ADVERTISEMENT

ನಾಳೆಯಿಂದ ಫಲಪುಷ್ಪ ಪ್ರದರ್ಶನ

​ಪ್ರಜಾವಾಣಿ ವಾರ್ತೆ
Published 22 ಜೂನ್ 2017, 9:40 IST
Last Updated 22 ಜೂನ್ 2017, 9:40 IST

ಕೋಲಾರ: ‘ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ಸಹಯೋಗದಲ್ಲಿ ನಗರದ ತೋಟಗಾರಿಕೆ ಇಲಾಖೆ ಆವರಣದಲ್ಲಿ ಜೂನ್‌ 23ರಿಂದ 25ರವರೆಗೆ ಮೂರು ದಿನಗಳ ಕಾಲ ಫಲಪುಷ್ಪ ಪ್ರದರ್ಶನ ಹಾಗೂ ಸಾವಯವ ಸಿರಿಧಾನ್ಯ ಮೇಳ- ಹಮ್ಮಿಕೊಳ್ಳಲಾಗಿದೆ’ ಎಂದು ಜಿಲ್ಲಾಧಿಕಾರಿ ಡಾ. ಕೆ.ವಿ. ತ್ರಿಲೋಕಚಂದ್ರ ತಿಳಿಸಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೃಷಿಯಲ್ಲಿ ಆವಿಷ್ಕಾರಗೊಂಡ ನೂತನ ತಾಂತ್ರಿಕತೆಯನ್ನು ಪ್ರಾತ್ಯಕ್ಷಿಕೆ ಮೂಲಕ ಅನಾವರಣಗೊಳಿಸಲಾಗುತ್ತದೆ. ಸಿರಿ ಧಾನ್ಯಗಳ ಬಗ್ಗೆ ಸಾರ್ವಜನಿಕರಿಗೆ ಅರಿವು ಮೂಡಿಸಿ ಅವುಗಳ ವೈವಿಧ್ಯತೆ ತಿಳಿಸಲಾಗುತ್ತದೆ. ದಿನನಿತ್ಯದ ಆಹಾರ ಪದ್ಧತಿಯಲ್ಲಿ ಅವುಗಳನ್ನು ಹೇಗೆ ಅಳವಡಿಸಿಕೊಳ್ಳಬೇಕು ಎಂಬ ಬಗ್ಗೆ ಮಾಹಿತಿ ನೀಡಲಾಗುತ್ತದೆ’ ಎಂದರು.

‘ಮರಳಿನಿಂದ ನಿರ್ಮಿಸಿದ ಬಿ.ಆರ್. ಅಂಬೇಡ್ಕರ್‌ ಅವರ ಆಕೃತಿ, 20 ಸಾವಿರ ಹೂಗಳಿಂದ ಸಿದ್ಧಪಡಿಸುವ ಕೋಟಿ ಲಿಂಗೇಶ್ವರ ದೇವಸ್ಥಾನದ ಮಾದರಿ, ತರಕಾರಿ ಕೆತ್ತನೆ, ವಿವಿಧ ಜಾತಿಯ ಹೂ ಮತ್ತು ಅಲಂಕಾರಿಕ ಗಿಡಗಳು, ಹೂವಿನ ಅಲಂಕಾರವು ಫಲಪುಷ್ಪ ಪ್ರದರ್ಶನದ ಪ್ರಮುಖ ಆಕರ್ಷಣೆಗಳು. ಜತೆಗೆ ರಂಗೋಲಿ ಸ್ಪರ್ಧೆ ಮತ್ತು ನಗರದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಚಿತ್ರಕಲೆ ಸ್ಪರ್ಧೆ ಏರ್ಪಡಿಸಲಾಗಿದೆ’ ಎಂದು ವಿವರಿಸಿದರು.

ADVERTISEMENT

‘ಕೃಷಿ, ತೋಟಗಾರಿಕೆ, ರೇಷ್ಮೆ, ತೋಟಗಾರಿಕಾ ಮಹಾವಿದ್ಯಾಲಯ, ಕೃಷಿ ವಿಜ್ಞಾನ ಕೇಂದ್ರ, ಹೈನುಗಾರಿಕೆ ಮತ್ತು ಪಶುಪಾಲನೆ, ಅರಣ್ಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಶಿಕ್ಷಣ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ರೈತರಿಗೆ ಹಾಗೂ ಸಾರ್ವಜನಿಕರಿಗೆ ಮಾಹಿತಿ ನೀಡಲು ಮಳಿಗೆಗಳನ್ನು ತೆರೆಯಲಾಗುತ್ತದೆ. ಅತ್ಯಾಧುನಿಕ ಕೃಷಿ ಉಪಕರಣಗಳು, ಸಾವಯವ ಬೇಸಾಯ, ಹನಿ ನೀರಾವರಿ ಪದ್ಧತಿ, ಅಣಬೆ ಬೇಸಾಯ, ಹಸಿರುಮನೆ ಬೇಸಾಯ, ಸಮಗ್ರ ಕೃಷಿ ಪದ್ಧತಿ ಬಗ್ಗೆ ಮಾಹಿತಿ ನೀಡಲಾಗುತ್ತದೆ’ ಎಂದು ಹೇಳಿದರು.

