ADVERTISEMENT

ದೇವಾಲಯಗಳಿಗೆ ಹರಿದು ಬಂದ ಭಕ್ತಸಾಗರ

ವೈಕುಂಠ ಏಕಾದಶಿ ವಿಶೇಷ ಪೂಜೆ-, ಜಿಲ್ಲೆಯ ವಿವಿಧ ದೇವಾಲಯಗಳಲ್ಲಿ ಅಭಿಷೇಕ, ಹೂವಿನ ಅಲಂಕಾರ

​ಪ್ರಜಾವಾಣಿ ವಾರ್ತೆ
Published 9 ಜನವರಿ 2017, 9:39 IST
Last Updated 9 ಜನವರಿ 2017, 9:39 IST
ದೇವಾಲಯಗಳಿಗೆ ಹರಿದು ಬಂದ ಭಕ್ತಸಾಗರ
ದೇವಾಲಯಗಳಿಗೆ ಹರಿದು ಬಂದ ಭಕ್ತಸಾಗರ   

ಕೋಲಾರ: ವೈಕುಂಠ ಏಕಾದಶಿ ಅಂಗವಾಗಿ ನಗರದ ವಿವಿಧ ದೇವಾಲಯಗಳಲ್ಲಿ ಭಾನುವಾರ ವಿಶೇಷ ಪೂಜಾ ಕಾರ್ಯಕ್ರಮ ನಡೆಯಿತು. ನಗರದ ದೊಡ್ಡಪೇಟೆಯ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ಭಾನುವಾರ ಮುಂಜಾನೆಯಿಂದಲೇ ಸ್ವಾಮಿಯ ದರ್ಶನಕ್ಕೆ ಸಾವಿರಾರು ಭಕ್ತರು ಸಾಲುಗಟ್ಟಿ ನಿಂತಿದ್ದರು. ವೈಕುಂಠ ಏಕಾದಶಿಯಂದು ದೇವರ ದರ್ಶನ ಮಾಡಿದರೆ ಒಳ್ಳೆಯದು ಎಂಬ ನಂಬಿಕೆಯಿಂದ ನಗರ ಸೇರಿದಂತೆ ಗ್ರಾಮೀಣ ಭಾಗದಿಂದ ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆದರು.

ಮುಂಜಾನೆಯಿಂದಲೇ ಅಭಿಷೇಕ, ವಿಶೇಷ ಪೂಜೆ, ಹೂವಿನ ಅಲಂಕಾರ, ಮಹಾಮಂಗಳಾರತಿ, ಪ್ರಸಾದ ವಿನಿಯೋಗ ನಡೆಯಿತು. ವೆಂಕಟರಮಣಸ್ವಾಮಿ ದೇವಾ ಲಯಕ್ಕೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಸ್ವಾಮಿಯ ದರುಶನ ಪಡೆಯಲು ಬಂದ ಕಾರಣ ಈ ರಸ್ತೆಯಲ್ಲಿ ವಾಹನ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಹೆಚ್ಚಿನ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು.

ನಗರದ ಸರ್ವಜ್ಞ ವೃತ್ತದ ಸಮೀಪವಿರುವ ಪಂಚಮುಖಿ ಆಂಜನೇಯಸ್ವಾಮಿ ದೇವಾಲಯ,  ಶಂಕರಮಠದಲ್ಲಿನ ಶಾರದಾಮಾತೆಯ ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮಗಳು ನಡೆದವು.

ನಗರದ ಕಲಾಯಿಪೇಟೆಯ ವರದರಾಜಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿ ಅಂಗವಾಗಿ ಸ್ವಾಮಿಗೆ ವಿಶೇಷ ಅಲಂಕಾರ, ವೈಕುಂಠದ್ವಾರ ದರ್ಶನ ಜತೆಗೆ ಬಾಲಕೃಷ್ಣನನ್ನು ಉಯ್ಯಾಲೆಯಲ್ಲಿ ತೂಗುವ ವಿಶಿಷ್ಟ ವ್ಯವಸ್ಥೆ ಮಾಡಲಾಗಿತ್ತು. ಭಕ್ತರು ಪೂಜೆಯಲ್ಲಿ ಪಾಲ್ಗೊಂಡಿದ್ದರು.

