ADVERTISEMENT

ತರಬೇತಿ ಶಾಲೆಗೆ ವಿರೋಧ

​ಪ್ರಜಾವಾಣಿ ವಾರ್ತೆ
Published 19 ಮಾರ್ಚ್ 2018, 11:21 IST
Last Updated 19 ಮಾರ್ಚ್ 2018, 11:21 IST
ಜಿಲ್ಲೆಗೊಂದು ವಾಹನ ಚಾಲನಾ ತರಬೇತಿ ಶಾಲೆ ಆರಂಭಿಸಲು ಮುಂದಾಗಿರುವ ಕೇಂದ್ರ ಸರ್ಕಾರದ ಕ್ರಮ ಖಂಡಿಸಿ ಜಿಲ್ಲಾ ಡ್ರೈವಿಂಗ್ ಸ್ಕೂಲ್‌ಗಳ ಮಾಲೀಕರ ಅಸೋಸಿಯೇಷನ್‌ ಸದಸ್ಯರು ಕೋಲಾರದಲ್ಲಿ ಶನಿವಾರ ಧರಣಿ ನಡೆಸಿದರು.
ಜಿಲ್ಲೆಗೊಂದು ವಾಹನ ಚಾಲನಾ ತರಬೇತಿ ಶಾಲೆ ಆರಂಭಿಸಲು ಮುಂದಾಗಿರುವ ಕೇಂದ್ರ ಸರ್ಕಾರದ ಕ್ರಮ ಖಂಡಿಸಿ ಜಿಲ್ಲಾ ಡ್ರೈವಿಂಗ್ ಸ್ಕೂಲ್‌ಗಳ ಮಾಲೀಕರ ಅಸೋಸಿಯೇಷನ್‌ ಸದಸ್ಯರು ಕೋಲಾರದಲ್ಲಿ ಶನಿವಾರ ಧರಣಿ ನಡೆಸಿದರು.   

ಕೋಲಾರ: ಜಿಲ್ಲೆಗೊಂದು ವಾಹನ ಚಾಲನಾ ತರಬೇತಿ ಶಾಲೆ ಆರಂಭಿಸಲು ಮುಂದಾಗಿರುವ ಕೇಂದ್ರ ಸರ್ಕಾರದ ಕ್ರಮ ಖಂಡಿಸಿ ಜಿಲ್ಲಾ ಡ್ರೈವಿಂಗ್ ಸ್ಕೂಲ್‌ಗಳ ಮಾಲೀಕರ ಅಸೋಸಿಯೇಷನ್‌ ಸದಸ್ಯರು ನಗರದಲ್ಲಿ ಶನಿವಾರ ಧರಣಿ ನಡೆಸಿದರು.

‘ಕೇಂದ್ರವು ದೇಶದೆಲ್ಲೆಡೆ ಕಾರ್ಪೊರೇಟ್‌ ಕಂಪನಿಗಳಿಗೆ ಲಾಭ ಮಾಡಿಕೊಡುವ ದುರುದ್ದೇಶದಿಂದ ಚಾಲನಾ ತರಬೇತಿ ಶಾಲೆಗಳನ್ನು ಆರಂಭಿಸಲು ಮುಂದಾಗಿದೆ. ಇದು ಅವೈಜ್ಞಾನಿಕ ಕ್ರಮ’ ಎಂದು ಒಕ್ಕೂಟದ ಜಿಲ್ಲಾ ಘಟಕದ ಗೌರವಾಧ್ಯಕ್ಷ ಕೆ.ವಿ.ಸುರೇಶ್‌ಕುಮಾರ್ ದೂರಿದರು.

‘ದೇಶದೆಲ್ಲೆಡೆ ಮೋಟರು ವಾಹನ ಚಾಲನಾ ತರಬೇತಿ ಕೇಂದ್ರಗಳು ಕಾನೂನು ಬದ್ಧವಾಗಿ ಸಾರಿಗೆ ಇಲಾಖೆಯ ಪರವಾನಗಿ ಪಡೆದು ಕಾರ್ಯ ನಿರ್ವಹಿಸುತ್ತಿವೆ. ಸುಸ್ಥಿತಿಯಲ್ಲಿರುವ ಈ ಕೇಂದ್ರಗಳ ಮೇಲೆ ಸರ್ಕಾರ ಗದಾಪ್ರಹಾರ ನಡೆಸಲು ಹೊರಟಿದೆ. ತರಬೇತಿ ಶಾಲೆಗಳು ಆರಂಭವಾದರೆ ಕೇಂದ್ರಗಳಲ್ಲಿನ ಚಾಲಕರು ಹಾಗೂ ಸಿಬ್ಬಂದಿ ಕೆಲಸ ಕಳೆದುಕೊಂಡು ಬೀದಿ ಪಾಲಾಗುತ್ತಾರೆ’ ಎಂದು ಆತಂಕ ವ್ಯಕ್ತಪಡಿಸಿದರು.