ಫುಡ್‌ಕೋರ್ಟ್‌: ‘ಕೃಷಿ ಇಲಾಖೆ ಹಾಗೂ ಆತ್ಮ ಯೋಜನೆಯಡಿ ಸಾವಯವ ಸಿರಿಧಾನ್ಯ ಮೇಳ ಆಯೋಜಿಸಿ ಫುಡ್‌ಕೋರ್ಟ್‌ ತೆರೆದು ಸಿರಿಧಾನ್ಯಗಳಿಂದ ತಯಾರಿಸಿದ ತಿಂಡಿ -ತಿನಿಸುಗಳನ್ನು ಮಾರಾಟ ಮಾಡಲಾಗುತ್ತದೆ. ಅರಣ್ಯ ಇಲಾಖೆ ವತಿಯಿಂದ ಸಮಗ್ರ ಬೇಸಾಯ ಪದ್ಧತಿ ಹಾಗೂ ಜೈವಿಕ ಇಂಧನ ಮಾದರಿ ನಿರ್ಮಿಸಲಾಗುತ್ತದೆ’ ಎಂದರು.
‘ರೇಷ್ಮೆ ಇಲಾಖೆಯಿಂದ ಗೂಡಿನ ಅಲಂಕಾರಿಕ ವಸ್ತುಗಳ ಪ್ರದರ್ಶನ ಮತ್ತು ಹಿಪ್ಪು ನೇರಳೆ ಸಸಿಗಳ ಪ್ರಾತ್ಯಕ್ಷಿಕೆ ನಡೆಸಲಾಗುತ್ತದೆ. ಜಲಾನಯನ ಮಾದರಿ, ಕೊಳವೆ ಬಾವಿ ಮರುಪೂರಣ ಹಾಗೂ ಮಾದರಿ ಕೃಷಿಹೊಂಡ ಪ್ರಾತ್ಯಕ್ಷಿಕೆ ಹಮ್ಮಿಕೊಳ್ಳಲಾಗಿದೆ’ ಎಂದು ಮಾಹಿತಿ ನೀಡಿದರು.

‘ಮೀನುಗಾರಿಕೆ ಇಲಾಖೆಯಿಂದ ವಿವಿಧ ಜಾತಿಯ ಮೀನುಗಳನ್ನು ಅಕ್ವೇರಿಯಂನಲ್ಲಿ ಪ್ರದರ್ಶಿಸಲಾಗುತ್ತದೆ. ಮಾವು ಅಭಿವೃದ್ಧಿ ಮಂಡಳಿಯು ನೈಸರ್ಗಿಕವಾಗಿ ಮಾವು ಮಾಗಿಸುವ ವಿಧಾನದ ಪ್ರಾತ್ಯಕ್ಷಿಕೆ ನೀಡುತ್ತದೆ. ಸಾವಯವ ಮಾವು ಬೆಳೆಗಾರರ ಮಾವಿನ ಹಣ್ಣುಗಳನ್ನು ಮಳಿಗೆಯಲ್ಲಿ ಮಾರಾಟ ಮಾಡಲಾಗುತ್ತದೆ. ವಿವಿಧ ಜಾತಿಯ ಮೇವು ಬೆಳೆಗಳ ಪ್ರಾತ್ಯಕ್ಷಿಕೆ, ತಾರಸಿ ಮತ್ತು ಕೈತೋಟ ಮಾದರಿ, ಜೇನು ಮೇಳಕ್ಕೆ ಅವಕಾಶ ಕಲ್ಪಿಸಲಾಗಿದೆ’ ಎಂದರು.

ಸಿರಿ ಧಾನ್ಯಕ್ಕೆ ಒತ್ತು: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ (ಸಿಇಒ) ಬಿ.ಬಿ. ಕಾವೇರಿ ಮಾತನಾಡಿ, ‘ಸಿರಿ ಧಾನ್ಯಗಳ ಮೇಳಕ್ಕೆ ಹೆಚ್ಚು ಒತ್ತು ನೀಡಲಾಗಿದ್ದು, ಬೇರೆ ಬೇರೆ ಇಲಾಖೆಗಳ ಸಿಬ್ಬಂದಿ ತಮ್ಮ ವಿಶೇಷತೆಗಳು ಹಾಗೂ ಸೌಲಭ್ಯಗಳ ಕುರಿತು ಮಾಹಿತಿ ನೀಡುತ್ತಾರೆ. ಸಸಿಗಳ ಮಾರಾಟಕ್ಕೂ ಅವಕಾಶ ಕಲ್ಪಿಸಲಾಗಿದೆ’ ಎಂದು ಹೇಳಿದರು. ತೋಟಗಾರಿಕೆ ಇಲಾಖೆ ಉಪ ನಿರ್ದೇಶಕ ಎಂ.ಎಸ್‌.ರಾಜು, ಕೃಷಿ ಇಲಾಖೆ ಜಂಟಿ ನಿರ್ದೇಶಕ ಶಿವಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.