ADVERTISEMENT

ದೇವರ ನಂಬಿ ಒಣ ಬಿತ್ತನೆಗೆ ಮಣೆ

ತಾಲ್ಲೂಕಿನಲ್ಲಿ ಕೈಕೊಟ್ಟ ಮಳೆ : ಹತಾಶನಾದ ರೈತ

​ಪ್ರಜಾವಾಣಿ ವಾರ್ತೆ
Published 18 ಜುಲೈ 2017, 6:23 IST
Last Updated 18 ಜುಲೈ 2017, 6:23 IST

ಶ್ರೀನಿವಾಸಪುರ: ಮಳೆ ಕೊರತೆಯಿಂದ ತಾಲ್ಲೂಕಿನ ರೈತರು ಹತಾಶರಾಗಿದ್ದಾರೆ. ಮಳೆ ಇಲ್ಲದಿದ್ದರೂ ಒಣ ಭೂಮಿಯಲ್ಲಿ ಬಿತ್ತನೆ ಮಾಡಿದ್ದಾರೆ.

ಒಣ ನೆಲಕ್ಕೆ ರಾಸಾಯನಿಕ ಗೊಬ್ಬರ ಚೆಲ್ಲಿ ರಾಗಿ ಬಿತ್ತಿದ್ದಾರೆ. ಮಳೆಯಾದರೆ ಮೊಳಕೆ ಬರುತ್ತದೆ ಎಂಬ ನಂಬಿಕೆಯಿಂದ ಒಣ ನೆಲದಲ್ಲಿ ಬಿತ್ತನೆ ಮಾಡಲಾಗುತ್ತಿದೆ. ಮಳೆಯಾಗುವುದು ತಡವಾದರೆ ಬಿತ್ತಿದ ರಾಗಿ ಇರುವೆಗಳ ಪಾಲಾಗುತ್ತದೆ. ಅವರೆ ಮತ್ತಿತರ ಕಾಳುಗಳು ಗೆದ್ದಲಿನ ಹೊಟ್ಟೆ ಸೇರುತ್ತವೆ. 

ತಾಲ್ಲೂಕಿನಲ್ಲಿ ಒಣ ಬಿತ್ತನೆ ಪದ್ಧತಿ ಹಿಂದಿನಿಂದಲೂ ರೂಢಿಯಲ್ಲಿದೆ. ಕೆಲವು ಸಲ ಅದು ಫಲ ನೀಡಿದೆ. ಉತ್ತರ ಭಾಗದ ಗುಡ್ಡಗಾಡು ಪ್ರದೇಶದಲ್ಲೂ ಮಳೆ ಕೊರತೆ ಕಾಡುತ್ತಿದೆ. ಆ ಪ್ರದೇಶ ದಲ್ಲಿ ನೆಲಗಡಲೆ ಬಿತ್ತನೆ ಸಾಮಾನ್ಯ. ಆದರೆ ಮಳೆ ಇಲ್ಲದ ಕಾರಣ ರೈತರು ಬಿತ್ತನೆ ಕೈ ಚೆಲ್ಲಿದ್ದಾರೆ. ದಕ್ಷಿಣ ಭಾಗದ ಬಯಲು ಪ್ರದೇಶದಲ್ಲಿ ಬಹುತೇಕ ಮಾವಿನ ತೋಪುಗಳಿವೆ.

ADVERTISEMENT

ಮಾವಿನ ಮರಗಳ ನಡುವೆಯೇ ರಾಗಿ ಬಿತ್ತಲಾಗುತ್ತದೆ. ಈ ಬಾರಿ ಮಾವಿನ ಸುಗ್ಗಿ ತಡವಾದ ಕಾರಣ ಮಳೆಯಾದರೂ, ಉಳುಮೆ ಸಾಧ್ಯವಾಗಲಿಲ್ಲ. ಮಾವಿನ ತೋಟಗಳಲ್ಲಿ ಪಾರ್ಥೇನಿಯಂ ಕಳೆ ಬೆಳೆದು ನಿಂತಿವೆ.

ಮಳೆಯಾದ ಸಂದರ್ಭದಲ್ಲಿ ಜಮೀನು ಉಳುಮೆ ಮಾಡಿ, ಬಿತ್ತನೆಗೆ ಹದಗೊಳಿಸಿರುವ ರೈತರು ಮಾತ್ರ ಒಣ ಬಿತ್ತನೆ ಮಾಡುತ್ತಿದ್ದಾರೆ. ಉಳಿದವರು ಜಮೀನು ಉಳುಮೆ ಮಾಡಲು ಮಳೆ ಗಾಗಿ ಕಾದು ಕುಳಿತಿದ್ದಾರೆ. ಗದ್ದೆ ಬಯ ಲಿನ ವ್ಯವಸಾಯ ಸಂಪೂರ್ಣ ಸ್ಥಗಿತ ವಾಗಿದೆ. ಗದ್ದೆ ಬಯಲಿನಲ್ಲೂ ಮಾವಿನ ಗಿಡ ಬೆಳೆಸಲಾಗಿದ್ದು, ನಡುವೆ ರಾಗಿ ಬಿತ್ತಲಾಗುತ್ತಿದೆ.

**

ಸಮಯಕ್ಕೆ ಸರಿಯಾಗಿ ಮಳೆಯಾಗಿದ್ದರೆ ನೆಲಗಡಲೆ ಬಿತ್ತನೆ ಮುಗಿದು ಕಳೆ ತೆಗೆಯಬೇಕಾ ಗಿತ್ತು. ಆದರೆ ಇನ್ನೂ ಬಿತ್ತನೆಯೇ ಆಗಿಲ್ಲ. ಮಳೆಯಾಗುವುದು ಯಾವಾಗಲೋ ಬಿತ್ತನೆ ಮಾಡುವುದು ಯಾವಾಗಲೋ.
-ವೆಂಕಟಮ್ಮ, ಕೃಷಿಕ ಮಹಿಳೆ

**

ದೇವರ ನಂಬಿ ಒಣ ಬಿತ್ತನೆ ಮಾಡುತ್ತಿದ್ದೇವೆ. ಮಳೆರಾಯ ಕರುಣಿಸಿದರೆ ಬಿತ್ತಿದ ಬೀಜ ಮೊಳೆಯುತ್ತದೆ. ಇಲ್ಲವಾದರೆ ನಷ್ಟ ತಪ್ಪಿದ್ದಲ್ಲ. ಇಷ್ಟಕ್ಕೂ ನಮ್ಮ ಕೈಯಲ್ಲಿ ಏನಿದೆ.
-ವೆಂಕಟೇಶಪ್ಪ, ರೈತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.