ADVERTISEMENT

ಪ್ರಾಣಿ ಪಕ್ಷಿ ಸಂಕುಲಕ್ಕೆ ಪ್ಲಾಸ್ಟಿಕ್‌ ಕಂಟಕ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2017, 8:48 IST
Last Updated 9 ಸೆಪ್ಟೆಂಬರ್ 2017, 8:48 IST

ಕೋಲಾರ: ‘ಇತ್ತೀಚೆಗೆ ಪ್ಲಾಸ್ಟಿಕ್‌ ವಸ್ತುಗಳ ಬಳಕೆ ಗಣನೀಯವಾಗಿ ಹೆಚ್ಚಿದ್ದು, ಇದರಿಂದ ಪರಿಸರದ ಮೇಲೆ ಪ್ರತಿಕೂಲ ಪರಿಣಾಮವಾಗುತ್ತಿದೆ’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಕೆ.ವಿದ್ಯಾಕುಮಾರಿ ಹೇಳಿದರು.

ಮನ್ವಂತರ ಜನಸೇವಾ ಸಂಸ್ಥೆಯು ನಗರದಲ್ಲಿ ಶುಕ್ರವಾರ ಆಯೋಜಿಸಿದ್ದ ಪರಿಸರ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಪ್ಲಾಸ್ಟಿಕ್ ಮಣ್ಣಿನಲ್ಲೂ ಕರಗುವುದಿಲ್ಲ. ಇದನ್ನು ಸಂಸ್ಕರಿಸುವ ತಂತ್ರಜ್ಞಾನ ಇನ್ನೂ ಅಭಿವೃದ್ಧಿಯಾಗಿಲ್ಲ. ಪ್ಲಾಸ್ಟಿಕ್ ಪ್ರಾಣಿ ಪಕ್ಷಿ ಸಂಕುಲಕ್ಕೂ ಕಂಟಕವಾಗಿದೆ ಎಂದರು.

ಮುಂದಿನ ಪೀಳಿಗೆಗಾಗಿ ಪರಿಸರ ಉಳಿಸಬೇಕು. ಕಾನೂನಿನಿಂದ ಎಲ್ಲಾ ಬದಲಾವಣೆ ತರಲು ಸಾಧ್ಯವಿಲ್ಲ. ಪ್ರತಿಯೊಬ್ಬರೂ ತಮ್ಮ ಮನೆಯಲ್ಲಿ ಪ್ಲಾಸ್ಟಿಕ್ ಬಳಸದಿರಲು ನಿರ್ಧರಿಸಬೇಕು. ಪ್ಲಾಸ್ಟಿಕ್‌ ಬಳಕೆಯಿಂದ ಆಗುವ ಸಮಸ್ಯೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಶಾಲೆಯಲ್ಲಿ ಅರಿವು ಮೂಡಿಸಬೇಕು. ಅದೇ ರೀತಿ ವಿದ್ಯಾರ್ಥಿಗಳು ಪೋಷಕರನ್ನು ಜಾಗೃತಗೊಳಿಸಬೇಕು ಎಂದು ಕರೆ ನೀಡಿದರು.

ADVERTISEMENT

ನಡೆ ಕಷ್ಟ: ಜಿಲ್ಲಾ ಕನ್ನಡ ಉಪನ್ಯಾಸಕರ ವೇದಿಕೆ ಅಧ್ಯಕ್ಷ ಜೆ.ಜಿ.ನಾಗರಾಜು ಮಾತನಾಡಿ, ‘ನುಡಿ ಸುಲಭ, ನಡೆ ಕಷ್ಟ. ನುಡಿದಂತೆ ನಡೆದುಕೊಳ್ಳಬೇಕು. ಮನೆ ಮತ್ತು ಮನಸ್ಸುಗಳಲ್ಲಿ ಪ್ಲಾಸ್ಟಿಕ್ ಬಳಕೆ ನಿಷೇಧ ಆಗಬೇಕು. ಮಾರುಕಟ್ಟೆಗೆ ತೆರಳುವಾಗ ಕಡ್ಡಾಯವಾಗಿ ಬಟ್ಟೆ ಬ್ಯಾಗ್ ತೆಗೆದುಕೊಂಡು ಹೋಗಬೇಕು. ಅಂಗಡಿಯವರು ಪ್ಲಾಸ್ಟಿಕ್ ಬ್ಯಾಗ್‌ ನೀಡಿದರೆ ತಿರಸ್ಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು’ ಎಂದು ಕಿವಿಮಾತು ಹೇಳಿದರು.

