ADVERTISEMENT

ಟೊಮೆಟೊ ಬೆಲೆ ಏರಿಕೆಯಿಂದ ಸಂತಸ

​ಪ್ರಜಾವಾಣಿ ವಾರ್ತೆ
Published 19 ಜುಲೈ 2017, 11:02 IST
Last Updated 19 ಜುಲೈ 2017, 11:02 IST

ಮುಳಬಾಗಿಲು: ಟೊಮೆಟೊ ಬೆಲೆ ಏರಿಕೆಯಿಂದ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. 15ಕೆ.ಜಿ ಬುಟ್ಟಿಗೆ ₹ 900 ರಿಂದ ₹ 1050 ಇದ್ದು, ಬೆಲೆಯ ಏರಿಕೆಯಿಂದ ರೈತರು ಸಂತಸಗೊಂಡಿದ್ದಾರೆ. ಬೆಳೆ ಇಳುವರಿ ಬಂದಾಗ ಮಾರುಕಟ್ಟೆಯಲ್ಲಿ ಬೆಲೆ ಸಿಗುವುದಿಲ್ಲ. ಫಸಲು ಕಡಿಮೆ ಬಂದಾಗ ಮಾತ್ರ ಮಾರುಕಟ್ಟೆಯಲ್ಲಿ ತರಕಾರಿ ಬೆಲೆಗಳು ಗಗನಕ್ಕೇರುತ್ತವೆ. ಇದರಿಂದ ರೈತರಿಗೆ ಕೆಲವೊಮ್ಮೆ ಸಂತಸ ಹಾಗೂ ಬೇಸರ ತಂದ ಪ್ರಸಂಗಗಳು ಉಂಟಾಗಿವೆ.

‘ಕಳೆದ ಬಾರಿ ಟೊಮೆಟೊ ಬೆಲೆ ತೀರಾ ಕಡಿಮೆ ಇದ್ದ ಕಾರಣ ರೈತರು ಸಂಕಷ್ಟಕ್ಕೆ ಒಳಗಾಗಿದ್ದರು. ಈಗಿನ ಬೆಲೆಯಿಂದ ಸಾಲ ತೀರಿಸಿ ಚೇತರಿಸಿಕೊಂಡಿದ್ದೇವೆ’ ಎಂದು ಎನ್.ವಡ್ಡಹಳ್ಳಿ ವಿ.ಬಿ.ಆರ್. ಟೊಮೆಟೊ ಮಂಡಿ ಮಾಲೀಕ ರುದ್ರೇಶ್ ತಿಳಿಸಿದರು.

‘ಮಂಡಿಗೆ ಟೊಮೆಟೊ ಕಾಯಿಗಳು ಕಡಿಮೆ ಬರುತ್ತಿರುವುದರಿಂದ 15 ಕೆ.ಜಿ ಟೊಮೆಟೊ ಬುಟ್ಟಿ ₹ 1000 ವರೆಗೆ ಮಾರಾಟವಾಗುತ್ತಿದೆ. ಇದರಿಂದ ವಿವಿಧ ಮಂಡಿ ಮಾಲೀಕರು ಗ್ರಾಮೀಣ ಭಾಗದ ಕಡೆಗೆ ಹೋಗಿ ರೈತರ ಮನವೊಲಿಸಿ ತಮ್ಮ ಮಂಡಿಗೆ ಟೊಮೆಟೊ ಹಾಕುವಂತೆ ಒತ್ತಾಯ ಮಾಡುತ್ತಿದ್ದಾರೆ’ ಎಂದರು.

ADVERTISEMENT

‘ಇಷ್ಟಾದರೂ ಸಹ ರೈತರು ತಮಗೆ ಇಷ್ಟವಾದ ಮಂಡಿಗೆ ಟೊಮೆಟೊ ಹಣ್ಣುಗಳನ್ನು ಹಾಕುತ್ತಿದ್ದಾರೆ. ಮಂಡಿ ಮಾಲೀಕರು ರೈತರಿಗೆ ಮುಂಗಡವಾಗಿ ಸಾಲ ನೀಡಿ ತಮ್ಮ ಕಡೆಗೆ ಸೆಳೆದುಕೊಳ್ಳುತ್ತಿದ್ದಾರೆ.

ಇದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಟೊಮೆಟೊ ಬೆಳೆಗಾರರನ್ನು ಮಂಡಿಗೆ ಬರ ಮಾಡಿಕೊಳ್ಳಲಾಗುತ್ತಿದ್ದು, ಟೊಮೆಟೊ ಸಸಿ, ರಸಗೊಬ್ಬರ, ಔಷಧಗಳನ್ನು ಮಂಡಿ ಮಾಲೀಕರು ನೀಡುವುದರಿಂದ ರೈತರು ಸಾಲ ಮಾಡುವ ಹೊರೆ ಆಗುವುದಿಲ್ಲ’ ಎಂದರು ಮಂಡಿ ಮಾಲೀಕರು ತಿಳಿಸಿದರು.

‘ಈಗ ಬೆಳೆದ ಟೊಮೆಟೊ ಬೆಳೆಯಿಂದ ನಷ್ಟವಾಗುತ್ತಿಲ್ಲ. ಫಸಲಿನ ಇಳುವರಿ ಕಡುಮೆ ಇದ್ದರೂ, ಸಹ ಬೆಲೆಯ ಏರಿಕೆಯಿಂದ ಬಂಡವಾಳದ ಹಣ ಬರುತ್ತಿದೆ. ಕಳೆದ ಭಾರಿ ಮಾಡಲಾದ ಸಾಲಗಳನ್ನು ತೀರಿಸಲು ಈಗಿನ ಹಣ ಸರಿಹೋಗಲಿದೆ’ ಎಂದು ರೈತ ಸೀನಪ್ಪ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.