ADVERTISEMENT

ಚಿಕ್ಕತಿರುಪತಿ ದೇವಾಲಯದಲ್ಲಿ ಭಕ್ತರ ದಂಡು

​ಪ್ರಜಾವಾಣಿ ವಾರ್ತೆ
Published 20 ಆಗಸ್ಟ್ 2017, 9:09 IST
Last Updated 20 ಆಗಸ್ಟ್ 2017, 9:09 IST

ಮಾಲೂರು: ಶ್ರಾವಣ ಮಾಸದ ಕಡೆಯ ಶನಿವಾರದ ಅಂಗವಾಗಿ ತಾಲ್ಲೂಕಿನ ಚಿಕ್ಕತಿರುಪತಿ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ಭಕ್ತರು ವಿಶೇಷ ಪೂಜೆ ಸಲ್ಲಿಸಿದರು.
ರಾಜ್ಯದ ವಿವಿಧ ಜಿಲ್ಲೆಗಳು ಸೇರಿದಂತೆ ತಮಿಳುನಾಡು ಹಾಗೂ ಆಂಧ್ರಪ್ರದೇಶದಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬಂದಿದ್ದರು.

ದೇವಸ್ಥಾನದಲ್ಲಿ ಮುಂಜಾನೆಯಿಂದಲೇ ವಿಶೇಷ ಪೂಜೆ, ಅಭಿಷೇಕ, ಪಂಚಾಮೃತ ಅಭಿಷೇಕ, ಕಳಶ ಸ್ಥಾಪನೆ, ವೇದಮಂತ್ರ ಪಾರಾಯಣ, ಹೋಮ, ಹವನ ನಡೆದವು. ಭಕ್ತರು ಗಂಟೆಗಟ್ಟಲೆ ಸರದಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದರು.

ಬೆಂಗಳೂರಿನ ಶ್ರೀನಿವಾಸ್ ಎಂಬುವರು ದೇವರಿಗೆ ಹಾಗೂ ದೇವಾಲಯದ ಸುತ್ತ ವಿಶೇಷ ಹೂವಿನ ಅಲಂಕಾರ ವ್ಯವಸ್ಥೆ ಮಾಡಿದ್ದರು. ಹೊಸಕೋಟೆ, ಸರ್ಜಾಪುರ ಮತ್ತು ಆನೇಕಲ್‌ ಕಡೆಯಿಂದ ಭಕ್ತರು ಕಾಲ್ನಡಿಗೆಯಲ್ಲಿ ಬಂದು ಮುಡಿ ಅರ್ಪಿಸಿದರು. ಭಕ್ತರ ಸ್ನಾನಕ್ಕೆ ಹಾಗೂ ಕುಡಿಯಲು ನೀರಿನ ವ್ಯವಸ್ಥೆ ಮಾಡಲಾಗಿತ್ತು. ಭಕ್ತರ ಸಂಖ್ಯೆ ಹೆಚ್ಚಿದ್ದ ಕಾರಣ ರಾತ್ರಿ 8 ಗಂಟೆವರೆಗೂ ದೇವಾಲಯ ತೆರೆಯಲಾಗಿತ್ತು.

ADVERTISEMENT

ದೇವಾಲಯದ ವ್ಯವಸ್ಥಾಪನ ಸಮಿತಿ ಮಾಜಿ ಅಧ್ಯಕ್ಷ ಡಿ.ಟಿ.ಪುಟ್ಟಪ್ಪ ಪ್ರಸಾದ ವ್ಯವಸ್ಥೆ ಮಾಡಿದ್ದರು. ಬಲಿಜ ಸಂಘದ ವತಿಯಿಂದ ಕೈವಾರ ನಾರೇಯಣ ತಾತಯ್ಯರ ಹೆಸರಿನಲ್ಲಿ ಸುಮಂಗಲಿಯರಿಗೆ ಬಳೆ ಸೇವೆ ನಡೆಸಲಾಯಿತು. ನೂರಾರು ಮಹಿಳೆಯರು ಹರಿಶಿನ ಕುಂಕುಮದ ಜತೆ ಬಳೆ ಪಡೆದರು.

₹ 20 ಲಕ್ಷ ವೆಚ್ಚದಲ್ಲಿ ನಿರ್ಮಾಣ ಮಾಡಿರುವ ದೇವಸ್ಥಾನದ ದ್ವಾರವನ್ನು ಶಾಸಕ ಕೆ.ಎಸ್.ಮಂಜುನಾಥಗೌಡ ಉದ್ಘಾಟಿಸಿದರು. ತಹಶೀಲ್ದಾರ್ ಗಿರೀಶ್, ತಾಲ್ಲೂಕು ಪಂಚಾಯಿತಿ ಸ್ಥಾಯಿ ಸಮಿತಿ ಸದಸ್ಯ ವಿ.ನಾಗೇಶ್, ಪ್ರಧಾನ ಅರ್ಚಕ ನರಸಿಂಹಾಚಾರ್, ದೇವಾಲಯದ ಕಾರ್ಯ ನಿರ್ವಹಣಾಧಿಕಾರಿ ಪದ್ಮಾವತಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.