ADVERTISEMENT

ನೀರಿನ ಸಮಸ್ಯೆ ಪರಿಹಾರ: ತಾತ್ಸಾರ ಬೇಡ

ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ತ್ರಿಲೋಕಚಂದ್ರ ಸೂಚನೆ

​ಪ್ರಜಾವಾಣಿ ವಾರ್ತೆ
Published 12 ಏಪ್ರಿಲ್ 2017, 5:03 IST
Last Updated 12 ಏಪ್ರಿಲ್ 2017, 5:03 IST

ಕೋಲಾರ: ‘ನೀರಿನ ಸಮಸ್ಯೆ ಬಗೆಹರಿ ಸುವಲ್ಲಿ ತಾತ್ಸರ ಬೇಡ. ಎಚ್ಚರಿಕೆಯಿಂದ ಕೆಲಸ ಮಾಡಿ. ಪ್ರತಿ ಗ್ರಾಮಕ್ಕೂ ಭೇಟಿ ಕೊಟ್ಟು ಸಮಸ್ಯೆ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಪಡೆಯಬೇಕು’ ಎಂದು ಜಿಲ್ಲಾಧಿಕಾರಿ ಡಾ.ಕೆ.ವಿ.ತ್ರಿಲೋಕಚಂದ್ರ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕುಡಿಯುವ ನೀರು ಮತ್ತು ಮೇವಿನ ಸಮಸ್ಯೆ ಸಂಬಂಧ ನಗರದಲ್ಲಿ ಮಂಗಳವಾರ ನಡೆದ ಸಭೆಯಲ್ಲಿ ಮಾತನಾಡಿದ ಅವರು, ‘ಜಿಲ್ಲೆಯಲ್ಲಿ ನೀರು ಮತ್ತು ಮೇವಿನ ಸಮಸ್ಯೆ ಉಲ್ಬಣವಾಗುತ್ತಿರುವ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರು ಬಂದಿವೆ’ ಎಂದರು.

‘ನೀರು ಮತ್ತು ಮೇವಿನ ಸಮಸ್ಯೆ ಇರುವ ಗ್ರಾಮಗಳಿಗೆ ನಿಯಮಿತವಾಗಿ ಭೇಟಿ ನೀಡಿ ಪರಿಶೀಲನೆ ಮಾಡಬೇಕು. ಜತೆಗೆ ಸಮಸ್ಯೆ ಪರಿಹರಿಸುವ ಬಗ್ಗೆ ಮಾಹಿತಿ ಕೊಡಬೇಕು. ನೋಡಲ್‌ ಅಧಿಕಾರಿಗಳು ಪ್ರತಿ ಹೋಬಳಿಗೆ ತೆರಳಿ ಮೇವು ಲಭ್ಯತೆ ಬಗ್ಗೆ ಗ್ರಾಮ ಲೆಕ್ಕಾಧಿಕಾರಿಗಳಿಂದ ಮಾಹಿತಿ ಕಲೆ ಹಾಕಬೇಕು.

ಮೇವು ಬೆಳೆಯುವಂತೆ ರೈತರನ್ನು ಉತ್ತೇಜಿಸಬೇಕು. ಮೇವು ಕಿಟ್‌ಗಳಿಗೆ ಬೇಡಿಕೆಯಿದ್ದರೆ ಹಾಲು ಒಕ್ಕೂಟ ಮತ್ತು ಪಶುಸಂಗೋಪನಾ ಇಲಾಖೆಗೆ ತಿಳಿಸಿ ರೈತರಿಗೆ ಕಿಟ್‌ಗಳನ್ನು ಪೂರೈಸಬೇಕು’ ಎಂದು ತಿಳಿಸಿದರು.

ಅಭಿಯಾನ ಸ್ಥಗಿತ: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಿ.ಬಿ.ಕಾವೇರಿ ಮಾತನಾಡಿ, ‘ಕಾಲು ಬಾಯಿ ಜ್ವರ ನಿಯಂತ್ರಣಕ್ಕಾಗಿ ಜಿಲ್ಲೆಯಲ್ಲಿ ಲಸಿಕೆ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಆದರೆ, ಅಭಿಯಾನ ಸ್ಥಗಿತಗೊಂಡಿದೆ. ಇದಕ್ಕೆ ಕಾರಣವೇನು’ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದರು.

