ADVERTISEMENT

ಪನಸಮಾಕನಹಳ್ಳಿಯಲ್ಲಿ ಸಾಮೂಹಿಕ ದೀಪಾವಳಿ ಆಚರಣೆ

ಆರ್.ಚೌಡರೆಡ್ಡಿ
Published 21 ಅಕ್ಟೋಬರ್ 2017, 7:27 IST
Last Updated 21 ಅಕ್ಟೋಬರ್ 2017, 7:27 IST
ಶ್ರೀನಿವಾಸಪುರ ತಾಲ್ಲೂಕಿನ ಪನಸಮಾಕನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಸಾಮೂಹಿಕ ದೀಪಾವಳಿ ಆಚರಿಸಲಾಯಿತು
ಶ್ರೀನಿವಾಸಪುರ ತಾಲ್ಲೂಕಿನ ಪನಸಮಾಕನಹಳ್ಳಿ ಗ್ರಾಮದಲ್ಲಿ ಶುಕ್ರವಾರ ಸಾಮೂಹಿಕ ದೀಪಾವಳಿ ಆಚರಿಸಲಾಯಿತು   

ಶ್ರೀನಿವಾಸಪುರ: ತಾಲ್ಲೂಕಿನ ಪನಸಮಾಕನಹಳ್ಳಿ ಗ್ರಾಮದಲ್ಲಿ ಶುಕ್ರವಾರ ದೀಪಾವಳಿ ಸಂಭ್ರಮ ಮನೆ ಮಾಡಿತ್ತು. ಗುರುವಾರ ರಾತ್ರಿ ಸುಟ್ಟಿಟ್ಟಿದ್ದ ಕಜ್ಜಾಯ, ನೋಮುದಾರ ಹಾಗೂ ಪೂಜಾ ಸಾಮಗ್ರಿ ತಟ್ಟೆ ಹೊತ್ತ ಗ್ರಾಮಸ್ಥರು ರಾಮ ಮಂದಿರದತ್ತ ಹೆಜ್ಜೆ ಹಾಕಿದರು.

ಶ್ರೀನಿವಾಸಪುರದಿಂದ ಬಂದಿದ್ದ ಅರ್ಚಕರು ರಾಮ ಮಂದಿರದಲ್ಲಿ ನೋಮು ಪೂಜೆಗೆ ಸಿದ್ಧತೆ ಮಾಡಿಕೊಂಡಿದ್ದರು. ಗ್ರಾಮದ ಹಿರಿಯರು, ಯುವಕರು ಪೂಜೆಗೆ ನೆರವಾದರು. ಹಿಂದಿನ ವರ್ಷ ಕಟ್ಟಿ ಬಿಚ್ಚಿಟ್ಟಿದ್ದ ನೋಮುದಾರದ ಗೊಂಚಲುಗಳು ಒಂದೆಡೆ ರಾಶಿ ಬಿದ್ದವು. ಮನೆಗೆ ಒಂದರಂತೆ ತಂದಿದ್ದ ತಟ್ಟೆಗಳಲ್ಲಿ ಹೊಸ ನೋಮುದಾರ ಗೊಂಚಲು ಕಂಗೊಳಿಸುತ್ತಿದ್ದವು.

ಗ್ರಾಮದ ಎಲ್ಲ ಮನೆಗಳಿಂದ ತಟ್ಟೆ ಬಂದಿರುವುದನ್ನು ಖಾತ್ರಿ ಪಡಿಸಿಕೊಂಡ ಹಿರಿಯರು, ಕತೆ ಆರಂಭಿಸುವಂತೆ ಅರ್ಚಕರಲ್ಲಿ ಮನವಿ ಮಾಡಿದರು. ಅರ್ಜಕರು ಆಲದ ಕೊಂಬೆಗೆ ಪೂಜೆ ಸಲ್ಲಿಸಿದ ಬಳಿಕ ಕೇದಾರನಾಥ ವ್ರತದ ಕತೆ ಹೇಳಿದರು. ತಟ್ಟೆ ತಂದಿದ್ದ ಜನ ಕುಳಿತು ಭಕ್ತಿ ಭಾವದಿಂದ ಕತೆ ಕೇಳಿಸಿಕೊಂಡು, ಮಂಗಳಾರತಿ ಬೆಳಗಿದ ನಂತರ ತಟ್ಟೆಗಳನ್ನು ಮನೆಗಳಿಗೆ ಕೊಂಡೊಯ್ದು ಕೈಗೆ ನೋಮುದಾರ ಕಟ್ಟಿಕೊಂಡು ಕಜ್ಜಾಯ ತಿನ್ನುವುದರ ಮೂಲಕ ಹಬ್ಬದ ಸವಿಯನ್ನು ಉಂಡರು.