ಹೂವಿನ ಅಲಂಕಾರ
ನರಸಾಪುರ : ವೈಕುಂಠ ಏಕಾದಶಿ ಅಂಗವಾಗಿ ಲಕ್ಷ್ಮಿನಾರಾಯಣಸ್ವಾಮಿ ದೇವಾಲಯದಲ್ಲಿ ವಿಶೇಷ ಅಭಿಷೇಕ, ಹೂವಿನ ಅಲಂಕಾರ, ಪೂಜೆ ನಡೆಯಿತು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾಪಂಚಾಯಿತಿ ಸದಸ್ಯ ಜಿ.ಎಸ್.ಅಮರ್‌ನಾಥ್, ಗ್ರಾಮದ ಮುಖಂಡರಾದ ಭಾನುಪ್ರಕಾಶ್, ರುದ್ರೇಶ್, ನಾಗ, ಲೋಕೇಶ್, ಪ್ರಸಾದ್ ಪಾಲ್ಗೊಂಡಿದ್ದರು.

ಏಳು ಬಾಗಿಲು ಪೂಜೆ
ಮುಳಬಾಗಿಲು: ವೈಕುಂಠ ಏಕಾದಶಿ ಅಂಗವಾಗಿ ನಗರದ ವಿಠಲೇಶ್ವರಪಾಳ್ಳದಲ್ಲಿರುವ ಗೋವಿಂದರಾಜು ಸ್ವಾಮಿ ದೇವಾಲಯದಲ್ಲಿ ಭಾನುವಾರ ವಿಶೇಷ ಪೂಜಾ ಕಾರ್ಯಗಳು ನಡೆಯಿತು.

ದೇವರ ವಿಗ್ರಹಕ್ಕೆ ಅಭಿಷೇಕ, ಹೋಮ, ಹೂವಾರ್ಚನೆ, ಹೂವಿನ ಅಲಂಕಾರ ಮಾಡಲಾಗಿತ್ತು. ಬೆಳಿಗ್ಗೆಯಿಂದ ನಗರ ಹಾಗೂ ಗ್ರಾಮೀಣ ಪ್ರದೇಶಗಳಿಂದ ಭಕ್ತರು ದೇವಾಲಯಕ್ಕೆ ಬಂದು ಪೂಜೆಗಳನ್ನು ಮಾಡಿದರು.

ವೈಕುಂಠಕ್ಕೆ ಇರುವ ಏಳು ಬಾಗಿಲುಗಳ ರೀತಿಯಲ್ಲಿ ಇಲ್ಲಿನ ದೇವಾಲಯಕ್ಕೆ ಬಾಗಿಲುಗಳನ್ನು ಇಡಲಾಗಿತ್ತು. ಭಕ್ತರು ಏಳು ಬಾಗಿಲುಗಳ ಮೂಲಕ ನಡೆದು ದೇವರ ದರ್ಶನ ಮಾಡಿದರು.

ಅಲ್ಲದೇ, ಪುರಾಣ ಪ್ರಸಿದ್ದ ಆಂಜನೇಯಸ್ವಾಮಿ, ಸೋಮೇಶ್ವರಪಾಳ್ಯ ಸೋಮೇಶ್ವರ, ವಿಠಲ ನಾರಾಯಣ, ಉದ್ಬವ ಶಿವಕೇಶವ ನಗರ ಶಿವಲಿಂಗ, ಕನ್ನಿಕಾ ಪರಮೇಶ್ವರಿ, ಆದಿ ನಾಂಚಾರಮ್ಮ, ಕಾಟೇರಮ್ಮ, ನೇತಾಜೀ ನಗರ ಯಲ್ಲಮ್ಮ, ಮುತ್ಯಾಲಪೇಟೆ ಗಂಗಮ್ಮ, ಆದಿ ಆಂಜನೇಯಸ್ವಾಮಿ, ವಿರೂಪಾಕ್ಷಿಯ ವಿರೂಪಾಕ್ಷೇಶ್ವರ, ಬೈರಕೂರು ಸೋಮೇಶ್ವರ, ಹೆಬ್ಬಣಿ ಸೋಮೇಶ್ವರ, ಗುಡಿಪಲ್ಲಿಯ ಸೋಮೇಶ್ವರ, ಕಾಶಿ ವಿಶ್ವೇಶ್ವರ, ಆವಣಿ ರಾಮಲಿಂಗೇಶ್ವರ, ಕೊಲದೇವಿ ಗರುಡ, ಕುರುಡುಮಲೆ ವಿನಾಯಕ ದೇವಾಲಯಗಳಲ್ಲಿಯೂ ವಿಶೇಷ ಪೂಜೆ ನಡೆದವು.

