂತೆ ನಡೆದುಕೊಂಡರೆ ಸಮಾಜದಲ್ಲಿ ಗೌರವ ಸಿಗುತ್ತದೆ’ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಎಂ.ಗೋವಿಂದಗೌಡ ತಿಳಿಸಿದರು.

ನಗರದ ಜಿಲ್ಲಾ ಸಹಕಾರಿ ಯೂನಿಯನ್ ಸಭಾಂಗಣದಲ್ಲಿ ಶನಿವಾರ ನಡೆದ ಜಿಲ್ಲಾ ಸಹಕಾರ ಬ್ಯಾಂಕಿನ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ‘ಬ್ಯಾಂಕಿನ ಶಾಖೆಗಳಲ್ಲಿ ಈ ಹಿಂದೆ ದಿನಕ್ಕೆ ₹ 2 ಲಕ್ಷ ವಹಿವಾಟು ನಡೆಯುತ್ತಿರಲಿಲ್ಲ. ಈಗ ₹ 2 ಕೋಟಿ ದಾಟಿದೆ’ ಎಂದರು.

‘ಬ್ಯಾಂಕಿಗೆ ಬರುವವರಿಗೆ ಡಿಸಿಸಿ ಬ್ಯಾಂಕೆಂದರೆ ದೇವಾಲಯದಂತೆ ಕಾಣಬೇಕು. ಇಲ್ಲಿಗೆ ಸಾಲಕ್ಕಾಗಿ ಬಂದವರನ್ನು ಅಲೆಸಬಾರದು. ಬಂದವರು ಸಾಲ ಸಿಕ್ಕ ನೆಮ್ಮದಿಯಿಂದ ಹೋದಾಗ ಮಾತ್ರ ಅವರಲ್ಲಿ ಮರುಪಾವತಿಯ ಬದ್ಧತೆಯೂ ಹೆಚ್ಚುತ್ತದೆ’ ಎಂದು ಅಭಿಪ್ರಾಯಪಟ್ಟರು.

ADVERTISEMENT

‘ಬ್ಯಾಂಕಿಗೆ ಸಾಲಕ್ಕಾಗಿ ಬರುವ ಮಹಿಳಾ ಸ್ವಸಹಾಯ ಸಂಘಗಳ ಮಹಿಳೆಯರೊಂದಿಗೆ ಗೌರವದಿಂದ ವರ್ತಿಸಿ. ಹಿರಿಯರು, ವೃದ್ಧರು ಬಂದಾಗ ಅವರ ಕೆಲಸ ಬೇಗ ಮಾಡಿಕೊಡಿ’ ಎಂದು ಸೂಚಿಸಿದರು.
‘ಸಾಲ ಕೇಳುವುದು ಹಕ್ಕು. ದಾಖಲೆಗಳಿದ್ದರೆ ಸಾಲ ನೀಡುವುದು ಬ್ಯಾಂಕಿನ ಹೊಣೆ. ಹಾಗೆಯೇ ನೀಡಿದ ಸಾಲವನ್ನು ಸಮರ್ಪಕವಾಗಿ ವಸೂಲಿ ಮಾಡುವ ಜವಾಬ್ದಾರಿಯೂ ನೌಕರರ ಮೇಲಿದೆ’ ಎಂದರು.

‘ಕೆಜಿಎಫ್, ಬಂಗಾರಪೇಟೆ ಶಾಖೆಗಳಲ್ಲಿ ಮಹಿಳಾ ಸಂಘಗಳಿಗೆ ನೀಡಿರುವ ಸಾಲ ಮರುಪಾವತಿಯಲ್ಲಿ ಒಂದು ತಿಂಗಳ ಕಂತಿನ ಬಾಕಿ ಉಳಿದುಕೊಂಡಿದೆ. ಕೂಡಲೇ ಮರುಪಾವತಿ ಮಾಡಿಸಲು ಕ್ರಮಕೈಗೊಳ್ಳಿ’ ಎಂದು ತಾಕೀತು ಮಾಡಿದರು.

‘ರಾಜ್ಯ ಸರ್ಕಾರ ರೈತರಿಗೆ ಶೂನ್ಯ ಬಡ್ಡಿಯ ಬೆಳೆ ಸಾಲ ನೀಡಿ ಕೈಹಿಡಿದಿತ್ತು. ಇದೀಗ ಮಹಿಳೆಯರಿಗೂ ಶೂನ್ಯ ಬಡ್ಡಿ ಸಾಲ ನೀಡಿ ಆರ್ಥಿಕವಾಗಿ ನೆರವಾಗಿರುವುದು ಶ್ಲಾಘನೀಯ’ ಎಂದರು. ಬ್ಯಾಂಕಿನ ನಿರ್ದೇಶಕ ಕೆ.ವಿ.ದಯಾನಂದ್, ವ್ಯವಸ್ಥಾಪಕ ನಿರ್ದೇಶಕ ವೆಂಕಟೇಶಪ್ಪ, ವ್ಯವಸ್ಥಾಪಕರಾದ ಶಿವಕುಮಾರ್, ಖಲೀಮುಲ್ಲಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.