ADVERTISEMENT

ಸಾಮಾನ್ಯವಾಗಿ ಸಾಮೂಹಿಕ ಪೂಜಾ ಕಾರ್ಯಕ್ರಮ ರಾತ್ರಿ ಹೊತ್ತು ನಡೆಯುತ್ತಿತ್ತು. ಕೃಷಿ ಕೆಲಸದಿಂದ ಸಂಜೆ ಮನೆಗೆ ಹಿಂದಿರುಗುತ್ತಿದ್ದ ಕೃಷಿಕರು ಸ್ನಾನ ಮಾಡಿ ಪೂಜೆಗೆ ಹೋಗುತ್ತಿದ್ದರು. ಆದರೆ ಈಗ ಕಾಲ ಬದಲಾಗಿದೆ. ಬಂದ ನೆಂಟರು ರಾತ್ರಿ ಹೊತ್ತು ಉಳಿಯುವುದು ಅಪರೂಪ. ಈಗ ವಾಹನ ಸೌಕರ್ಯ ಇರುವುದರಿಂದ ಹಾಗೂ ಕೃಷಿಯೇತರ ಕಾರ್ಯಗಳಲ್ಲಿ ನಿರತರಾಗಿರುವುದರಿಂದ ಸಮಯದ ಅಭಾವ ಇರುತ್ತದೆ. ಇದರಿಂದ ಕಳೆದ ಒಂದೆರಡು ವರ್ಷಗಳಿಂದ ಮಧ್ಯಾಹ್ನವೇ ಕಜ್ಜಾಯ ನೋಮಲಾಗುತ್ತಿದೆ

ಕೆರೆ ತುಂಬಿ ಭತ್ತ ಬೆಳೆಯುತ್ತಿದ್ದ ಕಾಲದಲ್ಲಿ, ಈ ಗ್ರಾಮದ ಹಿರಿಯರು ದೀಪಾವಳಿ ಇನ್ನೂ ಒಂದು ವಾರ ಇರುವಾಗಲೇ ರಾಮ ಮಂದಿರದ ಎದುರು ಸಭೆ ಸೇರಿ ಹಬ್ಬ ಆಚರಿಸುವ ಬಗ್ಗೆ ಗ್ರಾಮಸ್ಥರ ಅಭಿಪ್ರಾಯ ಕೇಳುತ್ತಿದ್ದರು. ಹಳ್ಳಿಯ ಯಾವುದಾದರೂ ಒಂದು ಮನೆಯಲ್ಲಿ ಹೆರಿಗೆಯಾಗಿದ್ದರೆ, ಜೀವ ಹಾನಿ ಸಂಭವಿಸಿದ್ದರೆ, ಅಮ್ಮ ಆಗಿದ್ದರೆ ಹಬ್ಬದ ಆಚರಣೆಯನ್ನು ಮುಂದೂಡುತ್ತಿದ್ದರು.

ದೀಪಾವಳಿ ವೆಚ್ಚದಾಯಕ ಹಬ್ಬ ಎಂಬ ಭಾವನೆ ಇದ್ದುದರಿಂದ, ಯಾರಿಗೆ ಭತ್ತ ಇಲ್ಲ ಎಂಬುದನ್ನು ತಿಳಿದುಕೊಂಡು, ಭತ್ತ ಉಳ್ಳವರು ಹಬ್ಬಕ್ಕೆ ಅಗತ್ಯವಾದಷ್ಟು ಭತ್ತ ಉಚಿತವಾಗಿ ನೀಡುತ್ತಿದ್ದರು. ತೀರಾ ಬಡವರಾಗಿದ್ದಲ್ಲಿ ಕೆಲವರು ತಾವೇ ಮುಂದೆ ಬಂದು ಬೆಲ್ಲ, ಎಣ್ಣೆ ತೆಗೆದುಕೊಡುತ್ತಿದ್ದರು.