‘ಪರಿಸರ ಸ್ವಚ್ಛತೆ ಬಗ್ಗೆ ಮಕ್ಕಳು ಹಾಗೂ ಜನರಿಗೆ ತಿಳಿವಳಿಕೆ ಮೂಡಿಸಬೇಕು. ಮಕ್ಕಳು ಹಿರಿಯರಿಗೆ ಹೇಳಿದರೆ ಮನಸ್ಸಿಗೆ ಬೇಗ ಮುಟ್ಟುತ್ತದೆ. ಎಲ್ಲರೂ ತಿಳಿದುಕೊಳ್ಳುತ್ತಾರೆ. ಪರಿಸರದ ಸ್ವಚ್ಛತಾ ಕಾರ್ಯ ಅವಮಾನವಲ್ಲ. ರಜಾ ದಿನಗಳಲ್ಲಿ ಮಕ್ಕಳು ಸಮಯ ವ್ಯರ್ಥ ಮಾಡುವ ಬದಲು ಇಂತಹ ಕೆಲಸಗಳಲ್ಲಿ ತೊಡಗಿಸಿಕೊಂಡರೆ ಸ್ವಚ್ಛ ನಗರ ನಿರ್ಮಾಣವಾಗುತ್ತದೆ’ ಎಂದು ನಗರಸಭೆ ಅಧ್ಯಕ್ಷೆ ಮಹಾಲಕ್ಷ್ಮಿ ಅಭಿಪ್ರಾಯಪಟ್ಟರು.

ಬಟ್ಟೆ ಬ್ಯಾಗ್‌ ವಿತರಣೆ: ವಿದ್ಯಾರ್ಥಿಗಳು, ವಿವಿಧ ಸಂಘಟನೆಗಳ ಸದಸ್ಯರು ಹಾಗೂ ಪರಿಸರ ಪ್ರೇಮಿಗಳು ಕಾರ್ಯಕ್ರಮಕ್ಕೂ ಮುನ್ನ ಗಾಂಧಿ ವನದಿಂದ ಎಂ.ಜಿ.ರಸ್ತೆ, ತರಕಾರಿ ಮಾರುಕಟ್ಟೆ ಬೀದಿ ಮಾರ್ಗವಾಗಿ ದೊಡ್ಡಪೇಟೆವರೆಗೆ ಜಾಥಾ ನಡೆಸಿ ಪ್ಲಾಸ್ಟಿಕ್ ಬಳಕೆಯಿಂದ ಆಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸಿದರು. ಸಂಸ್ಥೆಯ ಕಾರ್ಯಕರ್ತರು ಸಾರ್ವಜನಿಕರಿಂದ ಪ್ಲಾಸ್ಟಿಕ್ ಚೀಲಗಳನ್ನು ಸಂಗ್ರಹಿಸಿ ಬಟ್ಟೆ ಬ್ಯಾಗ್‌ಗಳನ್ನು ಉಚಿತವಾಗಿ ವಿತರಿಸಿದರು. ಅಲ್ಲದೇ, ಮಹಾತ್ಮಗಾಂಧಿ ಉದ್ಯಾನದಲ್ಲಿ ಸಸಿಗಳನ್ನು ನೆಟ್ಟರು.

ಮನ್ವಂತರ ಜನಸೇವಾ ಸಂಸ್ಥೆ ಅನಂತರಾಮ್, ಜಿಲ್ಲಾ ಶರಣ ಸಾಹಿತ್ಯ ಪರಿಷತ್ ಗೌರವಾಧ್ಯಕ್ಷ ಬಿ.ಎಂ.ಚನ್ನಪ್ಪ, ನಗರಸಭೆ ಮಾಜಿ ಉಪಾಧ್ಯಕ್ಷ ವಿ.ಕೆ.ರಾಜೇಶ್, ರೈತ ಸಂಘ ರಾಜ್ಯ ಘಟಕದ ಕಾರ್ಯದರ್ಶಿ ಶಿವಪ್ಪ, ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಜಿ.ವೀರಭದ್ರಸ್ವಾಮಿ, ನಗರಸಭೆ ಸದಸ್ಯ ಪ್ರಸಾದ್‌ಬಾಬು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.