ADVERTISEMENT

ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಟಾಪಟಿ

ಅಂಬೇಡ್ಕರ್ ಜಯಂತಿ ಪೂರ್ವಭಾವಿ ಸಭೆ ಬಳಿಕ ದಲಿತ ಮುಖಂಡರಲ್ಲಿಯೇ ವಾಗ್ವಾದ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2017, 8:29 IST
Last Updated 28 ಮಾರ್ಚ್ 2017, 8:29 IST
ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಟಾಪಟಿ
ಜಿಲ್ಲಾಧಿಕಾರಿ ಕಚೇರಿಯಲ್ಲಿ ಜಟಾಪಟಿ   
ಕೋಲಾರ: ಅಂಬೇಡ್ಕರ್ ಮತ್ತು ಬಾಬು ಜಗಜೀವನ್‌ರಾಮ್ ಜಯಂತಿ ಆಚರಣೆ ಕುರಿತು ನಗರದಲ್ಲಿ ಸೋಮವಾರ ಆಯೋಜಿಸಿದ್ದ ಪೂರ್ವಭಾವಿ ಸಭೆಯ ಬಳಿಕ ದಲಿತ ಮುಖಂಡರ ನಡುವೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲೇ ಜಟಾಪಟಿ ನಡೆಯಿತು.
 
ಅಂಬೇಡ್ಕರ್ ಮತ್ತು ಬಾಬು ಜಗಜೀವನ್‌ರಾಮ್ ಜಯಂತಿ ಆಚರಣೆಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಚರ್ಚೆ ನಡೆಸಲು ಜಿಲ್ಲಾಧಿಕಾರಿ ಡಾ.ಕೆ.ವಿ.ತ್ರಿಲೋಕಚಂದ್ರ ಬೆಳಿಗ್ಗೆ ತಮ್ಮ ಕಚೇರಿಯ ಸಭಾಂಗಣದಲ್ಲಿ ದಲಿತ ಮುಖಂಡರು ಹಾಗೂ ಅಧಿಕಾರಿಗಳ ಸಭೆ ಕರೆದಿದ್ದರು.
 
ಜಿಲ್ಲಾಧಿಕಾರಿ ಸುಮಾರು ಅರ್ಧ ತಾಸು ಸಭೆ ನಡೆಸಿ ತಮ್ಮ ಕೊಠಡಿಗೆ ಹೋದರು. ಆ ನಂತರ ದಲಿತ ಮುಖಂಡರ ಪೈಕಿ ಮುನಿವೆಂಕಟಪ್ಪ, ವೆಂಕಟರಮಣ ಮತ್ತು ರವಿ ಅವರು, ‘ನಮಗೆ ಸಭೆಯಲ್ಲಿ ಮಾತನಾಡಲು ಅವಕಾಶವನ್ನೇ ಕೊಡಲಿಲ್ಲ. ಯಾಕೆ ನಾವು ಪರಿಶಿಷ್ಟ ಜಾತಿ ಅಥವಾ ಪಂಗಡಕ್ಕೆ ಸೇರಿಲ್ಲವೆ’ ಎಂದು ಸಮುದಾಯದ ಹಿರಿಯ ಮುಖಂಡರ ವಿರುದ್ಧ ಹರಿಹಾಯ್ದರು.
 
‘ಪ್ರಭಾವಿ ಮುಖಂಡರು ಮುಂಚಿತವಾಗಿ ಸಭೆಯಲ್ಲಿ ಯಾರು ಮಾತನಾಡಬೇಕೆಂದು ಗುರುತಿಸಿ  ಸಭೆಗೆ ಬಂದಿದ್ದೀರಿ. ಸಮುದಾಯದ ಸಮಸ್ಯೆ ಗಳು ನಮ್ಮ ಸಮಸ್ಯೆಯಲ್ಲವೇ. ನಮಗೆ ಸಮಸ್ಯೆಗಳ ಬಗ್ಗೆ ಮಾತನಾಡುವ ಹಕ್ಕಿಲ್ಲವೇ. ಎಲ್ಲಾ ನೀವೇ ನಿರ್ಧರಿಸುವು ದಾದರೆ ನಾವು ಯಾಕೆ ಬೇಕು’ ಎಂದು ಕಿಡಿಕಾರಿದರು.
 
ಇದರಿಂದ ಆಕ್ರೋಶಗೊಂಡ ಭೀಮಸೇನೆ ರಾಜ್ಯ ಘಟಕದ ಅಧ್ಯಕ್ಷ ಪಂಡಿತ್‌ ಮುನಿವೆಂಕಟಪ್ಪ, ‘ಸಮುದಾಯದ ವಿದ್ಯಾರ್ಥಿಗಳು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಸರ್ಕಾರಿ ಹಾಸ್ಟೆಲ್‌ಗಳಲ್ಲಿರುವ ದಲಿತ ವಿದ್ಯಾರ್ಥಿಗಳಿಗೆ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಈವರೆಗೂ ವಿದ್ಯಾರ್ಥಿವೇತನ ಕೊಟ್ಟಿಲ್ಲ.