ಆದರೆ ಕೆರೆಯಲ್ಲಿ ಹೂಳು ತುಂಬಿ ನೀರು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಕಳೆದುಕೊಂಡ ಮೇಲೆ, ಗದ್ದೆ ಬಯಲು ವ್ಯರ್ಥವಾಯಿತು. ಹಾಗಾಗಿ ಗ್ರಾಮದ ಎಲ್ಲರೂ ಅಕ್ಕಿ ಕೊಳ್ಳುವವರಾದರು. ಇದರಿಂದ ಬಡವರಿಗೆ ದೀಪಾವಳಿ ಕೊಡುಗೆ ಪದ್ಧತಿಗೆ ಪೂರ್ಣವಿರಾಮ ಬಿದ್ದಿತು. ವಿಶೇಷವೆಂದರೆ, ಮೂರು ದಶಕಗಳ ಬಳಿಕ ಈ ವರ್ಷ ಗ್ರಾಮದ ಕೆರೆ ತುಂಬಿದೆ.

ಹಿಂದೆ ತಾಲ್ಲೂಕಿನ ಗ್ರಾಮೀಣ ಪ್ರದೇಶದಲ್ಲಿ ಹಬ್ಬಗಳನ್ನು ಸಾಮೂಹಿಕವಾಗಿ ಆಚರಿಸುವುದು ಸಾಮಾನ್ಯವಾಗಿತ್ತು. ರಾಜಕೀಯ ಪ್ರಜ್ಞೆ ಹೆಚ್ಚಿದಂತೆ, ಪಕ್ಷ ರಾಜಕೀಯ ಪ್ರಾರಂಭವಾಯಿತು. ಇದರಿಂದ ಸಾಂಘಿಕ ಆಚರಣೆಗೆ ಅಡ್ಡಿಯಾಯಿತು. ಹಬ್ಬ ಆಚರಿಸುವುದು ಸ್ಥಳೀಯ ರಾಜಕೀಯ ಮುಖಂಡರ ಮರ್ಜಿಗೆ ಹೋಯಿತು. ಸಾಮೂಹಿಕವಾಗಿ ಆಚರಿಸಲಾಗುತ್ತಿದ್ದ ಸಂಕ್ರಾಂತಿ, ದೀಪಾವಳಿ ಹಬ್ಬವನ್ನು ತಮಗೆ ಇಷ್ಟಬಂದಂತೆ ಆಚರಿಸತೊಡಗಿದರು.

ಪನಸಮಾಕನಹಳ್ಳಿ ಎಂಬ ಪುಟ್ಟ ಗ್ರಾಮದಲ್ಲಿ ಕಾಂಗ್ರೆಸ್‌, ಜೆಡಿಎಸ್‌, ಬಿಜೆಪಿ, ಸಿಪಿಎಂ ಪಕ್ಷದ ಬೆಂಬಲಿಗರಿದ್ದಾರೆ. ಆದರೆ ಪಕ್ಷ ರಾಜಕೀಯ ಚುನಾವಣೆ ಸಂದರ್ಭಕ್ಕೆ ಮಾತ್ರ ಸೀಮಿತ. ಗ್ರಾಮದ ಕೆಲಸ, ಹಬ್ಬ ಹರಿದಿನ ಆಚರಣೆಗೆ ಪಕ್ಷ ರಾಜಕೀಯ ಎಂದೂ ಅಡ್ಡಿಯಾಗಿಲ್ಲ. ಜಾತಿ ವ್ಯವಸ್ಥೆಯೂ ಅಡ್ಡಿ ಬಂದಿಲ್ಲ. ಹಿರಿಯ ತಲೆಮಾರಿನ ಬಳುವಳಿಯಾದ ಸಾಂಘಿಕ ಆಚರಣೆ ಕಿರಿಯ ತಲೆಮಾರಿಗೂ ವರ್ಗಾವಣೆ ಆಗಿರುವುದು ಸಂತಸದ ಸಂಗತಿಯಾಗಿದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.