ADVERTISEMENT

‘ಹಾಲಿ ತರಬೇತಿ ಕೇಂದ್ರಗಳು ಖಾಸಗಿ ಹಾಗೂ ವಾಣಿಜ್ಯ ಉದ್ದೇಶದ ವಾಹನಗಳ ಚಾಲಕರಿಗೆ ಉತ್ತಮ ತರಬೇತಿ ನೀಡಿ, ಪರಿಪಕ್ವ ಚಾಲಕರನ್ನು ರೂಪಿಸುತ್ತಿವೆ. ಈ ಕೇಂದ್ರಗಳಿಂದ ಸಾಕಷ್ಟು ಮಂದಿಗೆ ಉದ್ಯೋಗ ಸಿಕ್ಕಿದೆ. ಕೇಂದ್ರಗಳು ತಮ್ಮ ವಾಹನಗಳಿಗೆ ತೆರಿಗೆ, ವಿಮೆ ಶುಲ್ಕ ಪಾವತಿಸುವ ಮೂಲಕ ಸರ್ಕಾರದ ಆದಾಯವನ್ನು ಹೆಚ್ಚಿಸುತ್ತಿವೆ’ ಎಂದು ಹೇಳಿದರು.

ಕಟ್ಟಿ ಹಾಕುವ ಪಯತ್ನ: ‘ಕೇಂದ್ರ ಸರ್ಕಾರವು ಯಾವುದೇ ಮುನ್ಸೂಚನೆ ನೀಡದೆ ಚಾಲನಾ ತರಬೇತಿ ಶಾಲೆ ಆರಂಭಿಸಲು ಮುಂದಾಗಿದೆ. ಇದು ದುಡಿಯುವ ಕೈಗಳನ್ನು ಕಟ್ಟಿ ಹಾಕುವ ಪಯತ್ನ. ಮೋಟರು ವಾಹನ ಕಾಯ್ದೆಗೆ ತಿದ್ದುಪಡಿ ತರುವಲ್ಲಿ ವಿಫಲವಾಗಿರುವ ಸರ್ಕಾರಕ್ಕೆ ಜನಸಾಮಾನ್ಯರ ಹಿತಕ್ಕಿಂತ ಕಾರ್ಪೊರೇಟ್‌ ಕಂಪನಿಗಳ ಹಿತವೇ ಮುಖ್ಯವಾಗಿದೆ’ ಎಂದು ಧರಣಿನಿರತರು ಆಕ್ರೋಶ ವ್ಯಕ್ತಪಡಿಸಿದರು.

‘ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯಬೇಕು. ಇಲ್ಲದಿದ್ದರೆ ತೀವ್ರ ಹೋರಾಟ ನಡೆಸುತ್ತೇವೆ’ ಎಂದು ಎಚ್ಚರಿಕೆ ನೀಡಿದರು.

ಒಕ್ಕೂಟದ ಜಿಲ್ಲಾ ಘಟಕದ ಅಧ್ಯಕ್ಷ ಆರ್.ಗೋಪಾಲ್, ಪ್ರಧಾನ ಕಾರ್ಯದರ್ಶಿ ಬೈಚೇಗೌಡ, ಉಪಾಧ್ಯಕ್ಷ ಪಿ.ಸಾದಿಕ್, ಕಾರ್ಯದರ್ಶಿ ಎ.ಚಿದಂಬರ್, ಖಜಾಂಚಿ ಜಮೀರ್, ಸಹ ಕಾರ್ಯದರ್ಶಿ ಮುನಿನಾರಾಯಣ, ಸದಸ್ಯರಾದ ಎಲ್.ಮಂಜುನಾಥ್, ಡಿ.ಶಿವರಾಜ್‌, ವೆಂಕಟೇಶ್‌ಮೂರ್ತಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.