ADVERTISEMENT

ತಿಪ್ಪಾರೆಡ್ಡಿ ಬದಲಾವಣೆಗೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 16 ಏಪ್ರಿಲ್ 2017, 5:36 IST
Last Updated 16 ಏಪ್ರಿಲ್ 2017, 5:36 IST
ತಿಪ್ಪಾರೆಡ್ಡಿ  ಬದಲಾವಣೆಗೆ ಒತ್ತಾಯಿಸಿ ಚಿಂತಾಮಣಿ ತಾಲ್ಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಕೋಲಾರ ಹಾಲು ಒಕ್ಕೂಟದ ಅಧ್ಯಕ್ಷರ ಕಚೇರಿ ಮುಂದೆ ಶನಿವಾರ ಪ್ರತಿಭಟನೆ ನಡೆಸಿದರು
ತಿಪ್ಪಾರೆಡ್ಡಿ ಬದಲಾವಣೆಗೆ ಒತ್ತಾಯಿಸಿ ಚಿಂತಾಮಣಿ ತಾಲ್ಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಕೋಲಾರ ಹಾಲು ಒಕ್ಕೂಟದ ಅಧ್ಯಕ್ಷರ ಕಚೇರಿ ಮುಂದೆ ಶನಿವಾರ ಪ್ರತಿಭಟನೆ ನಡೆಸಿದರು   

ಕೋಲಾರ: ಕರ್ನಾಟಕ ಹಾಲು ಮಹಾ ಮಂಡಳಿಯಿಂದ (ಕೆಎಂಎಫ್) ಒಕ್ಕೂಟಕ್ಕೆ ಪ್ರತಿನಿಧಿಯಾಗಿ ನೇಮಕಕೊಂಡಿರುವ ತಿಪ್ಪಾರೆಡ್ಡಿ ಅವರನ್ನು ಬದಲಾವಣೆಗೆ ಒತ್ತಾಯಿಸಿ ಚಿಂತಾಮಣಿ ತಾಲ್ಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಕೋಚಿಮುಲ್ ಅಧ್ಯಕ್ಷ ಕಚೇರಿ ಮುಂದೆ ಶನಿವಾರ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಒಕ್ಕೂಟದ ಚಿಂತಾಮಣಿ ತಾಲ್ಲೂಕಿನ ನಿರ್ದೇಶಕ ವೈ.ಬಿ.ಅಶ್ವತ್ಥನಾರಾಯಣ ಮಾತನಾಡಿ, ‘ಒಕ್ಕೂಟ ಆರಂಭವಾಗಿನಿಂದ ಕೆಎಂಎಫ್‌ನಿಂದ ಒಕ್ಕೂಟಕ್ಕೆ ಮಲತಾಯಿ ಧೋರಣೆ ಅನುಸರಿಸುತ್ತಿದೆ’ ಎಂದು ಆರೋಪಿಸಿದರು.‘ಕೆಎಂಎಫ್ ಪ್ರತಿನಿಧಿಯಾಗಿ ತಿಪ್ಪಾರೆಡ್ಡಿ ನಿರ್ದೇಶಕರಾಗಿ ನೇಮಕವಾಗಿಉ ಒಕ್ಕೂಟದ ಆಡಳಿತ ಮಂಡಳಿಯ ವಿರೋಧವಿದೆ. ಸಭೆಯ ಅನುಮೋದನೆ ಪಡೆದು ಮಹಾ ಮಂಡಳಿಗೂ ಕಳುಹಿಸಲಾಗಿದೆ. ಆದರೆ ಮಂಡಳಿಯ ಅಧಿಕಾರಿಗಳು ಒತ್ತಡಗಳಿಗೆ ಮಣಿದು ಬದಲಾವಣೆ ಮಾಡಲು ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಪ್ರಶ್ನಿಸಿದ ಅವರು, ಒಕ್ಕೂಟದ ಮಾರುಕಟ್ಟೆ ವ್ಯವಸ್ಥೆ ಹಾಳು ಮಾಡಲು ವ್ಯವಸ್ಥಿತವಾಗಿ ಪಿತ್ತೂರಿ ನಡೆಸುತ್ತಿದೆ’ ಎಂದು ದೂರಿದರು.