ತೇಕಂಚಿಯಲ್ಲಿ  ದರ್ಶನ
ಟೇಕಲ್: ಪುರಾಣ ಕಾಲದಿಂದ ಟೇಕಲ್‌ನ ತೇಕಂಚಿ ಕ್ಷೇತ್ರವೆಂದೇ ಪ್ರಸಿದ್ಧಿ ಪಡೆದಿರುವ ಲಕ್ಷ್ಮಿ ವರದರಾಜಸ್ವಾಮಿ ದೇವಾಲಯದಲ್ಲಿ ಭಾನುವಾರ ವೈಕುಂಠ ದ್ವಾರದ ಬಾಗಿಲ ಸ್ವಾಮಿಯ ದರ್ಶನ ಪಡೆದರು.

ದೇವಾಲಯಲ್ಲಿ ಮುಂಜಾನೆಯಿಂದಲೇ ದೇವರಿಗೆ ವಿಶೇಷ ಅಲಂಕಾರ ಮಾಡಿ ದೇವರ ದರ್ಶನಕ್ಕೆ ವ್ಯವಸ್ಥೆ ಕಲ್ಪಿಸಲಾಗಿತ್ತು. ನಗರೇಶ್ವರ ಚಾರಿಟಬಲ್ ಟ್ರಸ್ಟ್‌ನಿಂದ ಭಕ್ತಾಧಿಗಳಿಗೆ ಪ್ರಸಾದ ವಿನಿಯೋಗ ಮಾಡಲಾಯಿತು. ಅಲ್ಲದೇ,  ಮಾಜಿ ಸಚಿವ ಎಸ್.ಎನ್.ಕೃಷ್ಣಯ್ಯಶೆಟ್ಟಿ  ಲಾಡು ವಿತರಣೆ ಮಾಡಿದರು.

ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷೆ ಕೆ.ಯಶೋದ, ಸದಸ್ಯೆ ಗೀತಾ ವೆಂಕಟೇಶ್‌ಗೌಡ, ಕೋಚಿಮುಲ್ ನಿರ್ದೇಶಕ ಕೆ.ವೈ.ನಂಜೇಗೌಡ, ಕೆ.ಎಂ.ರಾಮಕೃಷ್ಣಪ್ಪ, ಗೋವಿಂದರಾಜರೆಡ್ಡಿ, ಕೆ.ಎಸ್. ವೆಂಕಟೇಶ್‌ಗೌಡ, ಗ್ರಾಪಂ ಸದಸ್ಯ ವೆಂಕಟಸ್ವಾಮಿ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಚಿಕ್ಕ ತಿರುಪತಿಯಲ್ಲಿ ಭಕ್ತ ಸಾಗರ
ಮಾಲೂರು : ಪ್ರಸಿದ್ದ ಯಾತ್ರಾ ಸ್ಥಳವಾದ ಚಿಕ್ಕತಿರುಪತಿ ಪ್ರಸನ್ನ ವೆಂಕಟರಮಣಸ್ವಾಮಿ ದೇವಾಲಯದಲ್ಲಿ ವೈಕುಂಠ ಏಕಾದಶಿ  ಅಂಗವಾಗಿ ವಿಶೇಷ ಪೂಜಾ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆಸಲಾಯಿತು.

ದೇವಾಲಯದ ಪ್ರಧಾನ ಅರ್ಚಕರ  ನೇತೃತ್ವದಲ್ಲಿ ದೇವರಿಗೆ ಮುಂಜಾನೆಯಿಂದಲೇ ಪಂಚಾಮೃತ ಅಭಿಷೇಕ, ತೀರ್ಥ ಪ್ರಸಾದ, ವೇದ ಮಂತ್ರ ಪಾರಾಯಣ, ದೇವರಿಗೆ ವಿಶೇಷ ಹೂವಿನ ಅಲಂಕಾರ ಹಾಗೂ ಆಭರಣ ಅಲಂಕಾರ ಮಾಡಲಾಗಿತ್ತು.

ಮುಂಜಾನೆ 3 ಗಂಟೆಯಿಂದಲೇ ಪೂಜಾ ಕೈಂಕರ್ಯಗಳು ಪ್ರಾರಂಭವಾದವು. ನಂತರ ವಿಶೇಷ ಮಹಾಮಂಗಳಾರತಿ ಪೂಜೆ ಸಲ್ಲಿಸಿ ದೇವರ ದರ್ಶನ ಪಡೆಯಲು ಅವಕಾಶ ಕಲ್ಪಿಸಲಾಯಿತು.

