ADVERTISEMENT

ನೀರಡಿಕೆ ನೀಗಿಸುವ ತಾಟಿ ನಿಂಗು

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2017, 5:17 IST
Last Updated 14 ಮಾರ್ಚ್ 2017, 5:17 IST

ಮಾಲೂರು: ಬಿಸಿಲಿನ ತೀವ್ರತೆ ಏರುತ್ತಿರುವುದರಿಂದ ಬಾಯಾರಿಕೆ ಹೆಚ್ಚಾಗಿದೆ. ಎಳನೀರಿಗೆ ಪರ್ಯಾಯವಾದ ತಾಳೆಹಣ್ಣಿಗೆ (ತಾಟಿನಿಂಗು) ಪಟ್ಟಣದಲ್ಲಿ ಬೇಡಿಕೆ ಹೆಚ್ಚಿದೆ.

ತಮಿಳುನಾಡಿನ ವಾನಂಬಾಡಿಯಿಂದ ಹೊಸೂರು ಮೂಲಕ ಸರಬರಾಜಾಗುವ ತಾಳೆಹಣ್ಣು ಎಳೆನೀರಿನಷ್ಟೇ ಆರೋಗ್ಯಕರ ಗುಣ ಹೊಂದಿದೆ. ಹೀಗಾಗಿ ಬೇಡಿಕೆ ಹೆಚ್ಚಾಗಿದೆ. ಇದನ್ನರಿತ ವ್ಯಾಪಾರಿಗಳು ತಳ್ಳುವ ಗಾಡಿ ಮತ್ತು ಸೈಕಲ್‌ಗಳ ಮೇಲೆ ಒತ್ತು ಬೀದಿ–ಬೀದಿಗಳಲ್ಲಿ ಮಾರಾಟ ಮಾಡುತ್ತಿದ್ದಾರೆ. ಸಣ್ಣ ಗಾತ್ರದ ಈ ಹಣ್ಣು ಎಳನೀರಿನಂತೆ ಕಂಡರೂ ಕತ್ತರಿಸಿದಾಗ ಒಳಗೆ ಕೊಬ್ಬರಿಯಂತಹ ಮೂರ್ನಾಲ್ಕು ತೊಳೆಗಳು ಇರುತ್ತವೆ. ಇದನ್ನು ತಿಂದಾಗ ಎಳನೀರಿನ ತಿಳಿಗಂಜಿ ಸವಿದಂತಾಗುತ್ತದೆ. ಹೀಗಾಗಿ ಪಟ್ಟಣದಲ್ಲಿ ಜನರು ಬೇಸಿಗೆಯ ಬೇಗೆ ನಿವಾರಿಸಿಕೊಳ್ಳಲು ತಾಳೆಹಣ್ಣಿನ ಮೊರೆ ಹೋಗಿದ್ದಾರೆ.

ತಾಳೆಹಣ್ಣು ತಮಿಳುನಾಡಿನಲ್ಲಿ ನುಂಗು ಎಂದು ಕರೆದರೆ ಈ ಭಾಗದಲ್ಲಿ ತಾಟಿನಿಂಗು ಎಂದೇ ಕರೆಯುವ ವಾಡಿಕೆ. ತಾಟಿನಿಂಗು ವ್ಯಾಪಾರಿ ವೇಲು ತಮಿಳುನಾಡಿನ ವಾನಂಬಾಡಿಯ ಪುತ್ತಕೂರು ಬಳಿ  ಹೇರಳವಾಗಿ ಬೆಳೆದಿರುವ ತಾಳೆಹಣ್ಣಿನ ಮರಗಳಲ್ಲಿ  ಒಂದು ಕಾಯಿಗೆ ₹10 ರಂತೆ 30 ರಿಂದ 35 ಇರುವ ಒಂದು ಗೊಂಚಲಿಗೆ  ₹250 ನಂತೆ ಒಟ್ಟಾಗಿ ಖರೀದಿಸಿ ಲಾರಿಗಳ ಮುಖಾಂತರ ತಂದು,  ಒಂದು ತಾಳೆಹಣ್ಣಿಗೆ 15 ರಿಂದ 20 ರಂತೆ ಮಾರಾಟ ಮಾಡುತ್ತಿದ್ದಾರೆ.

ADVERTISEMENT

ಬೇಸಿಗೆಯಲ್ಲಿ ಹೆಚ್ಚು ಬೇಡಿಕೆ ಇದ್ದರೂ ಜನರು ಇತರೆ ಹಣ್ಣುಗಳಂತೆ ಇದನ್ನು ಖರೀದಿಸಲು ಹುಡುಕಿಕೊಂಡು ಹೋಗುವುದಿಲ್ಲ. ಈಗಾಗಿ ಮಾರುಕಟ್ಟೆಗಿಂತ ಬೀದಿ ಬದಿಗಳಲ್ಲಿ ಮಾರಾಟ ಮಾಡುವುದೇ ಹೆಚ್ಚು. ಮಾರಾಟಗಾರರು ಮಾರುಕಟ್ಟೆಗೆ ಹೋಗಿ ಕೊಳ್ಳುವ ಅಗತ್ಯವಿಲ್ಲ. ಬದಲಿಗೆ ಲಾರಿಗಳಲ್ಲಿ ಬರುವ ತಾಟಿನಿಂಗನ್ನು ಮಾರ್ಗ ಮಧ್ಯೆ ವ್ಯಾಪಾರಿಗಳು ಇರುವ ಕಡೆಯೇ ಇಳಿಸಿ ಹೋಗುತ್ತಾರೆ. ಇದರಿಂದ ಸಾರಿಗೆ ತೊಂದರೆ ಕಡಿಮೆಯಾಗುತ್ತದೆ ಎನ್ನುತ್ತಾರೆ ವ್ಯಾಪಾರಿ ಪಳನಿ.

  ತಾಟಿನಿಂಗ್ ಮೂಲತಹ ಆಫ್ರಿಕಾದ ಉಷ್ಣವಲಯದ ಬೆಳೆ. ಇದನ್ನು ಭಾರತ, ಶ್ರೀಲಂಕಾ, ಬರ್ಮಾ ಮತ್ತು ಮಲೇಷಿಯಾದಲ್ಲಿ ಹೆಚ್ಚಾಗಿ ಬೆಳೆಯಬಹುದಾಗಿದೆ. ದೇಶದಲ್ಲಿ ಸುಮಾರು 8.6 ಕೋಟಿ ತಾಟಿನಿಂಗ್ ಗಿಡಗಳಿದ್ದು, ತಮಿಳುನಾಡು ಒಂದರಲ್ಲೇ 5.2 ಕೋಟಿ ಗಿಡಗಳನ್ನು ಕಾಣಬಹುದಾಗಿದೆ. ಉಳಿದಂತೆ ಆಂಧ್ರಪ್ರದೇಶ, ಕೇರಳಗಳಲ್ಲಿ ಬೆಳೆಯುತ್ತಾರೆ ಎಂದು ತೋಟಗಾರಿಕೆ ಇಲಾಖೆ ಅಧಿಕಾರಿ ಕೃಷ್ಣಮೂರ್ತಿ ಅಭಿಪ್ರಾಯ ವ್ಯಕ್ತಪಡಿಸಿದರು.

-ವಿ.ರಾಜ್ ಗೋಪಾಲ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.