ಇಂತಹ ಗಂಭೀರ ವಿಷಯದ ಬಗ್ಗೆ ಚರ್ಚಿಸುವುದನ್ನು ಬಿಟ್ಟು ಕೆಲಸಕ್ಕೆ ಬಾರದ ವಿಷಯಗಳ ಬಗ್ಗೆ ಮಾತನಾಡಿ ಸಭೆಯ ಸಮಯ ಹಾಳು ಮಾಡಿದ್ದೀರಿ’ ಎಂದು ಆಕ್ರೋಶ ವ್ಯಕ್ತಪಡಿಸಿದರು.
 
ಈ ವೇಳೆ ಎರಡೂ ಗುಂಪುಗಳ ಮುಖಂಡರ ನಡುವೆ ಮಾತಿನ ಚಕಮಕಿ ನಡೆದು  ಗೊಂದಲದ ವಾತಾವರಣ ಸೃಷ್ಟಿಯಾಯಿತು. ಬಳಿಕ ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗಳು ಉಭಯ ಬಣದ ಮುಖಂಡರನ್ನು ಸಮಾಧಾನ ಪಡಿಸಿ ಸಭಾಂಗಣದಿಂದ ಹೊರ ಕಳುಹಿಸಿದರು.
 
ಸಹಕಾರ ನೀಡಬೇಕು: ಇದಕ್ಕೂ ಮುನ್ನ ನಡೆದ ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ, ‘ಏ.5ರಂದು ಜಗಜೀವನ್‌ ರಾಮ್ ಜಯಂತಿ ಮತ್ತು ಏ.14ರಂದು ಅಂಬೇಡ್ಕರ್‌ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ಸಕಲ ಸಿದ್ಧತೆ ಮಾಡಲಾಗಿದೆ. ಸಂಘ ಸಂಸ್ಥೆಗಳು, ದಲಿತ ಮುಖಂಡರು ಹಾಗೂ ಅಧಿಕಾರಿಗಳು ಸಹಕಾರ ನೀಡಬೇಕು’ ಎಂದರು.
 
‘ಜಯಂತಿ ಆಚರಣೆಗೆ ಸಮಿತಿಗಳನ್ನು ರಚಿಸಲಾಗಿದ್ದು, ಯಾವುದೇ ಲೋಪವಾಗದಂತೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು. ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಕಡ್ಡಾಯವಾಗಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಪಲ್ಲಕ್ಕಿ ಮತ್ತು ಕಲಾ ತಂಡಗಳ ಮೆರವಣಿಗೆ ನಡೆಸಬೇಕು’ ಎಂದರು.
 
ವಿದ್ಯಾರ್ಥಿಗಳನ್ನು ಗೌರವಿಸಿ: ‘ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿರುವ ದಲಿತ ಸಮುದಾಯದ ವಿದ್ಯಾರ್ಥಿಗಳನ್ನು ಅಂಬೇಡ್ಕರ್‌ ಜಯಂತಿ ಕಾರ್ಯಕ್ರಮ ದಲ್ಲಿ ಗೌರವಿಸಬೇಕು’ ಎಂದು ದಲಿತ ಸಂ ಯುಕ್ತ ರಂಗದ ಅಧ್ಯಕ್ಷ ಚಂದ್ರಶೇಖರ್ ಒತ್ತಾಯಿಸಿದರು.
 
‘ಪ್ರತಿ ವರ್ಷ ಜಯಂತಿ ಆಚರಿಸುತ್ತೇವೆ. ಸಮುದಾಯದ ಮಕ್ಕಳು ಆರ್ಥಿಕವಾಗಿ ಹಿಂದುಳಿದಿದ್ದರೂ ಶೈಕ್ಷಣಿಕವಾಗಿ ಸಾಕಷ್ಟು ಸಾಧನೆ ಮಾಡುತ್ತಿದ್ದಾರೆ. ಪ್ರತಿಭಾವಂತ ವಿದ್ಯಾರ್ಥಿಗಳ ಉನ್ನತ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ ನೆರವು ಕೊಡಿಸಬೇಕು’ ಎಂದು ಮನವಿ ಮಾಡಿದರು.
 
ವಾಲ್ಮೀಕಿ ಸಮುದಾಯದ ಮುಖಂಡ ಅಂಬರೀಶ್‌, ‘ದಲಿತ ಸಮುದಾ ಯದ ಸಾಕಷ್ಟು ಮಂದಿಗೆ ನಿವೇಶನ ಮತ್ತು ವಸತಿ ಸೌಕರ್ಯವಿಲ್ಲ. ಇವರಿಗೆ ಸ್ಥಳೀಯ ಸಂಸ್ಥೆಗಳಿಂದ ನಿವೇಶನ ಮತ್ತು ವಸತಿ ಸೌಲಭ್ಯ ಕಲ್ಪಿಸಿಕೊಡಬೇಕು. ಕಾರ್ಯಕ್ರಮದ ದಿನ ಕನಿಷ್ಠ 10 ಮಂದಿಗಾದರೂ ನಿವೇಶನ ಹಂಚಿಕೆ ಮಾಡಬೇಕು’ ಎಂದು ಹೇಳಿದರು.
ಉಪ ವಿಭಾಗಾಧಿಕಾರಿ ಸಿ.ಎನ್‌. ಮಂಜುನಾಥ್‌, ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶಕ ಜಯಣ್ಣ ಸಭೆಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.