ತಾಲ್ಲೂಕಿನ ಗಡಿ ಭಾಗದಲ್ಲಿರುವ ಚಿಕ್ಕತಿರುಪತಿ ದೇವಾಲಯಕ್ಕೆ ತಮಿಳುನಾಡು , ಆಂಧ್ರ ಮತ್ತು ಬೆಂಗಳೂರು ಭಾಗದಿಂದಲೂ   ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿ ಸ್ವಾಮಿಯ ದೇವರ ದರ್ಶನ ಪಡೆದರು. ಒಟ್ಟಾರೆ ಸುಮಾರು 2 ಲಕ್ಷ ಭಕ್ತರು ದರ್ಶನ ಪಡೆದರು ಎನ್ನಲಾಗಿದೆ.

ಮಾಜಿ ಶಾಸಕ ಎ.ನಾಗರಾಜ್,  ಉಪ ವಿಭಾಗಾಧಿಕಾರಿ ಮಂಜುನಾಥ್, ತಾ.ಪಂ.ಸದಸ್ಯರಾದ  ವಿ.ನಾಗೇಶ್ ಸಂಪಗೆರೆ ಮುನಿರಾಜು, ತಾ.ಪಂ. ಇಒ ಕೆ.ಪಿ.ಸಂಜೀವಪ್ಪ, ಪುರಸಭೆ ಅಧ್ಯಕ್ಷ ಎಂ.ರಾಮಮೂರ್ತಿ, ಉಪಾಧ್ಯಕ್ಷೆ ಗೀತಾ ರಮೇಶ್, ತಾ.ಪಂ. ಅಧ್ಯಕ್ಷ ತ್ರಿವರ್ಣ, ಉಪಾಧ್ಯಕ್ಷೆ ನಾಗವೇಣಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಮಂಗಮ್ಮ ದೇವಾಲಯಕ್ಕೆ ಆಗಮಿಸಿ ದರ್ಶನ ಪಡೆದರು.

ಇನ್ನು, ರೈಲ್ವೇ ಸೇತುವೆ ಬಳಿ ಇರುವ ವೀರಾಂಜನೇಯ ಸ್ವಾಮಿ ದೇಗುಲ, ಕೋದಂಡ ರಾಮಸ್ವಾಮಿ, ಶ್ರೀದೇವಿ–ಭೂದೇವಿ ಸಮೇತ ವೆಂಕಟೇಶ್ವರಸ್ವಾಮಿ, ಧರ್ಮರಾಯ ಸ್ವಾಮಿ, ಶಿರಡಿ ಸಾಯಿಬಾಬ ದೇವಾಲಯಗಳಲ್ಲಿಯೂ ಸಹ ವೈಕುಂಠ ಏಕಾದಶಿ ಪೂಜೆಯ ಕಾರ್ಯಕ್ರಮ ನಡೆಯಿತು.

ವಿಶೇಷ  ಪೂಜೆ
ಶ್ರೀನಿವಾಸಪುರ: ತಾಲ್ಲೂಕಿನ ರೋಣೂರು ಗ್ರಾಮದ ಪುರಾತನ ಲಕ್ಷ್ಮಿವೆಂಕಟರಮಣಸ್ವಾಮಿ ದೇವಾಲಯದಲ್ಲಿ ಭಾನುವಾರ ವೈಕುಂಠ ಏಕಾದಶಿ ಪ್ರಯುಕ್ತ ವಿಶೇಷ ಪೂಜೆ ನೆರವೇರಿಸಲಾಯಿತು.

  ದೇವಾಲಯದ ಹೊರ ಭಾಗದಲ್ಲಿ ನಿರ್ಮಿಸಲಾಗಿದ್ದ ವೈಕುಂಠ ದ್ವಾರದ ಮೂಲಕ ಭಕ್ತರನ್ನು ದೇವಾಲಯದ ಒಳಗೆ ಬಿಡಲಾಯಿತು. ಸರತಿ ಸಾಲಿನಲ್ಲಿ ಸಾಗಿದ ಭಕ್ತಾದಿಗಳು ದೇವರ ದರ್ಶನ ಪಡೆದು ಪುನೀತರಾದರು.

ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದಿಂದ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದ ಭಕ್ತರಿಗೆ, ದೇವರ ದರ್ಶನದ ಬಳಿಕ ಊಟದ ವ್ಯವಸ್ಥೆ ಮಾಡಲಾಗಿತ್ತು. ಪ್ರಸಾದವಾಗಿ ಲಾಡು ವಿತರಿಸಲಾಯಿತು. ಜೊತೆಗ ಶ್ರೀನಿವಾಸಪುರದ ಎಲ್ಲಾ ದೇವಾಲಯದಲ್ಲಿ ದೇವರ ವಿಗ್ರಹಗಳಿಗೆ ವಿಶೇಷ ಅಲಂಕಾರ ಹಾಗೂ ಪೂಜೆ ಏರ್ಪಡಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.