ಪಟ್ಟಿಯಿಂದ ಕೈಬಿಟ್ಟಿದೆ: ‘ಒಕ್ಕೂಟ ಆರಂಭವಾದಾಗಿನಿಂದ ಕೇರಳ ಹಾಲು ಒಕ್ಕೂಟಕ್ಕೆ ಹಾಲು ರವಾನೆ ಮಾಡಲಾಗುತ್ತಿತ್ತು. ಆದರೆ, ಈಗ ಕೋಚಿಮುಲ್‌ನಿಂದ ಹಂಚಿಕೆ ಪಟ್ಟಿಯಿಂದ ಕೈಬಿಟ್ಟಿದ್ದು, ಪ್ರತಿ ಲೀಟರ್ ಹಾಲಿಗೆ ₹ 3 ನಷ್ಟವಾಗುತ್ತಿದೆ. ಇದಕ್ಕೆ ಅಧಿಕಾರಿಗಳ ದಿಕ್ಕು ತಪ್ಪಿಸುವ ಸಲಹೆಗಳೇ ಕಾರಣವಾಗಿದೆ’ ಎಂದು ಆರೋಪಿಸಿದರು.

ADVERTISEMENT

ವೈಯುಕ್ತಿಕ ಪ್ರತಿಭಟನೆಯಲ್ಲ: ‘ನಾನು ವೈಯುಕ್ತಿಕವಾಗಿ ಯಾರ ವಿರುದ್ಧವೂ ಪ್ರತಿಭಟನೆ ನಡೆಸುತ್ತಿಲ್ಲ. ಇದರಲ್ಲಿ ಯಾವ ದುರುದೇಶವಿಲ್ಲ. ಜಿಲ್ಲೆಯ ರೈತರ ಹಿತದೃಷ್ಟಿಯಿಂದ ಪ್ರತಿಭಟನೆ ನಡೆಸುತ್ತಿದ್ದೇನೆ. ಒಕ್ಕೂಟದಿಂದ ಮಹಾ ಮಂಡಳಿಗೆ ನೀಡಿರುವ ಮನವಿಯಲ್ಲೇ  ಅಧಿಕಾರಿಗಳ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಆದರೆ ಈಗ ತಿಪ್ಪಾರೆಡ್ಡಿ ಪರವಾಗಿ ನಿಲ್ಲಲು ಕಾರಣ ಏನು’ ಎಂದರು.

‘ರವಿಕಾಕಡೆ ಒಕ್ಕೂಟದ ನಿರ್ದೇಶಕರಾಗಿದ್ದಾಗ  ಮಾರುಕಟ್ಟೆ ವ್ಯಾಪಾರ ವಹಿವಾಟನ್ನು ಚರ್ಚಿಸಿ ಸಬರಾಜು ಆಗುವ ಹಾಲು ಉಳಿಕೆಯಾಗದಂತೆ ಹೇಗೆ ಮಾರಾಟ ಮಾಡಬೇಕು ಎಂದು ಸಭೆಗೆ ಉತ್ತಮ ಸಲಹೆಗಳನ್ನು ನೀಡುತ್ತಿದ್ದರು. ಆದರೆ ತಿಪ್ಪಾರೆಡ್ಡಿ ಸಲಹೆಗಳಿಂದ ಹಾಲು ಮತ್ತು ಉತ್ಪನ್ನಗಳು ಮಾರಾಟವಾಗದೆ ಗೋಡನ್‌ಗಳಲ್ಲಿ ದಾಸ್ತಾನು ಆಗಿದೆ. ಇವರನ್ನು ಕೂಡಲೇ ಬದಲಾಯಿಸಬೇಕು’ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ಮಹಾ ಮಂಡಳಿಗೆ ತಿಳಿಸಿದ್ದೇವೆ: ಪ್ರತಿಭಟನಾ ಸ್ಥಳಕ್ಕೆ ಬಂದ ಒಕ್ಕೂಟದ ಅಧ್ಯಕ್ಷ ಬ್ಯಾಟಪ್ಪ ಮಾತನಾಡಿ, ‘ಸಮಸ್ಯೆಯ ಬಗ್ಗೆ ಈಗಾಗಲೇ ಮಹಾ ಮಂಡಳಿ ಅಧಿಕಾರಿಗಳ ಜತೆಗೆ ಚರ್ಚಿಸಲಾಗಿದೆ. ಶೀಘ್ರದಲ್ಲೇ ಸರಿಪಡಿಸಲಾಗುವುದು’  ಎಂದು ಭರವಸೆ ನೀಡಿದರು.ಚಿಂತಾಮಣಿ ತಾಲ್ಲೂಕಿನ ಹಾಲು ಉತ್ಪಾದಕರಾದ ಶಂಕರ ರೆಡ್ಡಿ, ಕೆಂಪರೆಡ್ಡಿ, ವೆಂಕಟೇಶಪ್ಪ, ರಾಮಣ್ಣ ಚಂದ್ರಶೇಖರ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.