ADVERTISEMENT

ಬರಪರಿಹಾರ ಕಾಮಗಾರಿ ಕೈಗೊಳ್ಳಿ

ಕರ್ನಾಟಕ ಪ್ರಾಂತ ರೈತ ಸಂಘದಿಂದ ಜ. 11, 12 ರಿಂದ ಅಹೋರಾತ್ರಿ ಧರಣಿ

​ಪ್ರಜಾವಾಣಿ ವಾರ್ತೆ
Published 3 ಜನವರಿ 2017, 7:32 IST
Last Updated 3 ಜನವರಿ 2017, 7:32 IST

ಮುಳಬಾಗಿಲು: ‘ಮಳೆ ಇಲ್ಲದೆ ಬರಗಾಲದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಸಮಸ್ಯೆ ಹೆಚ್ಚಿನ ಗಂಭೀರತೆ ಪಡೆದು ಕೊಳ್ಳುವ ಮುನ್ನ ಸರ್ಕಾರ ತ್ವರಿತವಾಗಿ ರೈತರ ನೆರವಿಗೆ ಬರಬೇಕು’ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಘಟಕದ ಉಪಾಧ್ಯಕ್ಷ ಜೆ.ಸಿ.ಬಯ್ಯಾರೆಡ್ಡಿ ಆಗ್ರಹಿಸಿದ್ದಾರೆ.

ರೈತರ ವಿವಿಧ ಸಮಸ್ಯೆಗಳನ್ನು ಬಗೆಹರಿಸಲು ಒತ್ತಾಯಿಸಿ ಜನವರಿ 11 ಮತ್ತು 12 ರಂದು ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ‘ಅಹೋರಾತ್ರಿ’ ಕುರಿತ ಪ್ರಚಾರ ಆಂದೋಲನ ಕಾರ್ಯಕ್ರಮಕ್ಕೆ ಸೋಮವಾರ  ತಾಲ್ಲೂಕಿನ ಹೆಬ್ಬಣಿ ಗ್ರಾಮದಲ್ಲಿ ಚಾಲನೆ ನೀಡಿ ಮಾತನಾಡಿದರು. ‘ಜಿಲ್ಲೆ ಸತತ ಬರಗಾಲಕ್ಕೆ ತುತ್ತಾಗಿರುವುದು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳಿಗೆ ತಿಳಿದಿದ್ದರೂ ಸೂಕ್ತವಾದ ಪರಿಹಾರ ಕೈಗೊಳ್ಳದೆ ಕಣ್ಣೊರೆಸುವ ತಂತ್ರ ಅನುಸರಿಸುತ್ತಿವೆ. ಬರ ಪರಿಶೀಲನೆ ತಂಡಗಳು ಬಂದು ಹೋಗುತ್ತವೆ. ಇದುವರೆಗೆ ಯಾವುದೇ ಬರ ಪರಿಶೀಲನಾ ತಂಡದ ವರದಿ ಜಾರಿಯಾಗಿಲ್ಲ’ ಎಂದು ದೂರಿದರು.

‘ರೈತರ ಕೃಷಿ ಭೂಮಿಗೆ ಒಂದು ಎಕರೆಗೆ ₹ 25 ಸಾವಿರ ಬೆಳೆ ಪರಿಹಾರ ನೀಡಬೇಕು. ರೈತರ ಕೃಷಿ ಸಾಲ ಮನ್ನಾ ಮಾಡಬೇಕು. ಜಾನುವಾರುಗಳಿಗೆ, ಹಾಲು ಉತ್ಪಾದಕ ಕೇಂದ್ರಗಳಲ್ಲಿ ಮೇವು ಸಬ್ಸಿಡಿ ರೂಪದಲ್ಲಿ ವಿತರಣೆ ಮಾಡಬೇಕು. ಬರಗಾಲದ ಹಿನ್ನೆಲೆಯಲ್ಲಿ ಎಪಿಎಲ್, ಬಿಪಿಎಲ್ ಪಡಿತರ ಚೀಟಿಗಳಿಗೆ ಸಮವಾಗಿ ಪಡಿತರ ವಿತರಿಸಬೇಕು’ ಎಂದು ಆಗ್ರಹಿಸಿದರು.

ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಸೂರ್ಯನಾರಾಯಣ, ಜಿಲ್ಲಾ ಕಾರ್ಯದರ್ಶಿ ವೆಂಕಟೇಶ್, ತಾಲ್ಲೂಕು ಘಟಕದ ಅಧ್ಯಕ್ಷ ಪುಣ್ಯಹಳ್ಳಿ ಶಂಕರ್, ಎಸ್‌ಎಫ್‌ಐ ಜಿಲ್ಲಾ ಗಟಕದ ಅಧ್ಯಕ್ಷ ಕೆ.ವಾಸುದೇವರೆಡ್ಡಿ ಮಾತನಾಡಿದರು.

ಕರ್ನಾಟಕ ಪ್ರಾಂತ ರೈತ ಸಂಘ ಶ್ರೀನಿವಾಸಪುರ ತಾಲ್ಲೂಕು ಘಟಕದ ಅಧ್ಯಕ್ಷ ನವೀನ್, ಸಿಪಿಎಂ ಮುಖಂಡ ನಾಗಿರೆಡ್ಡಿ, ಅಂಬ್ಲಿಕಲ್ ಶಿವಪ್ಪ, ಕೋಡಿಹಳ್ಳಿ ಶ್ರೀನಿವಾಸ್ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.