ಇದಕ್ಕೆ ಉತ್ತರಿಸಿದ ಪಶುಪಾಲನಾ ಮತ್ತು ಪಶುವೈದ್ಯ ಸೇವಾ ಇಲಾಖೆ ಉಪ ನಿರ್ದೇಶಕ ಡಾ.ಚನ್ನಕೇಶವಯ್ಯ, ‘ಇಲಾಖೆಯ ಸಿಬ್ಬಂದಿ ಪ್ರತಿಭಟನೆ ನಡೆಸುತ್ತಿರುವುದರಿಂದ ಅಭಿಯಾನ ಸ್ಥಗಿತಗೊಂಡಿದೆ. ಸಿಬ್ಬಂದಿ ಬುಧವಾರ (ಏ.12) ಸಂಜೆಯೊಳಗೆ ಪ್ರತಿಭಟನೆ ವಾಪಸ್‌ ಪಡೆಯುವ ಸಾಧ್ಯತೆ ಇದ್ದು, ಗುರುವಾರದಿಂದ ಅಭಿಯಾನ ಸಮ ರ್ಪಕವಾಗಿ ನಡೆಯುತ್ತದೆ’ ಎಂದರು.

ಇದರಿಂದ ಅಸಮಾಧಾನಗೊಂಡ ಕಾವೇರಿ, ‘ನೀವು ನೀಡುತ್ತಿರುವ ಉತ್ತರ ಸರಿಯಿಲ್ಲ. ಈ ರೀತಿ ಮಾತನಾಡಬೇಡಿ. ಯಾವುದೇ ಲಸಿಕೆ ಅಭಿಯಾನವನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸ ಬೇಕು. ಕೆಲಸ ಮಾಡುವ ಆಸಕ್ತಿ ಇಲ್ಲದಿ ದ್ದಾಗ ನಮ್ಮಿಂದ ಗ್ರಾಮ ಪಂಚಾಯಿತಿ ಗಳಿಗೆ ಏಕೆ ಪತ್ರ ಬರೆಸಿದಿರಿ. ಸಮರ್ಪಕ ವಾಗಿ ಅಭಿಯಾನ ನಡೆಸಿ ಶುಕ್ರವಾರ ದೊಳಗೆ ಮಾಹಿತಿ ಕೊಡಬೇಕು’ ಎಂದು ಚನ್ನಕೇಶವಯ್ಯ ಅವರನ್ನು ತರಾಟೆಗೆ ತೆಗೆದುಕೊಂಡರು.

ಸಮಸ್ಯೆ ಎದುರಾಗಿದೆ: ‘ಶ್ರೀನಿವಾಸಪುರ ತಾಲ್ಲೂಕಿನ ನೀಲಟೂರು, ಇರಗಾನಪಲ್ಲಿ, ಮುದಿಮಡಗು, ಮುಳಬಾಗಿಲು ತಾಲ್ಲೂಕಿನ ಕಪ್ಪಲಮಡಗು, ಮಾಲೂರು ತಾಲ್ಲೂಕಿನ ಮಾಸ್ತಿ ಮತ್ತು ಹುಳದೇನ ಹಳ್ಳಿ, ಬಂಗಾರಪೇಟೆ ತಾಲ್ಲೂಕಿನ ಬೊಮ್ಮಗಾನಹಳ್ಳಿ ಹಾಗೂ ಬನಹಳ್ಳಿ ಗ್ರಾಮದಲ್ಲಿ ನೀರಿನ ಸಮಸ್ಯೆ ಎದು ರಾಗಿದೆ. ಈ ಗ್ರಾಮಗಳಿಗೆ ಖಾಸಗಿ ಕೊಳವೆ ಬಾವಿ, ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ.

ಮತ್ತೆ ಕೆಲ ಗ್ರಾಮಗಳಲ್ಲಿ ಕೊಳವೆ ಬಾವಿ ಕೊರೆಸಿ ಸಮಸ್ಯೆ ಬಗೆಹರಿಸಲಾಗುತ್ತದೆ’ ಎಂದು ಗ್ರಾಮೀಣ ಕುಡಿಯುವ ನೀರು ವಿಭಾಗದ ಕಾರ್ಯಪಾಲಕ ಎಂಜಿನಿಯರ್ ಮಂಜುನಾಥ್ ಮಾಹಿತಿ ನೀಡಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ವಿದ್ಯಾ ಕುಮಾರಿ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಲಕ್ಷ್ಮೀನಾರಾಯಣ, ಉಪ ವಿಭಾಗಾಧಿಕಾರಿ ಸಿ.ಎನ್.ಮಂಜುನಾಥ್, ಜಿಲ್ಲಾ ಯೋಜನಾ ನಿರ್ದೇಶಕಿ ರೇಣುಕಾ ಸಭೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT